Shiroor landslide: ಮೃತಪಟ್ಟ ಅರ್ಜುನ್ ದೇಹ ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ಯಶಸ್ವಿ: ಸಿಎಂ ಸಿದ್ದರಾಮಯ್ಯ

CM Siddaramaiah: ಉತ್ತರ ಕನ್ನಡ ಜಿಲ್ಲೆಯಲ್ಲಿನ ಶಿರೂರು ಭೂಕುಸಿತದಲ್ಲಿ ಅರ್ಜುನ್ ಮತ್ತು ಲಾರಿ ರಸ್ತೆ ಪಕ್ಕದಲ್ಲಿದ್ದ ನದಿಗೆ ಬಿದ್ದಿದ್ದು ನಾಪತ್ತೆಯಾಗಿತ್ತು. ವೇಣುಗೋಪಾಲ್ ಅವರು ಶೋಧಕಾರ್ಯವನ್ನು ಮುಂದುವರೆಸಲು ಸೂಚಿಸಿದ್ದರು

ಕ್ಯಾಲಿಕಟ್ (ಕೇರಳ): ಶಿರೂರಿನ ಭೂ ಕುಸಿತದಲ್ಲಿ ಮೃತಪಟ್ಟಿದ್ದ ಕೇರಳದ ಅರ್ಜುನ್ ಅವರ ದೇಹ ಹಾಗೂ ಲಾರಿಯನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ಕೇರಳದ ಕ್ಯಾಲಿಕಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿನ ಶಿರೂರು ಭೂಕುಸಿತದಲ್ಲಿ ಅರ್ಜುನ್ ಮತ್ತು ಲಾರಿ ರಸ್ತೆ ಪಕ್ಕದಲ್ಲಿದ್ದ ನದಿಗೆ ಬಿದ್ದಿದ್ದು ನಾಪತ್ತೆಯಾಗಿತ್ತು. ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಅವರು ಶೋಧಕಾರ್ಯವನ್ನು ಮುಂದುವರೆಸಲು ಸೂಚಿಸಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾರ್ಯಾಚರಣೆಯ ಆರಂಭದಲ್ಲಿ ಅರ್ಜುನ್ ಸೇರಿದಂತೆ ನದಿಪಾಲಾಗಿದ್ದ ಪ್ರತಿಯೊಬ್ಬರನ್ನೂ ರಕ್ಷಿಸುವುದು ನಮ್ಮ ಆದ್ಯತೆಯಾಗಿತ್ತು. ಆದರೆ ವೇಗವಾಗಿ ಹರಿಯುತ್ತಿದ್ದ ನೀರು, ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಗಿ ಪರಿಣಮಿಸಿತ್ತು. ದುರಾದೃಷ್ಟವಶಾತ್ ರಕ್ಷಿಣಾಕಾರ್ಯ ಕೈಗೂಡಲಿಲ್ಲ, ದುರ್ಘಟನೆಯಲ್ಲಿ ಎಲ್ಲರೂ ಸಾವಿಗೀಡಾದರು. ಈ ಬಗ್ಗೆ ನನಗೂ ಬೇಸರವಿದೆ ಎಂದರು.

ಒಂದಷ್ಟು ಮೃತದೇಹಗಳನ್ನು ಈ ಹಿಂದೆಯೇ ಹೊರತೆಗೆದಿದ್ದೆವು, ಇಂದು ಅಂತಿಮವಾಗಿ ಮಣ್ಣಿನಡಿ ಸಿಲುಕಿದ್ದ ಲಾರಿಯ ಸಹಿತ ಚಾಲಕನ ಮೃತದೇಹ ಹೊರತೆಗೆಯಲಾಗಿದೆ. ಮಾನವೀಯ ನೆಲೆಯಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್‌ನ ಮೃತದೇಹವನ್ನು ಅವರ ಊರಿಗೆ ತಲುಪಿಸುವ ಕಾರ್ಯವನ್ನು ನಮ್ಮ‌ ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

Author

error: