ಸಂಪಾದಕೀಯ: ಟಿಕೆಟ್ ಕಳೆದುಕೊಂಡ ಉಗ್ರ ಹಿಂದುತ್ವವಾದಿ, ಮೋದಿ ರಾಜಕಾರಣಕ್ಕೆ ಬಲಿಯಾದ ಅನಂತ ಮಾಣಿ ಎಂಬ ವಿಷ,

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ. ಅದು ಹಲವು ಉಗ್ರಗಾಮಿ ಹಿಂದುತ್ವವಾದಿಗಳನ್ನು ಹುಟ್ಟಿ ಹಾಕಿತು. ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಬಂದವರು ಹಾರಿಸಿದ್ದು ಕೋಮು ಧ್ವೇಷದ ಧ್ವಜವನ್ನು.
ಆಗ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ಇದು ಬೇಕಾಗಿತ್ತು..ಸಮಾಜದಲ್ಲಿ ಶಾಂತಿ ಸಮಾಧಾನ, ಸೌಹಾರ್ದತೆ ಇದ್ದರೆ ರಾಜಕೀಯ ಬೆಳೆಯುವುದಿಲ್ಲ. ರಾಜಕೀಯಕ್ಕೆ ಹುಲುಸಾದ ಪ್ರಸ್ತ ಭುಮಿ ಬೇಕು. ಅದಕ್ಕೆ ಗೊಬ್ಬರ ಹಾಕಿ ಬೆಳೆಸಬೇಕು. ಹಾಗೆ ಬೆಳೆಸಿದ ಕಾರ್ಯಕರ್ತರಲ್ಲಿ ಅನಂತಕುಮಾರ್ ಹೆಗಡೆ ಒಬ್ಬರು.

ಸಿರ್ಸಿಯ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹೆಗಡೆ, ಅನಂತ ಮಾಣಿ. ಹವ್ಯಕರ ಕುಟುಂಬದ ಮಾಣಿ. ಅವರ ಅಪ್ಪ ಕಾಂಗ್ರೆಸ್ಸಿಗ.. ಆದರೆ ಈ ಮಾಣಿ ಆಗಲೇ ತಲೆಯಲ್ಲಿ ತುಂಬಿಕೊಂಡಿದ್ದು ಹಿಂದುತ್ವ. ಈ ಹಿಂದುತ್ವ ಹಿಂದೂ ಧರ್ಮದ ಮೇಲಿನ ಪ್ರೀತಿಯಿಂದ ನಂಬಿಕೆಯಿಂದ ಹುಟ್ಟಿದ್ದಲ್ಲ. ಅದು ಹುಟ್ಟಿದ್ದು ಮುಸ್ಲಿಂ ಧ್ವೇಷದಿಂದ..

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಮೂಲಕ ಧ್ವೇಷ ರಾಜಕಾರಣವನ್ನು ಪ್ರಾರಂಭಿಸಿದ ಅವರಿಗೆ ಪಕ್ಕದಲ್ಲಿ ಭಟ್ಕಳವಿತ್ತು. ಭಟ್ಕಳದ ನವಾಯಿತು ಮುಸ್ಲೀಂ ರಿದ್ದರು.. ಸ್ವಲ್ಪ ಮಟ್ಟಿಗೆ ಆಗ್ರೇಸ್ಸೀವ್ ಆಗಿದ್ದ ನವಾಯಿತರ ಮುಸ್ಲೀಂರ ವಿರುದ್ಧ ತಮ್ಮ ಧರ್ಮ ಮತ್ತು ರಾಜಕೀಯವನ್ನು ಬಳಸಲು ಪ್ರಾರಂಭಿಸಿದ ಅನಂತಕುಮಾರ್ ಹೆಗಡೆ ಬಹುಬೇಗ ಜನಪ್ರಿಯತೆ ಪಡೆಯತೊಡಗಿದರು. ಜೊತೆಗೆ ಅವರ ಮಾತುಗಾರಿಕೆ. ಹೆಗಡೆ ತಮ್ಮ ಭಾಷಾ ಪಾಂಡಿತ್ಯವನ್ನು ಒಂದು ಅಸ್ತ್ರವನ್ನಾಗಿ ಬಳಸತೊಡಗಿದರು.. ಕೋಮು ಧ್ವೇಷವನ್ನು ಉತ್ತರ ಕನ್ನಡದಲ್ಲಿ ಬಿತ್ತತೊಡಗಿದರು.. ಅದು ಅವರಿಗೆ ಫಲ ನೀಡತೊಡಗಿತು.

ಚುನಾವಣೆ ಬಂದಾಗ ಸಾಮಾಜಿಕ ಜಾಲ ತಾಣವನ್ನು ವಾಟ್ಶ್ ಅಪ್ ಅನ್ನು ತಮಗೆ ಬೇಕಾದ ಹಾಗೆ ಬಳಸಿಕೊಂಡ ಮೊದಲಿಗರಲ್ಲಿ ಅನಂತಕುಮಾರ್ ಹೆಗಡೆ ಪ್ರಮುಖರು. ಅರಬ್ ದೇಶಗಳಲ್ಲೋ ಅಫಘಾನಿಸ್ತಾನ, ಪಾಕಿಸ್ಥಾನದಲ್ಲೋ ಯಾವುದೋ ಉಗ್ರಗಾಮಿ ಸಂಘಟನೆಗಳು ನಡೆಸಿದ ನರಮೇಧದ ವಿಸ್ಯುವಲ್ಸ್ ಅನ್ನು ಅವರು ಭಾರತದಲ್ಲಿ ನಡೆದಿದ್ದು ಎಂದು ಪ್ರಚಾರ ಮಾಡಲು ಪ್ರಾರಂಭಿಸಿದರು.. ಹೀಗೆ ಬಹುಸಂಖ್ಯಾತ ಹಿಂದೂಗಳ ಭಾವನಾತ್ಮಕ ಜಗತ್ತಿಗೆ ದಾಳಿ ಮಾಡಿ ಅವರನ್ನು ತಮ್ಮವರನ್ನಾಗಿ ಮಾಡಿಕೊಂಡರು..ಇದು ಅವರು ಚುನಾವಣೆ ಗೆಲ್ಲಲು ಸಹಕಾರಿಯಾಗತೊಡಗಿತು.. ಅವರು ಚುನಾವಣೆಯ ಮೇಲೆ ಚುನಾವಣೆ ಗೆಲ್ಲತೊಡಗಿದರು.

ಅವರೆಂದೂ ಉತ್ತರ ಕನ್ನಡದ ಅಭಿವೃದ್ಧಿಯ ಬಗ್ಗೆ ಮಾತನಾಡಲಿಲ್ಲ. ಹೊಸ ಹೊಸ ಯೋಜನೆಗಳ ಕನಸು ಕಾಣಲಿಲ್ಲ. ಜಿಲ್ಲೆಯಲ್ಲಿ ಕನಿಷ್ಟ ಹೈಟೆಕ್ ಆಸ್ಪತ್ರೆ ಬೇಕು ಎಂಬ ಇಲ್ಲಿನ ಜನರ ಬೇಡಿಕೆಗೆ ಕಿವಿ ಕೊಡಲಿಲ್ಲ. ಗುಡ್ದ ಗಾಡು ಮತ್ತು ಕರಾವಳಿಯ ಜಿಲ್ಲೆಯಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಿಲ್ಲ. ಇಲ್ಲಿನ ಕಾಡನ್ನು ಉಳಿಸುವ ಬಗ್ಗೆ ಯೊಚಿಸಲಿಲ್ಲ. ಇಲ್ಲಿನ ಅಡಿಕೆ ಬೆಳೆಗಾರರ ಸಮಸ್ಯೆ ಅವರನ್ನು ಕಾಡಲಿಲ್ಲ. ಹಿಂದುತ್ವದ ರಾಜಕಾರಣ ತಮಗೆ ಜಯವನ್ನು ತಂದುಕೊಡುತ್ತದೆ, ನನಗೆ ಅಷ್ಟು ಸಾಕು ಎಂದು ನಂಬಿದವರು ಅನಂತಕುಮಾರ್ ಹೆಗಡೆ.

ಮೋದಿ ಸರ್ಕಾರದಲ್ಲಿ ಸಚಿವರಾದರೂ ಅವರು ಬದಲಾಗಲಿಲ್ಲ. ದೇಶದ ಸಂವಿಧಾನವನ್ನೇ ಬದಲಿಸುವ ಮಾತನಾಡಿದರು..ಅಂಬೇಡ್ಕರ್ ಬಗ್ಗೆ ಅವರಿಗೆ ಯಾವ ಗೌರವವೂ ಇರಲಿಲ್ಲ. ಗೋಡ್ಸೆವಾದದ ಆರಾಧಕರಾದ ಅವರು ಸಾಧ್ವಿ ಪ್ರಜ್ನಾ ಸಿಂಗ್ ಅವರ ಕರ್ನಾಟಕದ ಪ್ರತಿನಿಧಿಯಂತೆ ವರ್ತಿಸತೊಡಗಿದರು. ಅವರ ಈ ರಾಜಕಾರಣ ಬಿಜೆಪಿಗೆ ರಾಜಕೀಯ ಲಾಭವನ್ನು ತಂದುಕೊಟ್ಟಿದ್ದು ನಿಜ.. ಆದರೆ ಮೋದಿ ಮತ್ತು ಅಮಿತ್ ಷಾ ಅವರ ರಾಜಕಾರಣದ ಮೂಲ ಸೆಲೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅನಂತಕುಮಾರ್ ಹೆಗಡೆ ವಿಫಲರಾಗತೊಡಗಿದರು.. ಇವರಿಬ್ಬರಿಗೆ ಹಿಂದುತ್ವ ಕೇವಲ ಒಂದು ರಾಜಕೀಯ ಅಸ್ತ್ರ ಮಾತ್ರ ಆಗಿತ್ತು. ಅದನ್ನೂ ಮೀರಿದ ನಡವಳಿಕೆಯ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ಜೊತೆಗೆ ಸಂವಿಧಾನ ಬದಲಾವಣೆಯ ಮಾತುಗಳು ಪಕ್ಷಕ್ಕೆ ಅಪಾಯಕಾರಿಯಾಗಬಹುದು ಎಂಬ ಅರಿವು ಅವರಿಗಿತ್ತು. ಆದರೆ ಈ ಹುಂಬ ಹೆಗಡೆಗೆ ಈ ಅರಿವು ಇರಲಿಲ್ಲ.

ಅವರು ತಮ್ಮ ಈ ಪ್ರಖರ ಹಿಂದುತ್ವ ಈ ಬಾರಿಯೂ ರಾಜಕೀಯ ಲಾಭವನ್ನು ತಂದುಕೊಡುತ್ತದೆ ಎಂದು ನಂಬಿದ್ದರು. ಆದರೆ ಮೋದಿ ಮತ್ತು ಅಮಿತ್ ಷಾ ಅವರು ಪ್ರಖರ ಹಿಂದುತ್ವವಾದಿಗಳು ಈ ಬಾರಿ ಲಾಭವನ್ನು ತಂದುಕೊಡುವುದಕ್ಕೆ ಬದಲಾಗಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದುಕೊಂಡಿದ್ದರು. ಹೀಗಾಗಿ ಹಲವು ಪ್ರಖರ ಹಿಂದುತ್ವವಾದಿಗಳನ್ನು ಚುನಾವಣಾ ರಾಜಕಾರಣದಿಂದ ದೂರವಿಡುವ ತೀರ್ಮಾನಕ್ಕೆ ಬಂದಿದ್ದರು. ಈ ತೀರ್ಮಾನದ ಭಾಗವಾಗಿಯೇ ಕಟೀಲು, ಪ್ರತಾಪ ಮೊದಲಾದವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಪ್ರಜ್ನಾ ಸಿಂಗ್ ಅವರಂತವರು ಟಿಕೆಟ್ ಕಳೆದುಕೊಂಡಿದ್ದರು.

ಈಗ ಸುಮಾರು ಒಂದೆರಡು ವಾರಗಳ ಹಿಂದೆಯೇ ಅನಂತಕುಮಾರ್ ಹೆಗಡೆ ಅವರಿಗೆ ತಮಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ವಾಸನೆ ಬರತೊಡಗಿತ್ತು. ಅವರು ಬೆಳೆದ ಸಂಘ ಪರಿವಾರ ಕೂಡ ಎನೂ ಮಾಡುವಂತಿರಲಿಲ್ಲ.
ಅನಂತಕುಮಾರ್ ಹೆಗಡೆ ಟಿಕೆಟ್ ಕಳೆದುಕೊಳ್ಳುವುದರೊಂದಿಗೆ ಕರ್ನಾಟಕದ ಕೋಮು ರಾಜಕಾರಣದ ಇನ್ನೊಂದು ಪುಟ ತಿರುಗಿದೆ, ಉಗ್ರಗಾಮಿ ಹಿಂದುತ್ವದ ಪ್ರತಿಪಾದಕರು ತೆರೆಯ ಮರೆಯಲ್ಲಿ ರಾಜಕಾರಣ ಮತ್ತು ಸಾಮಾಜಿಕ ಶಾಂತಿಯ ಕದಡುವ ಕೆಲಸ ಮಾಡಬೇಕಾಗಿದೆ. ತೆರೆಯ ಮರೆಯಲ್ಲಿ ನಡೆಸುವ ಇಂತಹ ಕೋಮುವಾದಿ ರಾಜಕಾರಣಕ್ಕೆ ಬಿಜೆಪಿಯ ಬೆಂಬಲ ಹಿಂದಿನಿಂದ ಇದ್ದೇ ಇರುತ್ತದೆ.

Author

error: