ಶಿವಮೊಗ್ಗ..ಒಂದು ಕಾಲದಲ್ಲಿ ಸಮಾಜವಾದದ ನೆಲ.. ಕಾಗೋಡು ಸತ್ಯಾಗ್ರಹದ ಭೂಮಿ..ಶಾಂತವೇರಿ ಗೋಪಾಲ ಗೌಡ, ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ, ಜೆ.ಎಚ್. ಪಟೇಲ್ ಹೀಗೆ ಸಮಾಜವಾದ ಬೆಳೆ ಬಿತ್ತಿದವರು ಹಲವರು.. ರಾಷ್ಟ್ರ ಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ ಮಾನವೀಯ ಮನಸ್ಸುಗಳನ್ನು ಅರಳಿಸಿದವರು.
ಇಂತಹ ಶಿವಮೊಗ್ಗ 90 ರ ದಶಕದಲ್ಲಿ ಬದಲಾಗತೊಡಗಿತು. ಸಮಾಜವಾದ ಚಳವಳಿ ಹಿನ್ನೆಲೆಗೆ ಸರಿಯತೊಡಗಿತು. ಸಮಾಜವಾದಿ ನಾಯಕರು ಮರೆಯಾಗತೊಡಗಿದರು. ಕೇಸರಿ ಶಿವಮೊಗ್ಗವನ್ನು ಆವರಿಸತೊಡಗಿತು. ಕೇವಲ ಹಿಂದೂ ಮಹಾ ಸಭಾದ ಗಣೇಶೋತ್ಸವಕ್ಕೆ ಸೀಮಿತವಾಗಿದ್ದ ಕೇಸರಿ ರಾಜಕಾರಣವನ್ನು ಬೆಳೆಸಲು ಯತ್ನ ಮಾಡಿದವರು ಹಲವರು.
ರೈತ ಚಳವಳಿ ಅಸ್ತ್ರವನ್ನು ಹಿಡಿದು ಹೊರಟ ಅಂದಿನ ಯುವ ನಾಯಕ ಬಿ.ಎಸ್. ಯಡಿಯೂರಪ್ಪ ಸಂಘ ಪರಿವಾರದ ಕಟ್ಟಾಳು ಆಗಿದ್ದರು. ಅವರ ಪಕ್ಕದಲ್ಲಿ ಕೆ. ಎಸ್. ಈಶ್ವರಪ್ಪ, ಶಂಕರಮೂರ್ತಿ ಇದ್ದರು..
ಯಡಿಯೂರಪ್ಪ ಆಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಬಲವಾಗಿದ್ದ ರೈತ ಚಳವಳಿಯನ್ನು ಬಳಸಿಕೊಳ್ಳತೊಡಗಿದರು.. ಶಿಕಾರಿಪುರದ ರೈಸ್ ಮಿಲ್ ನ ಕೆಲಸಗಾರರಾಗಿದ್ದ ಅವರು ರೈತರ ಹಕ್ಕುಗಳಿಗಾಗಿ ಪ್ರತಿಭಟನೆ ಚಳವಳಿ ಸಂಘಟಿಸತೊಡಗಿದರು.. ಸೈಕಲ್ ಮೂಲಕ ಜನರನ್ನು ಸಂಪರ್ಕಿಸುತ್ತಿದ್ದ ಅವರ ಹೆಗಲ ಮೇಲೆ ಹಸಿರು ಶಾಲು ಇತ್ತು. ಆದರೆ ಆ ಹಸಿರು ಶಾಲಿನ ಮರೆಯಲ್ಲಿ ಇದ್ದುದು ಕೇಸರಿ ಶಾಲು. ಅದು ಮೇಲಕ್ಕೆ ಕಾಣುತ್ತಿರಲಿಲ್ಲ.
1983 ರಲ್ಲಿ ಮೊದಲ ಬಾರಿ ವಿಧಾನ ಸಭೆ ಪ್ರವೇಶಿಸಿದವರುಯಡಿಯೂರಪ್ಪ. ಆಗ ಸದನದಲ್ಲಿ ಘಟಾನಿಘಟಿ ನಾಯಕರಿದ್ದರು. ಎ. ಕೆ. ಸುಬ್ಬಯ್ಯ ಬಿಜೆಪಿ ನಾಯಕರಾಗಿದ್ದರು. ಸದನದ ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಯಡಿಯೂರಪ್ಪ ಆಗಲೇ ಕೇಸರಿ ರಾಜಕಾರಣಕ್ಕೆ ಶಿವಮೊಗ್ಗ ನೆಲವನ್ನು ಹಸನುಗೊಳಿಸುತ್ತಿದ್ದರು. ಕರ್ನಾಟಕದ ರಾಜಕಾರಣದಲ್ಲಿ ಹಸಿರು ಶಾಲು ಮಾಡಿದ ಕ್ರಾಂತಿಕಾರಿ ಬದಲಾವಣೆಯ ಯಶಸ್ಸಿನ ಪಾಲು ಕೇಸರಿ ರಾಜಕಾರಣಕ್ಕೆ ಬಳಕೆಯಾಗುವಂತೆಯೂ ಅವರು ನೋಡಿಕೊಂಡರು.
ಅಷ್ಟರಲ್ಲಿ ಶಿವಮೊಗ್ಗದ ಸಮಾಜವಾದಿ ರಾಜಕಾರಣ ನೇಪಥ್ಯಕ್ಕೆ ಸರಿಯತೊಡಗಿತ್ತು. ಶಾಂತವೇರಿ ಗೋಪಾಲ ಗೌಡರ ನಾಯಕತ್ವ ಇರಲಿಲ್ಲ. ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಪಾಲಾಗಿದ್ದರು. ಜೆ.ಎಚ್.ಪಟೇಲರು ಜನತಾ ರಾಜಕಾರಣದ ಭಾಗವಾಗಿದ್ದರು. ಎಸ್. ಬಂಗಾರಪ್ಪನವರು ಜನತಾ ರಾಜಕಾರಣದಲ್ಲಿ ತಮಗಾದ ಅನ್ಯಾಯದಿಂದ ನೊಂದಿದ್ದರು. ಅವರು ತಾವು ಸಾಗಬೇಕಾದ ರಾಜಕೀಯ ದಾರಿಯ ಹುಡುಕಾಟದಲ್ಲಿದ್ದರು. ಹೀಗೆ ಸಮಾಜವಾದಿ ನಾಯಕರ ಅತಂತ್ರ ಸ್ಥಿತಿ ಮತ್ತು ಅಧಿಕಾರ ಕೇಂದ್ರಿತ ರಾಜಕಾರಣ ಕೇಸರಿ ರಾಜಕಾರಣವನ್ನು ಎಲ್ಲೆಡೆ ಹಬ್ಬಿಸಲು ಯಡಿಯೂರಪ್ಪ ಅವರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಯಡಿಯೂರಪ್ಪ ಸಂಘದ ಕಾಲಾಳುವಾಗಿದ್ದರೂ ನೋಡುವುದಕ್ಕೆ ರೈತ ನಾಯಕರಂತೆ ಕಾಣುತ್ತಿದ್ದರು. ಸಂಘ ಪರಿವಾರದ ಕೋಮು ರಾಜಕಾರಣದ ದೃವೀಕರಣಕ್ಕೆ ಅವರು ಯತ್ನ ನಡೆಸುತ್ತಿದ್ದಾರೆ ಎಂದು ಅನ್ನಿಸುತ್ತಿರಲಿಲ್ಲ. ಅವರು ರೈತರ ಪರವಾಗಿ ಆಡುತ್ತಿದ್ದ ಮಾತುಗಳು ನಡೆಸುತ್ತಿದ್ದ ಹೋರಾಟ ಕೂಡ ಸಂಘ ಪರಿವಾರದ ಅಜೆಂಡಾವನ್ನು ಅನುಷ್ಟಾನಗೊಳಿಸುವ ಹುನ್ನಾರವಿತ್ತು..
ಸಮಾಜವಾದಿ ಚಳವಳಿಯ ಕೊನೆಯ ಕೊಂಡಿಯಂತೆ ಇದ್ದವರು ಬಂಗಾರಪ್ಪ. ಕಾಂಗ್ರೆಸ್ ಪಕ್ಷ ಸೇರಿ ಮುಖ್ಯಮಂತ್ರಿಯಾದ ಮೇಲೆ ಅವರು ರೂಪಿಸಿದ ಹಲವು ಯೋಜನೆಗಳು ಸಮಾಜವಾದಿ ಸಿದ್ದಾಂತದ ಭಾಗವೇ ಆಗಿತ್ತು. ವಿಶ್ವ, ಆರಾಧನಾದಂತಹ ಯೋಜನೆಗಳು ಜನಪರವಾದ ಯೋಜನೆಗಳೇ ಆಗಿದ್ದವು. ಆದರೆ ರಾಜ್ಯದ ಮಾಧ್ಯಮ ಎಸ್ ಬಂಗಾರಪ್ಪ ಅವರ ಪರವಾಗಿ ಇರಲಿಲ್ಲ. ಮಾಧ್ಯಮಗಳು ಬಂಗಾರಪ್ಪ ನಿಂತರೂ ತಪ್ಪು ಕುಳಿತರೂ ತಪ್ಪು ಎಂಬಂತೆ ಟೀಕಿಸತೊಡಗಿದವು. ಕಾಂಗ್ರೆಸ್ ಹೈಕಮಾಂಡ್ ಕೂಡ ಸ್ವಾಭೀಮಾನಿ ಬಂಗಾರಪ್ಪನವರನ್ನು ಸಹಿಸಿಕೊಳ್ಳಲಿ ಸಿದ್ಧವಿರಲಿಲ್ಲ. ಬಂಗಾರಪ್ಪನವರ ಸ್ವಾಭಿಮಾನ, ನೇರವಂತಿಕೆ, ಸಮಾಜವಾದಿ ನಂಬಿಕೆ ಅವರಿಗೆ ಉರುಳಾಯಿತು. ಆಗಲೇ ಬಂಗಾರಪ್ಪನವರು ರಾಜಕೀಯವಾಗಿ ದಾರಿ ತಪ್ಪತೊಡಗಿದ್ದರು. ಅವರ ಅಲದಾಟದ ರಾಜಕಾರಣ ಪ್ರಾರಂಭವಾಗಿದ್ದು ಆಗಲೇ.
ಹಲವು ಪಕ್ಷಗಳನ್ನು ಬದಲಿಸಿದರು. ತಮ್ಮದೇ ಪಕ್ಶ ಕಟ್ಟಿದರು. ಕೊನೆಗೆ ಸಮಾಜವಾದಿ ನಂಬಿಕೆಯನ್ನು ಕೈಬಿಟ್ಟು ಹೆಗಲ ಮೇಲೆ ಕೇಸರಿ ಶಾಲು ಹಾಕಿಕೊಂಡು ಕೋಮು ರಾಜಕಾರಣದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಹುಡುಕಾಡತೊಡಗಿದರು. ಅಲೇಮಾರಿ ರಾಜಕಾರಣ ಅವರನ್ನು ಕುಸಿಯುವಂತೆ ಮಾಡಿತ್ತು.
ಬಂಗಾರಪ್ಪ ಅವರ ಕೊನೆಯ ದಿನಗಳು. ಆಗ ಯಡಿಯೂರಪ್ಪ ಶಿವಮೊಗ್ಗ ರಾಜಕಾರಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟಿದ್ದರು. ಅವರ ಜೊತೆಗೆ ಈಶ್ವರಪ್ಪ ಮತ್ತು ಶಂಕರಮೂರ್ತಿ. ಕೇಸರಿ ರಾಜಕಾರಣವನ್ನು ವ್ಯಾಪಾರ ಒಹಿವಾಟಿನಂತೆ ನಡೆಸತೊಡಗಿದವರು ಈ ಮೂವರೇ.
ಈಗ ಶಿವಮೊಗ್ಗ ಕೇಸರಿ ರಾಜಕಾರಣದ ನೆಲೆವೀಡು. ಇದು ಬದಲಾಗುತ್ತದೆಯೆ ? ಈ ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜಕುಮಾರ್ ಗೆಲ್ಲಬಹುದೆ ? ಈ ಮೂಲಕ ಶಿವಮೊಗ್ಗ ರಾಜಕಾರಣ ಬದಲಾಗಬಹುದೆ ? ಸಮಾಜವಾದಿ ನೆಲದಲ್ಲಿ ಮತ್ತೆ ಸಮಾಜವಾದ ಜಿಗುರಬಹುದೆ ?
