ಭಾರತದಲ್ಲಿ ಮತ್ತೆ ಕ್ಷೇತ್ರ ಪುನರ್ವಿಂಗಡಣೆ (Delimitation) ಚರ್ಚೆ ತೀವ್ರಗೊಂಡಿದೆ. ಈ ಪ್ರಕ್ರಿಯೆಯಿಂದ ದೇಶದ ರಾಜಕೀಯ ಭವಿಷ್ಯವೇ ಬದಲಾಗಬಹುದು ಎಂಬ ಆತಂಕವೂ, ನಿರೀಕ್ಷೆಯೂ ಇದೆ. 2011 ಜನಗಣತಿ ಆಧಾರವಾಗಿ ಕ್ಷೇತ್ರಗಳ ಮರುಹಂಚಿಕೆ ನಡೆದರೆ, ಜನಸಂಖ್ಯೆ ಹೆಚ್ಚು ಇರುವ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಸ್ಥಾನಗಳು ಸಿಗಬಹುದು. ಜನಸಂಖ್ಯೆ ನಿಯಂತ್ರಣದಲ್ಲಿ ಸಾಧನೆ ಮಾಡಿದ ರಾಜ್ಯಗಳ ಪಾಲು ಕಡಿಮೆಯಾಗಬಹುದು. ಅದು ಹೇಗೆ? ಒಂದು ವಿಶ್ಲೇಷಣೆ.
Delimitation/ಕ್ಷೇತ್ರ ಪುನರ್ ವಿಂಗಡಣೆ ಅಂದರೆ ಏನು?
ಮೊಟ್ಟ ಮೊದಲು ಕ್ಷೇತ್ರ ಪುನರ್ ವಿಂಗಡಣೆ ಎಂದರೇನು ಎಂದು ತಿಳಿದುಕೊಳ್ಳಬೇಕು. ಕರ್ನಾಟಕದ ಎಷ್ಟೋ ಮುಗ್ಧ ಮತದಾರರಿಗೆ ಈ ಬಗ್ಗೆ ಸೂಕ್ತ ಅರಿವಿಲ್ಲ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಅವಕಾಶವಿಲ್ಲದಂತೆ “ಮೋದಿ ವಿರೋಧಿ” ಎನ್ನುವ ಮಾತು ಕೇಳಿಬರುತ್ತದೆ. ವಸ್ತುಸ್ಥಿತಿ ಅರ್ಥ ಮಾಡಿಕೊಳ್ಳುವುದು ಇವತ್ತಿನ ಅಗತ್ಯತೆ.
ಕ್ಷೇತ್ರ ಪುನರ್ ವಿಂಗಡಣೆ ಎಂದರೆ ಜನಸಂಖ್ಯೆಯ ಬದಲಾವಣೆಯ ಆಧಾರದ ಮೇಲೆ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರುನಿಗದಿ ಮಾಡುವುದು. ಭಾರತದಲ್ಲಿ ಕೊನೆಯ ದೊಡ್ಡ ಕ್ಷೇತ್ರ ಪುನರ್ವಿಂಗಡಣೆ 2002ರಲ್ಲಿ ನಡೆದಿತ್ತು. ಆದರೆ ರಾಜ್ಯಗಳಿಗೆ ನೀಡಿದ ಒಟ್ಟು ಲೋಕಸಭಾ ಸ್ಥಾನಗಳ ಹಂಚಿಕೆ 1971ರ ಜನಗಣತಿಯ ಆಧಾರದ ಮೇಲೆ ಸ್ಥಗಿತಗೊಳಿಸಲಾಗಿತ್ತು.
ಅಂದರೆ ಹಿಂದೆಯೂ ಕ್ಷೇತ್ರ ಪುನರ್ ವಿಂಗಡಣೆ ನಡೆದಿತ್ತು. ಆದರೆ ಅದು ಬಹಳ ಹಿಂದಿನ ಜನಗಣತಿಯ ಆಧಾರದ ಮೇಲಾಗಿತ್ತು. ಅದರಿಂದ ಯಾರಿಗೂ ದೊಡ್ಡ ಮಟ್ಟದ ಲಾಭ, ನಷ್ಟ, ಅನ್ಯಾಯದ ಪ್ರಶ್ನೆ ಇರಲಿಲ್ಲ.
2011 ಜನಗಣತಿ ಆಧಾರಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?
ಕ್ಷೇತ್ರ ಪುನರ್ ವಿಂಗಡಣೆ ಮಸೂದೆ 2026, ಭಾರತದ ಸಂವಿಧಾನಕ್ಕೆ ಮಾಡುತ್ತಿರುವ 131ನೇ ತಿದ್ದುಪಡಿಯೊಂದಿಗೆ ಪಾಸಾಗಲು ಹೊರಟಿರುವ ಮಸೂದೆ. ಈ ಮಸೂದೆ ಜಾರಿಯಾದರೆ ಕೇಂದ್ರ ಸರಕಾರದಲ್ಲಿ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳು ತಮ್ಮ ಧ್ವನಿಯನ್ನು ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ.
ಹೇಗೆಂದರೆ , ಜನಸಂಖ್ಯೆ ವೇಗವಾಗಿ ಹೆಚ್ಚಿದ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಮಧ್ಯಪ್ರದೇಶ ರಾಜ್ಯಗಳು ಗಣನೀಯವಾಗಿ ಪ್ರಾತಿನಿಧ್ಯ ಪಡೆಯಲಿವೆ. ಶೇ.77ರಷ್ಟು ಪ್ರಾತಿನಿಧ್ಯ ಇವುಗಳು ಸೇರಿದಂತೆ ಉತ್ತರದ ರಾಜ್ಯಗಳದ್ದೇ ಇರಲಿದೆ. ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳ ಜನಪ್ರತಿನಿಧಿಗಳು ಲೋಕಸಭೆಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಾರೆ. ಅವರ ಪ್ರಾತಿನಿಧ್ಯ ಒಟ್ಟೂ ಜನಪ್ರತಿನಿಧಿಗಳಲ್ಲಿ ಕೇವಲ ಶೇ.33 ಇರಲಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂದ್ರ ಪ್ರದೇಶ, ತೆಲಂಗಾಣ ರಾಜ್ಯಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂದಾಗುತ್ತವೆ. ಆಗ ಮೂಡುವೆ ದೊಡ್ಡಪ್ರಶ್ನೆ: ಜನಸಂಖ್ಯೆ ಹೆಚ್ಚಿಸಿದವರಿಗೆ ಬಹುಮಾನವೇ?
ಇಲ್ಲಿ ದಕ್ಷಿಣ ರಾಜ್ಯಗಳ ವಾದ ಏನು ಗೊತ್ತಾ? “ನಾವು ಶಿಕ್ಷಣ, ಆರೋಗ್ಯ, ಕುಟುಂಬ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಅದಕ್ಕೆ ಶಿಕ್ಷೆ ಯಾಕೆ?” ಅಂದರೆ — ಜನಸಂಖ್ಯೆ ಕಡಿಮೆ ಇರುವ ರಾಜ್ಯಗಳಿಗೆ ರಾಜಕೀಯ ಶಕ್ತಿ ಕಡಿಮೆಯಾಗುತ್ತದೆಯೇ? ಇದು ಕೇವಲ ಚುನಾವಣೆ ಪ್ರಶ್ನೆಯಲ್ಲ. ಇದು ಫೆಡರಲಿಸಂ, ಪ್ರಾದೇಶಿಕ ಸಮತೋಲನ, ರಾಜಕೀಯ ನ್ಯಾಯ ಪ್ರಶ್ನೆ.
ಕರ್ನಾಟಕಕ್ಕೆ ಪರಿಣಾಮ ಏನು?
ಕರ್ನಾಟಕ ಇಂದು 28 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಹೊಸ ಹಂಚಿಕೆಯಲ್ಲಿ ಸಂಖ್ಯೆ ಹೆಚ್ಚಾದರೂ, ಒಟ್ಟು ಲೋಕಸಭೆಯಲ್ಲಿ ಅದರ ಶೇಕಡಾವಾರು ಪ್ರಭಾವ ಕಡಿಮೆಯಾಗುವ ಸಾಧ್ಯತೆ ಇದೆ. ಮಸೂದೆಯ ಪ್ರಕಾರ ಕರ್ನಾಟಕಕ್ಕೆ ಶೇ.2 ರಷ್ಟು ನಷ್ಟ ಉಂಟಾಗಲಿದೆ. ಅಂದರೆ ಸ್ಥಾನಗಳು ಸ್ವಲ್ಪ ಹೆಚ್ಚಾದರೂ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ(+13), ಬಿಹಾರ (+10), ರಾಜಸ್ಥಾನ (+8), ದೆಹಲಿ (+5), ಮಧ್ಯಪ್ರದೇಶ (+5) ರಷ್ಟು ಹೆಚ್ಚಾಗಲಿದೆ. ಹಿಂದಿ ಭಾಷಿಗರ ಪ್ರಾತಿನಿಧ್ಯ ಒಂದೆಡೆ ಹೆಚ್ಚಾದರೆ , ದಕ್ಷಿಣದ ಪ್ರಾದೇಶಿಕ ಭಾಷೆಯ ರಾಜ್ಯಗಳ ಪ್ರಾತಿನಿಧ್ಯ ಗಣನೀಯವಾಗಿ ಕಡಿಮೆಯಾಗಲಿದೆ. ತಮಿಳುನಾಡು (-11), ಕೇರಳ (-8) , ಆಂಧ್ರಪ್ರದೇಶ (-5) ಓಡಿಶಾ, ದಾದರ್ & ಹವೇಲಿ, ದಮನ್ & ದಿಯು (-3) ಮತ್ತು ಕರ್ನಾಟಕ (-2) ಆಗಲಿದೆ.
ಒಟ್ಟೂ 850 ಸೀಟುಗಳಲ್ಲಿ ಉತ್ತರದ ರಾಜ್ಯಗಳಿಂದ ಸುಮಾರು 550+ ಸೀಟುಗಳು , ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಿಂದ ಕೇವಲ 250+ ಸೀಟುಗಳು ಸೇರಬಹುದು ಎಂದು ನಿರೀಕ್ಷಿಸಲಾಗಿದೆ. ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮತ್ತು ಬಿಜೆಪಿ ಬೆಂಬಲಿಗರು “ಯಾವುದೇ ರಾಜ್ಯವೂ ನಷ್ಟ ಅನುಭವಿಸುವುದಿಲ್ಲ, ಇದು ಕ್ಷುಲ್ಲಕ ವಿಚಾರ” ಎಂದು ವಾದಿಸಬಹುದು.
ಆದರೆ ಈ ಮಸೂದೆಯ 81(2)(a) ವಿಧಿಯ ಪ್ರಕಾರ ಜನಸಂಖ್ಯಾಧಾರಿತ ಹಂಚಿಕೆ ಕಡ್ಡಾಯವಾಗಿರುತ್ತದೆ ಮತ್ತು ಹೆಚ್ಚಳದಲ್ಲಿ ಸಮಾನ ಏರಿಕೆಯ ಖಚಿತತೆ ಇಲ್ಲ. 131ನೇ ಸಂವಿಧಾನ ತಿದ್ದುಪಡಿಯ ಈ ವಿಧಿಯ ಪ್ರಕಾರ ಅಭಿವೃದ್ಧಿಗೆ, ಸಾಧನೆಗೆ ಬೆಲೆಯಿಲ್ಲ. ಜನಸಂಖ್ಯೆಯೇ ಮೊದಲ ಆದ್ಯತೆ. ಅಂದರೆ ಇತ್ತೀಚಿನ ಜನಗಣತಿ (2011) ಆಧಾರದಲ್ಲೇ ಸೀಟು ಹಂಚಿಕೆಯಾಗುವುದು ನಿಶ್ಚಿತ. ಅಲ್ಲಿಗೆ ಕೇಂದ್ರಸರಕಾರದಲ್ಲಿ ದಕ್ಷಿಣ ರಾಜ್ಯಗಳ ಅಸ್ತಿತ್ವಕ್ಕೆ ಕೊನೆಯ ಮೊಳೆಪೆಟ್ಟು ಬೀಳುವುದು ಖಚಿತ.
ನಾರಿಶಕ್ತಿ ವಂದನ ಅಧಿನಿಯಮ 2023ರ ಥಳಕು
ಇನ್ನು ಕ್ಷೇತ್ರ ಪುನರವಿಂಗಡಣೆ ಮಸೂದೆಯನ್ನು ಪಾಸ್ ಮಾಡಲು ಆಯ್ಕೆ ಮಾಡಿಕೊಂಡ ದಾರಿ. ಇದು ಇನ್ನೂ ಅನುಮಾನಾಸ್ಪದ. 2023ರಲ್ಲೇ ಪಾಸಾದ ನಾರಿಶಕ್ತಿ ವಂದನ ಅಧಿನಿಯಮ ಅಥವಾ ಮಹಿಳಾ ಮೀಸಲಾತಿ ಜಾರಿಗೆ ತರಲು ಕ್ಷೇತ್ರ ಪುನರ್ ವಿಂಗಡಣೆಯಾಗಬೇಕು. ಯಾವ ಕ್ಷೇತ್ರಕ್ಕೆ ಮಹಿಳಾ ಮೀಸಲಾತಿ ಕೊಡಬೇಕು ಎನ್ನುವುದನ್ನು ನಿರ್ಧರಿಸಲು ಕ್ಷೇತ್ರ ಪುನರ್ ವಿಂಗಡಣೆಯಾಗಬೇಕು ಎನ್ನುವುದು ಕೇಂದ್ರದ ವಾದ.
ಅದು ಒಂದು ನಿಟ್ಟಿನಲ್ಲಿ ಸೂಕ್ತ ಕೂಡ. ಆದರೆ ಇದೇ ಸಂದರ್ಭವನ್ನು ತನ್ನ ಬೆಂಬಲಿಗರು ಹೆಚ್ಚಿರುವ ಉತ್ತರದ ರಾಜ್ಯಗಳಲ್ಲಿ ಇನ್ನಷ್ಟು ಪ್ರಬಲವಾಗಲು ಬಳಸುವುದು. ತನಗೆ ಬೆಂಬಲ ನೀಡದ ದಕ್ಷಿಣದವರನ್ನು ಮುಗಿಸುವುದು ಆಡಳಿತ ಪಕ್ಷದ ಹುನ್ನಾರ ಎಂಬ ಆರೋಪವಿದೆ. ಇದು ಸತ್ಯಕ್ಕೆ ದೂರವಾದುದಲ್ಲ.
ಒಂದು ವೇಳೆ ವಿಪಕ್ಷಗಳು ಮಸೂದೆಯನ್ನು ವಿರೋಧಿಸಿದರೆ “ಮಹಿಳಾ ವಿರೋಧಿ” ಎಂಬ ಅಲೆ ಎಬ್ಬಿಸಿ, ಪಂಚರಾಜ್ಯ ಚುನಾವಣೆಯಲ್ಲಿ ಮತ ಗಿಟ್ಟಿಸುವುದು ಮತ್ತು ವಿರೋಧ ಪಕ್ಷಗಳ ಕುರಿತು ಜನವಿರೋಧ ಹೆಚ್ಚಿಸಲು ಬಳಸುವುದು ಒಂದು ಕಾರ್ಯತಂತ್ರವಾದರೆ,
ಮಸೂದೆ ಅಂಗೀಕರಿಸಿದರೆ, ಸದ್ದಿಲ್ಲದೆ ತಮ್ಮ ಪ್ರಾಬಲ್ಯವನ್ನು ಶಾಶ್ವತವಾಗಿ ಹೆಚ್ಚಿಸುವುದು ಮತ್ತು ಆ ಮೂಲಕ ವಿರೋಧಿಗಳ ಹುಟ್ಟಡಗಿಸುವುದನ್ನು ಖಚಿತ ಮಾಡಿಕೊಳ್ಳುವುದು ಎರಡನೆಯ ಕಾರ್ಯತಂತ್ರವಾಗಿತ್ತು.
ವಿಪಕ್ಷಗಳು ಮೊದಲನೆಯದನ್ನು ಆಯ್ಕೆ ಮಾಡಿಕೊಂಡು ವಿರೋಧದ ಅಲೆಯಲ್ಲಿ ಚುನಾವಣೆಗಳನ್ನು ಎದುರಿಸಿವೆ. ಈಗ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಸಹ ಈ ರಾಜ್ಯಗಳ ಮತದಾರ ಯಾರೊಂದಿಗೆ ಇದ್ದಾನೆ ಎಂಬ ಚಿತ್ರಣ ನೀಡಲಿದೆ.
ಮುಂದೇನು?
2026 ರ ಜನಗಣತಿ ಮತ್ತು ನಂತರದ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಭಾರತ ರಾಜಕೀಯದ ದೊಡ್ಡ ತಿರುವಾಗಲಿದೆ. ಇದರಿಂದಾಗಿ ಪ್ರಧಾನಮಂತ್ರಿ ಆಯ್ಕೆಯ ರಾಜಕೀಯ ಗಣಿತ ಬದಲಾಗುತ್ತದೆ. ದಕ್ಷಿಣ vs ಉತ್ತರ ಚರ್ಚೆ ತೀವ್ರವಾಗುತ್ತದೆ. ಕೇಂದ್ರ ಸರ್ಕಾರ ರಚನೆಯಲ್ಲಿ ಉತ್ತರ ಭಾರತದ ಪಾತ್ರ ಇನ್ನಷ್ಟು ಹೆಚ್ಚುತ್ತದೆ.
ಆದ್ದರಿಂದ ಈ ವಿಷಯವನ್ನು ಉತ್ತರ-ದಕ್ಷಿಣ ಜಗಳ ಎಂದು ನೋಡುವುದಕ್ಕಿಂತ, ಮೋದಿ ವಿರೋಧ-ಪರ ಎನ್ನುವುದಕ್ಕಿಂತ, ನ್ಯಾಯವಾದಪ್ರತಿನಿಧಿತ್ವ ಹೇಗೆ ಕೊಡಬೇಕು? ಎಂಬ ಪ್ರಶ್ನೆಯಾಗಿ ನೋಡಬೇಕು. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನು ಹೇಗೆ ಉಳಿಸಬೇಕು ಎನ್ನುವುದು ಆದ್ಯತೆಯಾಗಬೇಕು.
ಭಾರತ ಒಂದು ಕುಟುಂಬವಾದರೆ, ಜನಸಂಖ್ಯೆ ಹೆಚ್ಚು ಇರುವವರಿಗೂ ಧ್ವನಿ ಇರಬೇಕು; ಅಭಿವೃದ್ಧಿ ಸಾಧಿಸಿದವರಿಗೂ ಗೌರವ ಇರಬೇಕು. ಆಗಲೇ ಆಡಳಿತಾರೂಢ ಪಕ್ಷ ತನ್ನ ಮೇಲಿರುವ ಆಪಾದನೆ, ಅನುಮಾನಗಳಿಂದ ಮುಕ್ತವಾಗುವುದು.

