ಬೆಂಗಳೂರು, ಜೂನ್ 29: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಅಭೂತಪೂರ್ವವಾಗಿ ನೆರವೇರಿತು.ಸಮಾರಂಭದ ಆರಂಭದಲ್ಲಿ ಹಿಮಾಲಯದ ಯೋಗಿ ಸ್ವಾಮಿರಾಮ್ ಅವರ ಭಾವಚಿತ್ರವನ್ನು ಅನಾವರಣ ಮಾಡಲಾಯಿತು. ನಂತರ ʼಹಿಮಾಲಯದ ಯೋಗಿಗಳ ಸನ್ನಿಧಿಯಲ್ಲಿ ಶ್ವಾಸಗುರುʼ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.ವಿಶ್ವ ಮಟ್ಟದಲ್ಲಿ ಯೋಗದಲ್ಲಿ ಸಾಧನೆ ಮಾಡಿದ ಉಕ್ರೇನ್ ಮೂಲದ ಸತಿ ಮಾತಾ, ಉತ್ತರ ಪ್ರದೇಶದ ಡಾ. ಯೋಗ ಋಷಿ ವಿಶ್ವಕೇತು, ಗೋವಾದ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದ ಆಚಾರ್ಯ ಸ್ವಾಮೀಜಿ, ಲಡಾಕ್‌ನ ಪೂಜ್ಯ ಬಿಕ್ಕು ಸಂಗಸೇನ ಅವರಿಗೆ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಸಂತೋಷ್ ಲಾಡ್ ಫೌಂಡೇಶನ್ ಮುಖ್ಯಸ್ಥರಾದ ಸಂತೋಷ್ ಲಾಡ್ ಅವರು, ಶ್ವಾಸ ಯೋಗ ಸಂಸ್ಥೆಯೊಂದಿಗೆ ಎರಡನೇ ಬಾರಿ ಈ ಪ್ರಶಸ್ತಿ ಸಮಾರಂಭ ಆಯೋಜಿಸಿದ್ದೇವೆ. ಕಳೆದ ಬಾರಿ ಬಳ್ಳಾರಿಯಲ್ಲಿ ಆಯೋಜಿಸಲಾಗಿತ್ತು. ಯೋಗದಲ್ಲಿ ಅಪೂರ್ವವಾದ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವುದು ಅತ್ಯಂತ ಸಂತಸದ ವಿಷಯ. ಇಂತಹ ಹಲವಾರು ಕಾರ್ಯಗಳನ್ನು ನಮ್ಮ ಫೌಂಡೇಶನ್ ಮಾಡ್ತಾ ಬರುತ್ತಿದೆ ಎಂದು ಹೇಳಿದರು. ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ವತಿಯಿಂದ ಟಿ ವಿ ನಿರೂಪಕರಾದ ದಿವ್ಯಶ್ರೀ, ಶರ್ಮಿತಾ ಶೆಟ್ಟಿ, ಪ್ರಭು ಬಸವರಾಜ ಹಾದಿಮನಿ, ವಿದ್ಯಾ ಮಲ್ನಾಡ್, ವಿಜಯ್ ವೀರಪ್ಪ, ರಂಜಿತ್ ಸಿರಿಯಾರ, ಕಾವ್ಯ ವಿವೇಕ್, ಪ್ರಗತಿ ಜಯರಾಂ, ಅವಿನಾಶ್ ಶಿವಣ್ಣ, ಪ್ರಮೋದ್ ಆರ್ ಗಾಣಿಗ ಅವರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯೋಗ ಹಾಗೂ ಫಿಟ್ನೆಟ್ ಕುರಿತು ಅರಿವು ಮೂಡಿಸುತ್ತಿರುವ ಇನ್‌ಪ್ಲುಯೆನ್ಸರ್‌ಗಳಾದ ಕಾವ್ಯ ಶಾಸ್ತ್ರಿ, ಭೂಮಿಕಾ ದೇಶಪಾಂಡೆ, ವಿದ್ಯಾ ಪಿ ಎಸ್, ಶಶಿರೇಖಾ, ಲತಾ ಶ್ರೀ, ವಿವೇಕ್ ಮಾಚಯ್ಯ, ರೂಪೇಶ್, ಸಂದೀಪ್ ದೇವಾಡಿಗ, ಭರತ್ ಗೌಡ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.ವಿಶೇಷ ವಿಭಾಗದಲ್ಲಿ ಮಹಾಂತೇಶ್ ಜಿ ಕಿವದಾಸನ್ನವರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೀಪ್ತಿ ಬಾಬು, ಕಾವ್ಯ ಎನ್ಆರ್, ಲೋಮೇಶ್, ರಾಘವೇಂದ್ರ ಹೆಚ್ ಎಸ್,ಮಾಲಿನಿ ರೆಡ್ಡಿ, ಜಗ್ಜೀತ್ ಕೌರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶ್ವಾಸಯೋಗ ಪೀಠದ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿ, ಸುತ್ತೂರು ಮಠ, ಸಿದ್ದಗಂಗಾ, ನಿಡಸೋಶಿ, ಪೇಜಾಮಠದ ಸ್ವಾಮೀಜಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬಿ ಎಲ್ ಸಂತೋಷ್, ರಾಜ್ಯದ ಹಲವಾರು ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಹಿರಿಯ ಪತ್ರಕರ್ತರು, ಯೋಗಾಸಕ್ತರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.