ಕೊನೆಗೂ ಬಹುಮತ ಪಡೆದ ವಿಜಯ್: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಜ್ಜು

ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಬೆಂಬಲ ಲಭಿಸಿದ್ದು, ೧೨೧ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ದಾರಿ ಸುಗಮವಾಗಿದೆ.

ಚೆನ್ನೈ, ಮೇ ೯: ತಮಿಳುನಾಡಿನ ರಾಜಕೀಯದಲ್ಲಿ ಕಳೆದ ನಾಲ್ಕು ದಿನಗಳಿಂದ ಮುಂದುವರಿದಿದ್ದ ಅಧಿಕಾರ ಗ್ರಹಣದ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಕಾಂಗ್ರೆಸ್ ಹಾಗೂ ಇತರ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಸಜ್ಜಾಗಿದ್ದು, ನಾಳೆ ಬೆಳಿಗ್ಗೆ ೧೦ ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

೨೦೨೬ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನಗಳಾದರೂ ರಾಜ್ಯದಲ್ಲಿ ಇನ್ನೂ ಸರ್ಕಾರ ರಚನೆಯಾಗಿರಲಿಲ್ಲ. ಈಗಾಗಲೇ ಮೂರು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರೂ, ಬಹುಮತದ ಬೆಂಬಲ ಪತ್ರ ಸಲ್ಲಿಕೆಯಾಗದೇ ಇರುವ ಕಾರಣ ಪ್ರಮಾಣವಚನಕ್ಕೆ ಆಹ್ವಾನ ದೊರೆತಿರಲಿಲ್ಲ.

ಒಂದು ಹಂತದಲ್ಲಿ ಡಿಎಂಕೆ ಮೈತ್ರಿ ಪಕ್ಷಗಳ ಬೆಂಬಲ ಸಿಗದಿದ್ದರೆ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜಕೀಯವಾಗಿ ದೂರ ಇಡುವುದಾಗಿ ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದ ನಟ ವಿಜಯ್ ಅವರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದೀಗ ಆ ರಾಜಕೀಯ ಸಂಕಟಕ್ಕೆ ಪರಿಹಾರ ದೊರೆತಿದೆ.

ಬಹುಮತಕ್ಕಾಗಿ ಹೋರಾಡುತ್ತಿರುವ ವಿಜಯ್ ಅವರ ರಾಜಕೀಯ ಪಯಣವನ್ನು ಪ್ರತಿನಿಧಿಸುವ ಸಾಂಕೇತಿಕ ಚಿತ್ರ
ಸರ್ಕಾರ ರಚನೆಗಾಗಿ ನಡೆದ ರಾಜಕೀಯ ಹೋರಾಟದ ನಡುವೆ ಬಹುಮತದತ್ತ ಸಾಗುತ್ತಿರುವ ವಿಜಯ್ ಅವರ ಸಾಂಕೇತಿಕ ಚಿತ್ರಣ

ಡಿಎಂಕೆ ಮೈತ್ರಿಯನ್ನು ಮುಂದುವರಿಸಿಕೊಂಡಿರುವ ಎಡಪಕ್ಷಗಳು, ಮುಸ್ಲಿಂ ಲೀಗ್ ಹಾಗೂ ಟಿಸಿಕೆ ಪಕ್ಷಗಳು ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿವೆ. ಜೊತೆಗೆ ಕಾಂಗ್ರೆಸ್‌ನ ಐದು ಶಾಸಕರ ಬೆಂಬಲವೂ ವಿಜಯ್ ಅವರಿಗೆ ಲಭ್ಯವಾಗಿದೆ. ಈ ಮೂಲಕ ವಿಜಯ್ ನೇತೃತ್ವದ ಮೈತ್ರಿಕೂಟವು ಮ್ಯಾಜಿಕ್ ಸಂಖ್ಯೆ ೧೧೮ ಅನ್ನು ದಾಟಿ, ಒಟ್ಟು ೧೨೦ ಶಾಸಕರ ಬೆಂಬಲ ಪಡೆದಿದೆ. ನಿಮಿಷಗಳ ವಿಜಯ್ ಮತ್ತು ರಾಜ್ಯಪಾಲ ರಾಜೇಂದ್ರ ಅರ್ಳೇಕರ್ ನಡುವಿನ ಮಾತುಕತೆಯ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭ ನಾಳೆ ಬೆಳಿಗ್ಗೆ ೧೦ ಗಂಟೆಗೆ ಚೆನ್ನೈನ ನೆಹರು ಸ್ಟೇಡಿಯಂ ನಲ್ಲಿ ನಡೆಯಲಿದೆ. ನಾಳೆ ವಿಜಯ್ ಜೊತೆ ಎಷ್ಟು ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದು ತಿಳಿದುಬಂದಿಲ್ಲ.

ವಿಜಯ್ ಅವರ ಪಕ್ಷ ೧೦೮ ಸ್ಥಾನವನ್ನು ಪಡೆದ ತಕ್ಷಣ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನೆಹರು ಸ್ಟೇಡಿಯಂನ್ನು ಸಜ್ಜುಗೊಳಿಸಲಾಗುತ್ತಿತ್ತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲು ವಿಜಯ್ ಬಯಸಿದ್ದರು. ಆದರೆ ದಿಢೀರ್ ಆಗಿ ಸಮಾರಂಭದ ವ್ಯವಸ್ಥೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಹಾಗೆ ವಿಜಯ್ ಅವರಿಗೆ ನೀಡಿದ ಭದ್ರತಾ ವ್ಯವಸ್ಥೆಯನ್ನು ವಾಪಸ್ ಪಡೆಯಲಾಗಿತ್ತು. ಇಂದು ಬಹುಮತದ ಪತ್ರವನ್ನು ನೀಡಿದ ತಕ್ಷಣ ನೆಹರು ಸ್ಟೇಡಿಯಂ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವ್ಯವಸ್ಥೆಯನ್ನು ಮತ್ತೆ ಪ್ರಾರಂಭಿಸಲಾಯಿತು. ವಿಜಯ್ ಅವರಿಗೆ ಲೋಕಭವನಕ್ಕೆ ಹೋಗುವಾಗಲೇ ವಿಶೇಷ ಪೊಲೀಸ್ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿತ್ತು.

Author

error: