ಬೆಂಗಳೂರು : ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆ ಹುದ್ದೆ ಖಾಲಿ ಇಲ್ಲ ಎಂದು ನಾನು ಹೇಳಿದ್ದೇನೆ. ಅದು ವಾಸ್ತವ. ಏನಿದೆಯೋ ಅದನ್ನು ಹೇಳಿದ್ದೇನಷ್ಟೆ. ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ಸಿನಲ್ಲಿ ಯಾವ ಗೊಂದಲವೂ ಇಲ್ಲ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ. ಗೊಂದಲವಿರುವುದು ಸುದ್ದಿ ಮಾಧ್ಯಮಗಳಲ್ಲಿ ಮಾತ್ರ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ, ಜಾತಿಗಣತಿ ವರದಿ ಇತ್ಯಾದಿ ಯಾವ ಸಮಸ್ಯೆಗಳೂ ಪಕ್ಷದಲ್ಲಿ ಇಲ್ಲ. ಇವೆಲ್ಲವೂಗಳ ಬಗ್ಗೆಯೂ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಲಿದೆ. ಸೋಮವಾರ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಕೂಡ ಸುರ್ಜೇವಾಲಾ ಇದನ್ನೇ ಸ್ಪಷ್ಟವಾಗಿ ಹೇಳಿದ್ದಾರೆ. ಸಚಿವರಾದ ಡಾ ಜಿ ಪರಮೇಶ್ವರ್‌ ಹಾಗೂ ರಾಜಣ್ಣ ಕಾರಣಾಂತರಗಳಿಂದ ಸಭಗೆ ಬಂದಿರಲಿಲ್ಲವಷ್ಟೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಜಕಾರಣ ಕುರಿತು ಡಿ.ಕೆ.ಶಿವಕುಮಾರ್‌ ಮತ್ತು ಸತೀಶ್‌ ಜಾರಕಿಜೊಳಿ ಮಧ್ಯೆ ಯಾವ ಜಗಳವೂ ಆಗಿಲ್ಲ. ಎಲ್ಲರೂ ಕೂಡಿಯೇ ಪಕ್ಷದ ಕಚೇರಿ ನಿರ್ಮಿಸಿದ್ದಾರೆ ಎಂದೇ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಾತಿಗಣತಿ ವರದಿಯನ್ನು ನಾನು ಯಾವತ್ತೂ ವಿರೋಧಿಸಿಲ್ಲ. ಆದರೆ, ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಹೇಳುತ್ತ ಬಂದಿದ್ದೇನೆ. ಏಕೆಂದರೆ, ಲಿಂಗಾಯತರಲ್ಲೇ ಬೇರೆಬೇರೆ ಉಪಪಂಗಡಗಳು ಬೇರೆಬೇರೆ ರೀತಿ ನಮೂದಿಸಿದೆ. ಇಷ್ಟಕ್ಕೂ ವರದಿಯಲ್ಲೇನಿದೆ ಎಂದು ಯಾರೂ ನೋಡಿಲ್ಲ. ಆದರೆ, ವೀರಶೈವ ಮಹಾಸಭಾದವರು ವರದಿಯನ್ನು ವಿರೋಧಿಸುತ್ತಿದ್ದರೆ ಅಂತಹ ಹಕ್ಕು ಅದಕ್ಕಿದೆ. ಸುರ್ಜೇವಾಲಾ ಕೂಡ ಯಾವೊಂದು ಸಮುದಾಯಕ್ಕೂ ನೋವಾಗದಂತೆ ನಾವು ನಡೆದುಕೊಳ್ಳಬೇಕು ಎಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ನಾನು ಕಣ್ಣಿಟ್ಟಿಲ್ಲ. ಕೈಗಾರಿಕಾ ಸಚಿವನಾಗಿ ನಾನು ನನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ರಾಜಕೀಯದಲ್ಲಿ ನನಗೆ ಸಹಜವಾದ ಆಸೆ ಇದೆಯೇ ವಿನಾ ದುರಾಸೆಯಂತೂ ಇಲ್ಲ ಎಂದು ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಗುತ್ತಿಗೆದಾರರ 30 ಸಾವಿರ ಕೋಟಿ ರೂ. ಬಿಲ್‌ ಪಾವತಿ ನನೆಗುದಿಗೆ ಬೀಳಲು ಹಿಂದಿನ ಬಿಜೆಪಿ ಸರಕಾರವೇ ಕಾರಣ. ಅವರು ಯಾವ ಅನುಮತಿಯೂ ಇಲ್ಲದೆ 2 ಲಕ್ಷ ಕೋಟಿ ರೂ. ಮೊತ್ತದ ಗುತ್ತಿಗೆ ಕಾಮಗಾರಿ ಶುರು ಮಾಡಿದ್ದರು. ಹೀಗಾಗಿ 35 ಸಾವಿರ ಕೋಟಿ ರೂ. ಪಾವತಿಯೇ ಆಗಿರಲಿಲ್ಲ. ಆ ಹೊರೆ ನಮ್ಮ ಸರಕಾರದ ಮೇಲೆ ಬಿತ್ತು ಎಂದು ಅವರು ವಿವರಿಸಿದ್ದಾರೆ.

Author

Leave a Reply

Your email address will not be published. Required fields are marked *