ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಪ್ರಕರಣ ಈಗ ಗಂಭೀರ ಸ್ವರೂಪವನ್ನು ಪಡೆಯುತ್ತಿದೆ. ಅಮೇರಿಕ ಮತ್ತು ಜರ್ಮನಿ ಈ ಪ್ರಕರಣದ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡಿದ ಮೇಲೆ ಈಗ ವಿಶ್ವ ಸಂಸ್ಥೆ ಇದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದೆ. ಈ ಮೂಲಕ ವಿಶ್ವವೇ ವಿಶ್ವಗುರು ಪ್ರಭುತ್ವಕ್ಕೆ ಚಾಟಿ ಏಟು ಬೀಸುವಂತಾಗಿದೆ.

ಪ್ರತಿಯೂಬ್ಬರ ಹಕ್ಕನ್ನು ರಕ್ಷಣೆ ಮಾಡುವ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಭಾರತದಲ್ಲಿ ಅರವಿಂದ ಕೇಜ್ರಿವಾಲ್ ಅವರ ಬಂಧನದ ನಂತರದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಯುಎನ್ ವಕ್ತಾರರು ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಣೆ ಮಾಡುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ.

ಭಾರತದಲ್ಲಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಪ್ರತಿಪಕ್ಷ ಕಾಂಗ್ರೆಸ್ ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಭಾರತ ಮತ್ತು ಇತರ ರಾಷ್ಟ್ರಗಳಲ್ಲೂ ಸಹ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಮತ್ತು ನಾಗರಿಕ ಹಕ್ಕನ್ನು ರಕ್ಷಿಸಬೇಕು ಎಂದು ವಿಶ್ವ ಸಂಸ್ಥೆ ಬಯಸುತ್ತದೆ ಎಂದಿದ್ದಾರೆ.
ಭಾರತದಲ್ಲಿ ಈಗ ಚುನಾವಣೆ ಬರುತ್ತಿದೆ. ಈ ಸಂದರ್ಭದಲ್ಲಿ ಭಾರತೀಯರ ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ಸಂರಕ್ಷಿಸಬೇಕು. ನ್ಯಾಯ ಸಮ್ಮತವಾದ ಚುನಾವಣೆ ನಡೆಯಬೇಕು. ಪ್ರತಿಯೊಬ್ಬರು ತಮ್ಮ ನಾಗರಿಕ ಹಕ್ಕುಗಳನ್ನು ಬಳಸುವ ವಾತಾವರಣ ಇರಬೇಕು ಎಂದು ವಿಶ್ವ ಸಂಸ್ಥೆ ಹೇಳಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಬ್ಕಾರಿ ನೀತಿ ಪ್ರಕರಣದಲ್ಲಿ ಮಾರ್ಚ್ 21 ರಂದು ಬಂಧಿಸಲಾಗಿತ್ತು. ಈಗ ಅವರು ಇಡಿ ವಶದಲ್ಲಿದ್ದಾರೆ. ಅವರಿಗೆ ಜಾಮೀನು ಕೂಡ ದೊರಕಿಲ್ಲ. ಈ ನಡುವೆ ಕಾಂಗ್ರೆಸ್ ಪಕ್ಷ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪ ಮಾಡಿತ್ತು.

ಈ ಬೆಳವಣಿಗೆಗಳ ಬಗ್ಗೆ ಜರ್ಮನಿ ಮತ್ತು ಅಮೇರಿಕ ಪ್ರತಿಕ್ರಿಯೆ ನೀಡಿದ್ದವು. ನಾಗರಿಕ ಹಕ್ಕುಗಳನ್ನು ಸಂರಕ್ಷಿಸುವಂತೆ ಮನವಿ ಮಾಡಿದ್ದವು ಈ ಕುರಿತು ಭಾರತದ ವಿದೇಶಾಂಗ ಇಲಾಖೆ ಇದು ಭಾರತದ ಆಂತರಿಕ ವಿಚಾರ ಎಂದು ಅಮೇರಿಕ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ಕರೆಸಿ ಹೇಳಿತ್ತು. ಇದಾದ ಮೇಲೂ ಈ ವಿಚಾರದಲ್ಲಿ ಅಮೇರಿಕ ತನ್ನ ನಿಲುವನ್ನು ಬದಲಿಸಿರಲಿಲ್ಲ. ಅಮೇರಿಕ ಸ್ಟೇಟ್ ಡಿಪಾರ್ಟ್ ಮೆಂಟ್ ನಾವು ಭಾರತದಲ್ಲಿನ ಬೆಳವಣಿಗೆಗಳನ್ನು ಸೂಕ್ಷವಾಗಿ ನೋಡುತ್ತಿದ್ದೇವೆ, ಅದರ ಮೇಲೆ ನಿಗಾ ಇರಿಸಿದ್ದೇವೆ ಎಂದು ತಿಳಿಸಿತ್ತು

.

Leave a Reply

Your email address will not be published. Required fields are marked *