ನವದೆಹಲಿ : ಕಾಂಗ್ರೆಸ್ ಬೆನ್ನು ಬಿದ್ದಿರುವ ವರಮಾನ ತೆರಿಗೆ ಇಲಾಖೆ 1700 ಕೋಟಿ ರೂಪಾಯಿ ತೆರಿಗೆ ನೀಡುವಂತೆ ನೋಟೀಸು ನೀಡಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಕೆಲವು ದಿನಗಳ ಹಿಂದೆ ಆರೋಪ ಮಾಡಿತ್ತು.

ತೆರಿಗೆ ಪುನರ್ ಎಸೆಸ್ ಮೆಂಟ್ ಕುರಿತು ಕಾಂಗ್ರೆಸ್ ದೆಹಲಿಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದಾದ ತಕ್ಷಣ ವರಮಾನ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ಈ ನೋಟಿಸು ನೀಡಿದೆ.
ಚುನಾವಣಾ ಪ್ರಕ್ರ‍ಿಯೆ ಪ್ರಾರಂಭವಾದ ಮೇಲೆ ವರಮಾನ ತೆರಿಗೆ ಇಲಾಖೆ ಕೈಗೊಂಡ ಈ ಕ್ರಮ ಸಾರ್ವಜನಿಕ ಟೀಕೆಗೂ ಕಾರಣವಾಗಿದೆ. ಜೊತೆಗೆ ಅಮೇರಿಕ, ಜರ್ಮನಿ ಮತ್ತು ವಿಶ್ವಸಂಸ್ಥೆ ನಾಗರಿಕ ಹಕ್ಕು ಮತ್ತು ರಾಜಕೀಯ ಹಕ್ಕಿನ ಬಗ್ಗೆ ಭಾರತಕ್ಕೆ ಸಲಹೆಯನ್ನೂ ನೀಡಿದೆ.

ಆದರೆ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ನಂತರವೂ ಯಾವುದೇ ಬದಲಾವಣೆ ಆಗಿಲ್ಲ. ಭಾರತದ ವಿದೇಶಾಂಗ ಇಲಾಖೆ ಈ ಬೆಳವಣಿಗೆಗಳನ್ನು ಆಂತರಿಕ ವಿಚಾರ ಎಂದು ಹೇಳಿದೆ. ಚುನಾವಣಾ ಸಂದರ್ಭದಲ್ಲಿನ ಈ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ರೂಪದ ಪರಿಣಾಮವನ್ನು ಉಂಟು ಮಾಡಿದೆ.

ಕಾಂಗ್ರೆಸ್ ಪಕ್ಷದ ನಿರ್ವಹಣಾ ವೆಚ್ಚ, ಸಾರಿಗೆ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಚುನಾವಣಾ ವೆಚ್ಚ, ಜಾಹೀರಾತು ವೆಚ್ಚವನ್ನು ಮಾಡಲು ಸಾಧ್ಯವಾಗದೇ ಮುಂದೇನು ಎಂಬ ಪ್ರಶ್ನೆ ಕಾಡುವಂತಾಗಿದೆ.
ಕಾಂಗ್ರೆಸ್ ಮುಕ್ತ ಭಾರತ ಎಂದು ಪ್ರಚಾರ ಮಾಡುತ್ತ ಬಂದಿರುವ ಬಿಜೆಪಿ ಈಗ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕೈ ಕಟ್ಟಿ ಹಾಕುತ್ತಿದೆಯೆ ? ಚುನಾವಣೆ ನ್ಯಾಯಸಮ್ಮತವಾಗಿ ನಡೆಯಲು ಚುನಾವಣಾ ಕಣದಲ್ಲಿರುವ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ಇರಬೇಕು. ಆದರೆ ಈಗ ಕಾಂಗ್ರೆಸ್ ಪಕ್ಷಕ್ಕೆ ಸಮಾನ ಅವಕಾಶ ಸಿಗದಂತೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *