ಮೋದಿ ಬ್ರಿಗೇಡ್ ಮೂಲಕ ಹಿಂದುತ್ವದ ಪ್ರಚಾರ ಕಾರ್ಯ ನಡೆಸುವ ಚಕ್ರವರ್ತಿ ಸೂಲಿಬೆಲೆ ಚುನಾವಣಾ ರಾಜಕೀಯಕ್ಕೆ ಇಳಿಯುತ್ತಾರೆಯೆ? ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನಾಗಿ ಟಿಕೆಟ್ ಗೆ ಬೇಡಿಕೆ ಸಲ್ಲಿಸುವುದಿಲ್ಲ. ಬಿಜೆಪಿ ವರಿಷ್ಠರು ಅವರಾಗಿಯೇ ಟಿಕೆಟ್ ನೀಡಿದರೆ ಕೆನರಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಚುನಾವಣಾ ರಾಜಕೀಯಕ್ಕೆ ಇಳಿಯುವ ತಮ್ಮ ಬಯಕೆಯನ್ನು ಬಹಿರಂಗ ಪಡಿಸಿದ್ದಾರೆ.
ಮೋದಿಯವರ ಗುಣಗಾನವನ್ನೇ ಪೂರ್ಣಪ್ರಮಾಣದ ವೃತ್ತಿಯಾಗಿಸಿಕೊಂಡಿರುವ ಸೂಲಿಬೆಲೆ ಸದಾ ಟ್ರೋಲ್ ಗೆ ಒಳಗಾಗಿರುತ್ತಾರೆ. ಮೋದಿ ಗುಣಗಾನ ಮಾಡುವ ಭರದಲ್ಲಿ ಸತ್ಯ ಮತ್ತು ಸುಳ್ಳಿನ ವ್ಯತ್ಯಾಸವನ್ನೇ ಅವರು ಮರೆಯುತ್ತಾರೆ ಎನ್ನುವುದು ಆರೋಪ.
ಕೆನರಾ ಕ್ಷೇತ್ರದ ಸಂಸತ್ ಸದಸ್ಯ ಅನಂತ ಕುಮಾರ ಹೆಗಡೆಯವರಿಗೆ ಈ ಬಾರಿ ಟಿಕೆಟ್ ಸಿಗುವ ಸಂಭವ ಕಡಿಮೆ. ಹೀಗಾಗಿ ಉತ್ತರಕನ್ನಡ ಮೂಲದವರೇ ಆಗಿರುವ ಸೂಲಿಬೆಲೆ ತಮ್ಮದೂ ಇರಲಿ ಎಂಬಂತೆ ಟವೆಲ್ ಹಾಕಿ ಕಾಯುತ್ತಾರೆ.
