ಇವತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬ. ಆ ನಿಮಿತ್ತ ಸುದ್ದಿ ಟಿವಿಯಲ್ಲೊಂದು ರಾಜಕೀಯ ಅವಲೋಕನ.
ಕರ್ನಾಟಕ ರಾಜಕಾರಣದಲ್ಲಿ ಈಗ ಒಂದಿಷ್ಟು ಗಂಭೀರವಾದ ಪ್ರಶ್ನೆಗಳು ಕೇಳಿಬರುತ್ತಿವೆ. ಅದರಲ್ಲಿ ಮುಖ್ಯವಾದುದು — ಡಿಕೆ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಹೆಜ್ಜೆ ಇಡಬಹುದೇ? ಅಥವಾ ಪಶ್ಚಿಮ ಬಂಗಾಳದ ಸುವೆಂದು ಅಧಿಕಾರಿ ಮಾದರಿಯಲ್ಲಿ ಪಕ್ಷ ಬದಲಿಸಿ ಅಧಿಕಾರದ ಹೊಸ ಸಮೀಕರಣ ಕಟ್ಟಬಹುದೇ?
ಇದಾಗಲೇ ಬಿಜೆಪಿ ಎನ್ನುವ “ವಾಶಿಂಗ್ ಮಶಿನ್” ಗೆ ಸೇರಿಸಿಕೊಳ್ಳಲು ಇಡಿ ದಾಳಿ ಸೇರಿದಂತೆ ಹಲವು ಒತ್ತಡಗಳ ರಾಜಕಾರಣ ನಡೆದಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಅದೇ ವೇಳೆ ಕಾಂಗ್ರೆಸ್‌ನಲ್ಲೂ ತಮ್ಮ ನಿರೀಕ್ಷೆಯ ಪ್ರಕಾರ ಮುಖ್ಯಮಂತ್ರಿ ಸ್ಥಾನ ಸಿಗದಿರುವ ಅಸಮಾಧಾನ ಡಿಕೆಶಿ ಮನಸ್ಸಿನಲ್ಲಿ ಇರಬಹುದೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮೂಲ ಸಂಘಟನಾ ಕಾರ್ಯಕರ್ತ ಎಂಬ ಹೆಗ್ಗಳಿಕೆ ಡಿಕೆ ಶಿವಕುಮಾರ್ ಅವರದ್ದು. ವಿದ್ಯಾರ್ಥಿ ದೆಸೆಯಿಂದಲೇ ಗುರುತಿಸಿಕೊಂಡಿದ್ದು ಒಂದೇ ಪಕ್ಷ — ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಸಾತನೂರು ಮತ್ತು ಕನಕಪುರ ಕ್ಷೇತ್ರಗಳಲ್ಲಿ ನಿರಂತರ ಗೆಲುವು ಸಾಧಿಸುತ್ತಾ, ತಮ್ಮದೇ ಪ್ರಭಾವ ವಲಯ ಕಟ್ಟಿಕೊಂಡವರು. ರಾಜಕಾರಣದ ಜೊತೆಗೆ ವ್ಯಾಪಾರದಲ್ಲೂ ಯಶಸ್ಸು ಕಂಡಿರುವ ಅವರು, ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು.
ಡಿಕೆಶಿ ಒಬ್ಬ ಬದ್ಧ ರಾಜಕಾರಣಿ. ಜೊತೆಗೆ ಅತ್ಯಂತ ಲೆಕ್ಕಾಚಾರದ ವ್ಯಕ್ತಿ. ಪರಸ್ಪರ ಲಾಭವಿಲ್ಲದೆ ಯಾವುದೇ ರಾಜಕೀಯ ಹೆಜ್ಜೆ ಇಡುವವರಲ್ಲ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿ ಬಲವಾಗಿದೆ.
ಇಂದು ಕಾಂಗ್ರೆಸ್ ಪಕ್ಷದ ಅನೇಕ ರಾಜ್ಯಗಳ ಚುನಾವಣಾ ರಾಜಕಾರಣದಲ್ಲಿ, ವಿಶೇಷವಾಗಿ ಲೋಕಸಭೆ ಚುನಾವಣೆಗಳಲ್ಲಿ, ಪಕ್ಷದ ಆರ್ಥಿಕ ಹೊರೆ ಹೊರುವ ಪ್ರಮುಖ ನಾಯಕರಲ್ಲಿ ಡಿಕೆಶಿಯವರೂ ಒಬ್ಬರು ಎನ್ನುವುದು ಗುಟ್ಟಿನ ವಿಷಯವಲ್ಲ. ಕಾಂಗ್ರೆಸ್ ಹೈಕಮಾಂಡ್ ಸಹ ಅವರ ಸಂಘಟನಾ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟಿದ್ದು, ಕಾಲಕಾಲಕ್ಕೆ ಪ್ರಮುಖ ಸ್ಥಾನಮಾನಗಳನ್ನು ನೀಡಿ ಗೌರವಿಸಿದೆ.
ಆದರೆ ೨೦೨೩ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದು ಕೇವಲ ಡಿಕೆಶಿಯವರ ಸಂಘಟನಾ ಶಕ್ತಿಯಿಂದ ಮಾತ್ರವಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವರ್ಚಸ್ಸು ಮತ್ತು ಅಹಿಂದ ರಾಜಕಾರಣದ ಪ್ರಭಾವವೂ ದೊಡ್ಡ ಪಾತ್ರ ವಹಿಸಿತು. ಈಗ “ಸಿದ್ಧರಾಮಯ್ಯ ಬ್ರಾಂಡ್” ದೊಡ್ಡದಾ ಅಥವಾ “ಡಿಕೆಶಿ ಸಂಘಟನೆ” ದೊಡ್ಡದಾ ಎನ್ನುವ ಅಂತರಂಗ ಪರೀಕ್ಷೆ ನಡೆಯುತ್ತಿದೆ.
ಸದ್ಯದ ಮಟ್ಟಿಗೆ ನೋಡಿದರೆ, ಕಾಂಗ್ರೆಸ್‌ನ ಪ್ರಮುಖ ಮತದಾರ ಸಮೂಹಗಳಾದ ಮುಸ್ಲಿಮರು, ದಲಿತರು ಮತ್ತು ಅಹಿಂದ ವರ್ಗಗಳು ಇನ್ನೂ ಸಿದ್ಧರಾಮಯ್ಯ ಅವರತ್ತ ಹೆಚ್ಚು ಒಲವು ತೋರಿಸುತ್ತಿವೆ. ಅವರ ಬೆಂಬಲದಿಂದ ಗೆದ್ದ ಅನೇಕ ಶಾಸಕರೂ ಸಿದ್ಧರಾಮಯ್ಯ ಪರವಾಗಿದ್ದಾರೆ. ಹೀಗಾಗಿ ಡಿಕೆಶಿಗೆ ಪಕ್ಷ ವಿಭಜನೆ ಮಾಡಿ ಹೊಸ ಸಮೀಕರಣ ನಿರ್ಮಿಸುವುದು ಸುಲಭದ ಕೆಲಸವಲ್ಲ.
ಮೂಲಗಳ ಪ್ರಕಾರ, ಕೆಲವು ತಿಂಗಳುಗಳ ಹಿಂದೆ ಡಿಕೆಶಿ ತಮ್ಮ ಬಲಾಬಲ ಪರೀಕ್ಷಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತದೆ. ತಮ್ಮ ಪ್ರಭಾವ ವಿಸ್ತರಿಸಿಕೊಳ್ಳುವ ಕೆಲಸವೂ ನಿರಂತರವಾಗಿ ನಡೆಯುತ್ತಿದೆ. ಇದೇ ವೇಳೆ ಬಿಜೆಪಿಯೊಂದಿಗೂ ಮಾತುಕತೆ ನಡೆಯುತ್ತಿದೆ ಎನ್ನುವ ರಾಜಕೀಯ ಚರ್ಚೆಗಳೂ ಇವೆ. ಆದರೆ ಇಲ್ಲಿ ಬಿಜೆಪಿ “ಕಾದು ನೋಡುವ” ತಂತ್ರ ಅನುಸರಿಸುತ್ತಿದೆ.
ಏಕೆಂದರೆ, ಈಗಾಗಲೇ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ಪ್ರಭಾವದಲ್ಲಿರುವ ಕರ್ನಾಟಕ ಬಿಜೆಪಿ ಸುಲಭವಾಗಿ ಡಿಕೆಶಿಯವರಿಗೆ ಸಂಪೂರ್ಣ ಒಲಿಯುವುದಿಲ್ಲ. ಒಕ್ಕಲಿಗ ಸಮುದಾಯದ ಸುಮಾರು ೧೨ ಶೇಕಡಾ ಮತಗಳು ಡಿಕೆಶಿಯವರ ಹಿಂದೆ ನಿಂತರೂ, ಲಿಂಗಾಯತ ಸಮುದಾಯ ಸಂಪೂರ್ಣವಾಗಿ ಬೆಂಬಲಿಸುವ ಸಾಧ್ಯತೆ ಕಡಿಮೆ.
ಇದಕ್ಕಾಗಿಯೇ ಡಿಕೆಶಿ ಈಗ ಬ್ರಾಹ್ಮಣ ಮತ್ತು ವೈದಿಕ ಪರಂಪರೆಯ ಮತದಾರರನ್ನು ಪ್ರಭಾವಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ. ಈ ಸಮುದಾಯದ ಮತದಾರರ ಸಂಖ್ಯೆ ಕಡಿಮೆಯಾದರೂ, ಸಮಾಜದ ಅಭಿಪ್ರಾಯ ನಿರ್ಮಾಣದಲ್ಲಿ ಇನ್ನೂ ಪ್ರಭಾವ ಹೊಂದಿದ್ದಾರೆ.
ಒಂದು ಕಡೆ ದೇವಸ್ಥಾನಗಳ ಭೇಟಿ, ಪೂಜೆ, ಹೋಮ-ಹವನಗಳ ಪ್ರಚಾರ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅಲ್ಪಸಂಖ್ಯಾತ ಸಮುದಾಯಕ್ಕೂ ಹತ್ತಿರವಾಗಿರುವ ಸಂದೇಶ ನೀಡುವ ರಾಜಕೀಯ ತಂತ್ರಗಳು ಗೋಚರಿಸುತ್ತಿವೆ. ಇತ್ತೀಚೆಗೆ ಮುಸ್ಲಿಂ ನಾಯಕ ಮೊಹಮ್ಮದ್ ನಳ್ಪಾಡ್ ಅವರಿಂದ ಪತ್ರಿಕೆಗಳಲ್ಲಿ ಪ್ರಕಟವಾದ ಹುಟ್ಟುಹಬ್ಬದ ಶುಭಾಶಯ ಜಾಹೀರಾತುಗಳನ್ನೂ ಇದೇ ಹಿನ್ನೆಲೆಯ ಭಾಗವಾಗಿ ಕೆಲವರು ನೋಡುತ್ತಿದ್ದಾರೆ.
ಹಾಗಾದರೆ ಇಷ್ಟೆಲ್ಲ ರಾಜಕೀಯ ತಂತ್ರಗಳಿದ್ದರೂ ಡಿಕೆಶಿ ಎದುರಿಸುತ್ತಿರುವ ಅಡಚಣೆ ಏನು?
ಪ್ರಮುಖ ಕಾರಣಗಳಲ್ಲಿ ಒಂದು ಅವರ ವ್ಯಕ್ತಿತ್ವ ಎನ್ನುವ ಅಭಿಪ್ರಾಯವೂ ಇದೆ. ಅಧಿಕಾರ ಮತ್ತು ಅಪಾರ ಆರ್ಥಿಕ ಶಕ್ತಿ ಸಹಜವಾಗಿಯೇ ಒಂದು ಠೀವಿ ತರುತ್ತದೆ. ಕೆಲವೊಮ್ಮೆ ಅದು ಇತರರಿಗೆ ಅಹಂಕಾರ ಅಥವಾ ಭಯ ಹುಟ್ಟಿಸುವಂತೆ ಕಾಣಬಹುದು.
ಇದರ ಜೊತೆಗೆ ಧರ್ಮಸ್ಥಳ ಪ್ರಕರಣದ ನಂತರ ಮಹಿಳಾ ಮತದಾರರಲ್ಲಿ ಅವರ ಮೇಲಿನ ಒಲವು ಕಡಿಮೆಯಾಗಿದೆ ಎನ್ನುವ ಚರ್ಚೆಯೂ ರಾಜಕೀಯ ವಲಯದಲ್ಲಿದೆ. ಅಲ್ಪಸಂಖ್ಯಾತರು ಮತ್ತು ಅಹಿಂದ ಮತದಾರರಲ್ಲಿ ಸಂಪೂರ್ಣ ವಿಶ್ವಾಸ ಇನ್ನೂ ನಿರ್ಮಾಣವಾಗಿಲ್ಲ. ಜೆಡಿಎಸ್ ಪರಂಪರೆಯ ಒಕ್ಕಲಿಗ ಮತದಾರರೂ ಸಂಪೂರ್ಣವಾಗಿ ಕಾಂಗ್ರೆಸ್ ಕಡೆ ತಿರುಗಿಲ್ಲ.
ಇದರ ನಡುವೆಯೇ, ಎರಡು ದೋಣಿಗಳ ಮೇಲೆ ಕಾಲಿಟ್ಟು ರಾಜಕೀಯ ತಂತ್ರ ನಡೆಸುತ್ತಿರುವ ವ್ಯಕ್ತಿ ಎಂಬ ಭಾವನೆ ಕಾಂಗ್ರೆಸ್ ಹೈಕಮಾಂಡ್ ಒಳಗೆಯೂ ಇದೆ ಎನ್ನಲಾಗುತ್ತದೆ. ಹೀಗಾಗಿ ಸಂಪೂರ್ಣ ವಿಶ್ವಾಸದಿಂದ ಅಧಿಕಾರ ಹಸ್ತಾಂತರ ಮಾಡಲು ಕಾಂಗ್ರೆಸ್ ಇನ್ನೂ ಸಿದ್ಧವಾಗಿಲ್ಲ.
ಇನ್ನೊಂದು ಕಡೆ, ಬಿಜೆಪಿ ಸೂಕ್ತ ವರ್ಚಸ್ಸಿನ ನಾಯಕತ್ವದ ಕೊರತೆಯಿಂದ ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ ಕುಸಿದು ಸಾಕಷ್ಟು ಕಾಲವಾಗಿದೆ. ಡಿಕೆಶಿಯವರನ್ನು ಕರೆತಂದು ಪೂರ್ಣ ಬೆಂಬಲ ನೀಡಿ ೨೦೨೮ರ ಚುನಾವಣೆಗೆ ಮುಖ ಮಾಡಬೇಕೇ ಎನ್ನುವ ಪ್ರಶ್ನೆ ಬಿಜೆಪಿಯೊಳಗೂ ಇರಬಹುದು. ಆದರೆ ಅಲ್ಲಿ ಕೂಡ ಹಲವು ಭಯಗಳಿವೆ.
ಡಿಕೆಶಿಯವರ ಕಾರ್ಯಕ್ಷಮತೆ, ಎಲ್ಲವನ್ನೂ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಳ್ಳುವ ಶೈಲಿ, ಭವಿಷ್ಯದಲ್ಲಿ ಮತ್ತೊಬ್ಬ ಬಲಿಷ್ಠ ಕೇಂದ್ರೀಕೃತ ನಾಯಕನಾಗುವ ಸಾಧ್ಯತೆ, ಮತ್ತು ಅವರ ವ್ಯಕ್ತಿತ್ವದ ಗತ್ತು — ಇವೆಲ್ಲವೂ ಬಿಜೆಪಿಯೊಳಗಿನ ಅಸ್ತಿತ್ವ ರಾಜಕಾರಣಕ್ಕೆ ಸವಾಲಾಗಬಹುದು.
ಆದ್ದರಿಂದ ಬಿಜೆಪಿ “ವಾಶಿಂಗ್ ಮಶಿನ್” ಡಿಕೆಶಿಯವರನ್ನು ಸೇರಿಸಿಕೊಂಡು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆ ಸದ್ಯಕ್ಕೆ ಸುಲಭವಲ್ಲ. ಇಬ್ಬರಿಗೂ ಲಾಭ ಕಂಡರೂ, ವ್ಯಕ್ತಿಗತ ನಿರೀಕ್ಷೆಗಳು ಮತ್ತು ಪಕ್ಷಗಳ ಒಳರಾಜಕೀಯ ಪರಿಸ್ಥಿತಿಗಳು ಡಿಕೆಶಿಯವರ ಪರ ಸಂಪೂರ್ಣವಾಗಿ ಕೆಲಸ ಮಾಡುತ್ತಿಲ್ಲ.
ಆದರೆ ರಾಜಕಾರಣದಲ್ಲಿ ಶಾಶ್ವತವೆಂಬುದೇ ಇಲ್ಲ. ಒಂದೇ ಒಂದು ದೊಡ್ಡ ರಾಜಕೀಯ ಬದಲಾವಣೆ ಕರ್ನಾಟಕದಲ್ಲೂ ಮತ್ತೊಂದು “ಸುವೇಂದು ಅಧಿಕಾರಿ ಮಾದರಿ” ಉದಾಹರಣೆಗೆ ದಾರಿ ಮಾಡಿಕೊಡಬಹುದು.
ಸದ್ಯಕ್ಕೆ ಅದರ ಸಾಧ್ಯತೆ — ೫೦:೫೦.






