ಜಾಗತಿಕ ತಾಪಮಾನ ಏರಿಕೆ ಇಂದಿನ ಬಹುದೊಡ್ಡ ಸವಾಲು. ಪರಿಸರ ಸಂರಕ್ಷಣೆಯಲ್ಲಿ ಮನುಷ್ಯ ಎಡವುತ್ತಿರುವ ಸನ್ನಿವೇಶಗಳಲ್ಲೊಂದು ಪರ್ವತಗಳ ನಾಶ. ಆದ್ದರಿಂದ ಡಿಸೆಂಬರ್ 11 ಅನ್ನು ಪ್ರತಿ ವರ್ಷ ವಿಶ್ವ ಪರ್ವತ ದಿನ (World Mountain Day) ಎಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಪರ್ವತ ಪ್ರದೇಶಗಳ ಪರಿಸರ, ಜೀವವೈವಿಧ್ಯ, ಜಲಮೂಲಗಳು ಮತ್ತು ಸಮುದಾಯಗಳ ಮಹತ್ವವನ್ನು ಲೋಕಕ್ಕೆ ನೆನಪಿಸುವುದು. ವಿಶ್ವದ ಭೂಭಾಗದ ಸುಮಾರು 27% ಭಾಗವನ್ನು ಪರ್ವತಗಳು ಆವರಿಸಿವೆ ಮತ್ತು ವಿಶ್ವದ ಅರ್ಧಕ್ಕಿಂತ ಹೆಚ್ಚು ಜನರಿಗೆ ನೇರ ಅಥವಾ ಪರೋಕ್ಷವಾಗಿ ಜೀವಾಳ ನಿಡುವ ಮಹತ್ವವು ಪರ್ವತಗಳಲ್ಲಿದೆ. ಭೂಮಿಯ ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿ ಉಳಿಸಿಕೊಳ್ಳಲು ಪರ್ವತಗಳು ಸಲ್ಲಿಸುವ ಪಾತ್ರ ಅನಿವಾರ್ಯ ಮತ್ತು ಅನನ್ಯ.
ಪಶ್ಚಿಮ ಘಟ್ಟಗಳ ಅಬ್ಬಿನೀರಿನಿಂದ ಹಿಡಿದು ಹಿಮಾಲಯದ ಗಂಗೆ, ಯಮುನೆ, ಬ್ರಹ್ಮಪುತ್ರಗಳ ವರೆಗೆ ಜನರಿಗೆ ಸಿಹಿನೀರೇನಾದರೂ ಸಿಗುತ್ತಿದ್ದರೆ ಅದಕ್ಕೆ ಪರ್ವತಗಳು ಕಾರಣ. ನದಿಗಳ ಉಗಮಸ್ಥಾನಗಳಾದ ಪರ್ವತಗಳು, ಹಿಮನದಿಗಳು, ಹಿಮಪರ್ವತಗಳು ಮತ್ತು ಮಳೆ ನೀರನ್ನು ಸಂಗ್ರಹಿಸುವ ಕಾಡು ಪ್ರದೇಶಗಳನ್ನು ಹೊಂದಿವೆ. ಈ ಮೂಲಗಳಿಂದ ವಿಶ್ವದ ಸುಮಾರು ಶೇ.೫೦ರಷ್ಟು ಜನರು ಕುಡಿಯುವ ನೀರು ಪಡೆಯುತ್ತಾರೆ. ಆದ್ದರಿಂದ ಪರ್ವತಗಳನ್ನು ಸಂರಕ್ಷಿಸುವುದು ಮಾನವ ಸಮಾಜದ ನೀರಿನ ಭದ್ರತೆಗೆ ಅತ್ಯಂತ ಮುಖ್ಯ.
ಪರ್ವತಗಳು ಅನೇಕ ವಿಶಿಷ್ಟ ಸಸ್ಯ-ಪ್ರಾಣಿಗಳ ವಾಸಸ್ಥಳ. ಹಿಮಾಲಯ, ಪಶ್ಛಿಮ ಘಟ್ಟಗಳು, ಅರಾವಳಿ ಪರ್ವತಗಳು ಅಪರೂಪದ ಜೀವವೈವಿಧ್ಯ, ಪಶು, ಪಕ್ಷಿ ಸಂಕುಲ ಮತ್ತು ಔಷಧೀಯ ಸಸ್ಯಗಳ ಖಜಾನೆ. ನೀರು ಆಧಾರಿತ ಕಾಡು ಪರಿಸರಗಳು, ಮಸಾಲೆ ಸಸ್ಯಗಳು, ಕಾಫಿ ಮತ್ತು ವಿವಿಧ ವನಸ್ಪತಿಗಳು, ಸಿಂಗಳೀಕ, ಕೆಂಪು ಪಾಂಡಾ, ಹಿಮ ಚಿರತೆಯಂತಹ ಅಪರೂಪದ ಜೀವ ವೈವಿಧ್ಯಗಳು ಪರ್ವತಗಳ ಕೊಡುಗೆ. ಪರ್ವತಗಳ ಜೀವವೈವಿಧ್ಯ ಮಾನವಕುಲಕ್ಕೆ ಔಷಧಗಳು, ಆಹಾರ, ಮತ್ತು ಹವಾಮಾನ ಸಮತೋಲನ ನೀಡುತ್ತದೆ.
ಪರ್ವತ ಪ್ರದೇಶಗಳು ಹವಾಮಾನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಳೆಯ ಚಲನೆ (Monsoon dynamics), ತಾಪಮಾನ ನಿಯಂತ್ರಣ, ಗಾಳಿಯ ಹರಿವು ಮತ್ತು ತೇವಾಂಶ ಸಂಗ್ರಹಣೆಯಲ್ಲಿ ಪರ್ವತಗಳು ಅತ್ಯಂತ ಅವಶ್ಯಕ. ಉದಾಃಗೆ ಹಿಮಾಲಯದಂತಹ ಪರ್ವತಶ್ರೇಣಿಗಳು ಭಾರತವನ್ನು ತೀವ್ರ ಚಳಿಗಾಳಿಯಿಂದ ರಕ್ಷಿಸುವ ಪ್ರಕೃತಿ ಗೋಡೆಯಂತೆ ಕಾರ್ಯನಿರ್ವಹಿಸುತ್ತವೆ.
ಜಗತ್ತಿನ ಸುಮಾರು 100 ಕೋಟಿಗೂ ಅಧಿಕ ಜನರು ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಸಂಸ್ಕೃತಿ, ಕೃಷಿ, ಜೀವನೋಪಾಯಗಳು ಪರ್ವತಗಳ ನೆಲೆಗೆ ಅವಲಂಬಿತವಾಗಿವೆ. ಜಲಾಧಾರಿತ ಕೃಷಿ, ಮಸಾಲೆ ಬೆಳೆಯುವಿಕೆ, ಪಶು ಸಂಗೋಪನೆ, ಪರ್ವತ ಪ್ರವಾಸೋದ್ಯಮ ಈ ಎಲ್ಲವೂ ಪರ್ವತಗಳನ್ನು ಆಶ್ರಯಿಸಿವೆ. ಆದ್ದರಿಂದ ಪರ್ವತ ಸಂರಕ್ಷಣೆ ಎಂದರೆ ಸ್ಥಳೀಯ ಸಮುದಾಯಗಳ ಆತ್ಮಸ್ಥೈರ್ಯ ಮತ್ತು ಆರ್ಥಿಕ ಸ್ಥಿರತೆ.
ಅಪಾರವಾದ ಮಹತ್ವವಿದ್ದರೂ, ಪರ್ವತಗಳು ಹಲವು ಪರಿಸರ ಅಪಾಯಗಳನ್ನು ಎದುರಿಸುತ್ತಿವೆ. ಹವಾಮಾನ ಬದಲಾವಣೆಯಿಂದ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಅರಣ್ಯಗಳ ನಾಶ ಅವ್ಯಾಹತವಾಗಿದೆ. ಅಸಂರಕ್ಷಿತ ರಸ್ತೆ ನಿರ್ಮಾಣ ಮತ್ತು ಗಣಿಗಾರಿಕೆ ದೊಡ್ಡ ತಲೆನೋವಾಗಿದೆ. ಮಣ್ಣು ಸವಕಳಿ ಮತ್ತು ಪ್ರವಾಹಗಳು ವ್ಯಾಪಕವಾಗುತ್ತಿವೆ. ಅತಿಯಾದ ಪ್ರವಾಸೋದ್ಯಮವೂ ಸೇರಿ ಪರ್ವತಗಳು ಕುಸಿಯುತ್ತಿವೆ. ಪರಿಣಾಮವಾಗಿ ಚಿಕ್ಕಮಗಳೂರಿನಂತಹ ಗುಡ್ಡ ಕುಸಿತದ ಪ್ರಕರಣಗಳನ್ನು ಹೆಚ್ಚು ಹೆಚ್ಚು ನೋಡಬಹುದಾಗಿದೆ. ಇತ್ತೀಚೆಗೆ ಪ್ರತಿವರ್ಷ ಗುಡ್ಡಕುಸಿತ ಮತ್ತು ನೂರಾರು ಮನೆಗಳ ನಾಶವನ್ನು ಊಹಿಸಬಹುದಾಗಿದೆ.
ಪರ್ವತಗಳನ್ನು ಉಳಿಸಿ — ಭವಿಷ್ಯವನ್ನು ಕಾಪಾಡಿ ಇದು ಪರ್ವತ ದಿನ ನಮ್ಮ ಮುಂದೆ ನಿಲ್ಲಿಸುವ ಪ್ರಮುಖ ಸಂದೇಶ. ಅರಣ್ಯ ಪುನರುತ್ಪಾದನೆ, ಜಲಮೂಲಗಳ ನಿರ್ವಹಣೆ, ಹವಾಮಾನ ಬದಲಾವಣೆಗೆ ತಡೆಗಟ್ಟುವ ಸ್ಥಳೀಯ ನೀತಿಗಳು, ಜವಾಬ್ದಾರಿಯುತ ಪ್ರವಾಸೋದ್ಯಮ, ಪರ್ವತ ಪ್ರದೇಶದ ಜನರ ಶಿಕ್ಷಣ ಮತ್ತು ಆರ್ಥಿಕ ಬಲವರ್ಧನೆ ಆಡಳತಾರೂಢರು ಮತ್ತು ಜನಸಾಮಾನ್ಯರ ಆದ್ಯತೆಯಾಗಬೇಕು. ಈಗೀಗ ಕ್ಯೂಟೊ ಒಪ್ಪಂದದ ಎಷ್ಟೋ ವರ್ಷಗಳ ನಂತರ ನಮ್ಮ ದೇಶದಲ್ಲಿ ನಿಧಾನವಾಗಿಯಾದರೂ ಸ್ಥಳೀಯ ನೀತಿಗಳಲ್ಲಿ , ಜಾಗತಿಕ ಒಕ್ಕೂಟಗಳಲ್ಲಿ ಮುಖ್ಯ ಅಜೆಂಡಾ ಆಗುತ್ತಿರುವುದು ಆಶಾದಾಯಕ.
