ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಬಾಪೂಜಿ ಎಜುಕೇಶನಲ್ ಅಸೋಸಿಯೇಷನ್ ಸ್ಥಾಪಕ ಶಾಮನೂರು ಶಿವಶಂಕರಪ್ಪ ನಿಧನ. ಅವರ ರಾಜಕೀಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳ ಸಮಗ್ರ ಶ್ರದ್ಧಾಂಜಲಿ. (16 ಜೂನ್ 1931 – 14 ಡಿಸೆಂಬರ್ 2025)

ದಾವಣಗೆರೆ, ಡಿ.15: ನವದಾವಣಗೆರೆ ನಿರ್ಮಾತೃ, ಕೊಡುಗೈ ದಾನಿ, ಸರಳ, ಸಜ್ಜನ ರಾಜಕಾರಣಿ, ಶಿಕ್ಷಣ ತಜ್ಞ, ಉದ್ಯಮಿ, ಸಮಾಜಸೇವಕ ಶಾಮನೂರು ಶಿವಶಂಕರಪ್ಪ ಇನ್ನು ನೆನಪು ಮಾತ್ರ. ಅವರು ನಿನ್ನೆ ಡಿ.೧೪ರಂದು ತಮ್ಮ ೯೪ನೇ ವಯಸ್ಸಿನಲ್ಲಿ ವಿವಿಧ ಅಂಗವೈಫಲ್ಯದಿಂದ ನಿಧನರಾದರು. ತಾವು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು, ಉದ್ದಿಮೆಗಳ ಸಾವಿರಾರು ಫಲಾನುಭವಿಗಳ ಕೃತಜ್ಞತೆಗಳನ್ನು ಹೊತ್ತು ಬಾರದ ಊರಿಗೆ ತೆರಳಿದರು.

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದ ಕಟ್ಟಾಳು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸೋಲರಿಯರಿದ ಸರದಾರನಂತೆ ನಿರಂತರವಾಗಿ ಆಯ್ಕೆಯಾದವರು. ತಮ್ಮ ಮೂರು ದಶಕಗಳಿಗೂ ಹೆಚ್ಚು ಕಾಲದ ಶಾಸಕತ್ವ ಇದ್ದಾಗ್ಯೂ ಯಾವತ್ತೂ ಅಧಿಕಾರಕ್ಕಾಗಿ ಹಪಹಪಿಸಿದವರಲ್ಲ. ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿ ಪಕ್ಷವನ್ನು ಮುನ್ನಡೆಸಿದವರು. ಬೇರೆ ಪಕ್ಷಗಳಲ್ಲಿ ತಮ್ಮ ಸಂಬಂಧಿಕರಿದ್ದಾಗಿಯೂ ಪಕ್ಷನಿಷ್ಠೆ ಅವರ ಗುರುತಾಗಿತ್ತು.

ಶಾಮನೂರು ಶಿವಶಂಕರಪ್ಪ ಸಾದರ ಲಿಂಗಾಯತರು. ಅವರು ಪಂಚಪೀಠಗಳಿಗೆ ಬದ್ಧರಾಗಿದ್ದವರು. ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯ ಕೂಗೆದ್ದಾಗ ಅದು ಸರಿಯಲ್ಲ, ವೀರಶೈವ, ಲಿಂಗಾಯತ ಬೇರೆಯಲ್ಲ, ಒಂದೇ ಎಂದು ಪ್ರತಿಪಾದಿಸಿದ್ದರು. ತಮ್ಮ ಸಮುದಾಯ ಮತ್ತು ಅದರ ಏಳಿಗೆಗೆ ಇದ್ದ ಅವರ ಬದ್ಧತೆ ಸಮುದಾಯದ ಮುಖಂಡರನ್ನಾಗಿಸಿತು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಶಾಮನೂರು ಶಿವಶಂಕರಪ್ಪ ರಾಜಧಾನಿ ಬೆಂಗಳೂರಿನಿಂದ ದೂರವಿರುವ ದಾವಣಗೆರೆಯೆಂಬ ಅರೆಮಲೆನಾಡು ಊರಿಗೆ ಉನ್ನತ ಶಿಕ್ಷಣವನ್ನು ಪರಿಚಯಿಸಿ ಹೊಸ ಶಿಕ್ಷಣ ಕ್ರಾಂತಿಗೆ ಕಾರಣರಾದವರು. ಬಾಪೂಜಿ ಶಿಕ್ಷಣ ಸಂಸ್ಥೆಗಳ ಮೂಲಕ ಆ ಭಾಗದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ದೇಶ, ವಿದೇಶಗಳ ವಿದ್ಯಾರ್ಥಿಗಳಿಗೂ ವೈದ್ಯಕೀಯ, ಎಂಜನಿಯರಿಂಗ್ , ನರ್ಸಿಂಗ್, ಫಾರ್ಮಸಿ, ಪದವಿ ಹಾಗೂ ತಾಂತ್ರಿಕ ಶಿಕ್ಷಣ ತಲುಪುವಂತೆ ಮಾಡಿದರು.

ಉದ್ಯಮಿಯಾಗಿ ಸಕ್ಕರೆ ಕಾರ್ಖಾನೆ, ಡಿಸ್ಟಿಲ್ಲರಿ ಫಾಕ್ಟರಿ, ಬಟ್ಟೆ ಗಿರಣಿಗಳು ಮತ್ತು ಕೆಲವು ಕಾಲ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶಾಮನೂರ್ ದಾವಣಗೆರೆ ಡೈಮಂಡ್ಸ್ ಒಡೆತನವನ್ನು ಹೊಂದಿದ್ದರು. ಚಲನಚಿತ್ರ ಕ್ಷೇತ್ರದಲ್ಲೂ ನಿರ್ಮಾಪಕರಾಗುವ ಯತ್ನ ಮಾಡಿದ್ದರು.

ಕ್ರಿಯಾಶೀಲ, ಉಜ್ವಲ ಸಮಾಜಸೇವಾಕರ್ತ, ದೂರದರ್ಶಿ ಉದ್ಯಮಿ ಇಂದು ಅಗಲಿದ್ದಾರೆ. ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಲೀನವಾಗಿದೆ. ಪ್ರಸ್ತುತ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ತೋಟಗಾರಿಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರನ್ನು ಸೇರಿದಂತೆ ಮೂವರು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣುಮಕ್ಕಳನ್ನು ಅವರು ಅಗಲಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಶಿಕ್ಷಣ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಜೀವನ ಪಯಣ, ಸೇವಾಭಾವ ಮತ್ತು ಶಿಕ್ಷಣದ ಮೇಲಿನ ನಂಬಿಕೆ ಮುಂದಿನ ತಲೆಮಾರಿಗೆ ದಾರಿದೀಪವಾಗಲಿದೆ.

Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

By Sheela Bhat

ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

Leave a Reply

Your email address will not be published. Required fields are marked *