ಭಾರತದ ರಾಜಕೀಯ, ಆಡಳಿತ ಮತ್ತು ಸಂವಿಧಾನಿಕ ವ್ಯವಸ್ಥೆಗೆ ಆಳವಾದ ಪ್ರಭಾವ ಬೀರಿದ ನಾಯಕರಲ್ಲಿ ಪ್ರಣಬ್ ಮುಖರ್ಜಿ ಅವರು ಪ್ರಮುಖರು. ಜುಲೈ 25, 2012 ರಿಂದ ಜುಲೈ 25, 2017 ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಅವರು, ತಮ್ಮ ದೀರ್ಘ ಸಾರ್ವಜನಿಕ ಜೀವನದಲ್ಲಿ, ತೀಕ್ಷ್ಣ ಬುದ್ಧಿವಂತಿಕೆ, ಶಿಸ್ತಿನ ಕಾರ್ಯಪಟುತ್ವ ಮತ್ತು ತಟಸ್ಥ ರಾಜಕೀಯ ನಿಲುವಿನಿಂದ ವಿಶಿಷ್ಟ ಸ್ಥಾನ ಪಡೆದರು.
ಅವರ ಜನ್ಮದಿನದ ಅಂಗವಾಗಿ, ದೇಶವು ಅವರ ವ್ಯಕ್ತಿತ್ವ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಕೇವಲ ಗೌರವವಷ್ಟೇ ಅಲ್ಲ, ಭಾರತದ ಪ್ರಜಾಸತ್ತಾತ್ಮಕ ಪರಂಪರೆಗೆ ಅವರು ಸೇರಿಸಿದ ಮೌಲ್ಯಗಳನ್ನೂ ಸ್ಮರಿಸುವ ಸಂದರ್ಭ.
ಪ್ರಾರಂಭಿಕ ಜೀವನ ಮತ್ತು ಶಿಕ್ಷಣ :ಪ್ರಣಬ್ ಮುಖರ್ಜಿ ಅವರು ಡಿಸೆಂಬರ್ 11, 1935ರಲ್ಲಿ ಪಶ್ಚಿಮ ಬಂಗಾಳದ ಮಿರಾಟಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಕಾಮದಾಕಿಂಕರ ಮುಖರ್ಜಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇಂತಹ ಹಿನ್ನೆಲೆಯಲ್ಲಿ ಅಧ್ಯಯನಶೀಲತೆ ಮತ್ತು ರಾಜಕೀಯ ಚಿಂತನೆಗಳು ಅವರ ವ್ಯಕ್ತಿತ್ವದ ಭಾಗವಾಯಿತು. ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಇತಿಹಾಸ, ರಾಜಕೀಯ ವಿಜ್ಞಾನ ಹಾಗೂ ಕಾನೂನು ವಿಭಾಗಗಳಲ್ಲಿ ಪದವಿ ಪಡೆದ ಅವರು, ನಂತರ ಬೋಧಕ ಮತ್ತು ಪತ್ರಕರ್ತರಾಗಿಯೂ ಕೆಲಸ ನಿರ್ವಹಿಸಿದರು.
ದೀರ್ಘ ರಾಜಕೀಯ ಜೀವನ : ಇಂದಿರಾಗಾಂಧಿಗೆ ಆಪ್ತವಾಗಿದ್ದ ಅವರು 1969ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಸಂಸತ್ತನ್ನು ಪ್ರವೇಶಿಸಿದರು. 1984ರಲ್ಲಿ ಇಂದಿರಾ ಹತ್ಯೆಯ ನಂತರ ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ರಾಜೀವ್ ಗಾಂಧಿ ಈ ಸ್ಪರ್ಧೆಯಲ್ಲಿ ಗೆದ್ದ ಕಾರಣ ತಮ್ಮದೇ ಹೊಸ ಪಕ್ಷ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಕಟ್ಟಿದರು. 1989ರಲ್ಲಿ ರಾಜೀವ ಗಾಂಧಿ ಜೊತೆಗೆ ಸಂಧಾನವಾದ ನಂತರ ಆ ಪಕ್ಷ ಭಾರತೀಯ ಕಾಂಗ್ರೆಸ್ ಪಕ್ಷದಲ್ಲಿ ಲೀನವಾಯಿತು. 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಮತ್ತೆ ರಾಜಕೀಯ ಜೀವನ ಪ್ರವರ್ಧಮಾನಕ್ಕೆ ಬಂದಿತು. 1991ರಲ್ಲಿ ಅಂದಿನ ಪ್ರಧಾನ ಮಂತ್ರಿ ಪಿ.ವಿ.ನರಸಿಂಹ ರಾವ್ , ಮುಖರ್ಜಿ ಅವರನ್ನು ರಾಷ್ಟ್ರೀಯ ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ, 1995ರಲ್ಲಿ ವಿದೇಶಾಂಗ ಸಚಿವರನ್ನಾಗಿ ನೇಮಿಸಿದರು. ಹೀಗೆ ಹಲವು ಏರಿಳಿತಗಳ ರಾಜಕೀಯ ಜೀವನದಲ್ಲಿ ನಾಲ್ಕು ದಶಕಗಳ ಕಾಲ ದೇಶದ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ರಕ್ಷಣಾ ಸಚಿವ, ವಿದೇಶಾಂಗ ಸಚಿವ, ವಿತ್ತ ಸಚಿವ ಮತ್ತು ವಾಣಿಜ್ಯ ಸಚಿವರಾಗಿ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಎಲ್ಲಾ ಹುದ್ದೆಗಳಲ್ಲೂ ಪ್ರಣಬ್ ಕುಮಾರ್ ಮುಖರ್ಜಿ ಅವರಲ್ಲಿ ನಿರ್ಧಾರ ಸಾಮರ್ಥ್ಯ, ಜ್ಞಾನಭರಿತ ಚರ್ಚೆ, ಹಾಗೂ ಹುದ್ದೆಯ ತಟಸ್ಥತೆಯನ್ನು ಉಳಿಸುವ ಶಿಸ್ತಿನ ರಾಜಕೀಯ ನಡವಳಿಕೆ ಕಂಡುಬರುತ್ತಿತ್ತು.
ಭಾರತದ ರಾಷ್ಟ್ರಪತಿಯಾಗಿ ಅವರ ಸೇವೆ : 2012ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದ ಪ್ರಣಬ್ ಮುಖರ್ಜಿ ಅವರು, ತಮ್ಮ ಸಂವಿಧಾನಿಕ ಜವಾಬ್ದಾರಿಗಳನ್ನು ಅತ್ಯಂತ ಗೌರವ ಮತ್ತು ಸಮತೋಲನದಿಂದ ನಿರ್ವಹಿಸಿದರು. ಅವರು ಸಂಸತ್ತಿನ ಸಂಪ್ರದಾಯಗಳನ್ನು ಕಾಪಾಡಿದ ನಿರ್ಧಾರಗಳು, ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಸಂವಾದಕ್ಕೆ ಒತ್ತು ನೀಡುವುದು ಮತ್ತು ಶಿಕ್ಷಣ ಸಂಸ್ಥೆಗಳು, ಸಂಶೋಧನೆ ಮತ್ತು ಯುವಶಕ್ತಿ ಅಭಿವೃದ್ದಿಗೆ ಪ್ರೋತ್ಸಾಹ ಕೊಡುವುದಕ್ಕೆ ಗುರುತಿಸಿಕೊಂಡರು. ಅಂದಿನವರೆಗೂ ಕಲ್ಪನೆಗೂ ಎಟುಕದಿದ್ದ ರಾಷ್ಟ್ರಪತಿ ಭವನ ಇವರ ಕಾಲದಲ್ಲಿ ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾದ ಸಂಸ್ಥೆಯಾಯಿತು.
ಚಿಂತಕ, ಲೇಖಕ ಮತ್ತು ಸಂವಿಧಾನ ಪ್ರಿಯ ಮುತ್ಸದ್ದಿ : ರಾಜಕೀಯದ ಹೊರತಾಗಿ ಅವರು ಬಹುಗ್ರಂಥಗಳನ್ನು ರಚಿಸಿದ ಲೇಖಕರೂ ಹೌದು.
ದ ಕೊ ಅಲಿಶನ್ ಯಿಯರ್ಸ್( The Coalition Years) , ದ ಟರ್ಬುಲೆಂಟ್ ಯಿಯರ್ಸ್( The Turbulent Years), ದ ಡ್ರಾಮ್ಯಾಟಿಕ್ ಡಿಕೇಡ್ (The Dramatic Decade) ಮೊದಲಾದ ಪುಸ್ತಕಗಳಲ್ಲಿ ಅವರು ಭಾರತದ ರಾಜಕೀಯ ಘಟನೆಗಳನ್ನು ವಿಶ್ಲೇಷಣೆ ಮತ್ತು ದಾಖಲಾತಿಗಳ ಆಧಾರದ ಮೇಲೆ ವಿವರಿಸಿದ್ದಾರೆ.
ಭಾರತ ಸರ್ಕಾರವು ಅವರ ಸುದೀರ್ಘ, ಬದ್ಧತೆಯ ಸೇವೆಗಾಗಿ 2008ರಲ್ಲಿ ಪದ್ಮಭೂಷಣ, 2019ರಲ್ಲಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿತು.
ಪ್ರಣಬ್ ಮುಖರ್ಜಿ ಅವರು ಪಕ್ಷಾತೀತ ಗೌರವ ಪಡೆದ ಸಾರ್ವಜನಿಕ ನಾಯಕ. ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲ, ಸಂವಿಧಾನದ ಮೌಲ್ಯ, ಹಾಗೂ ಆಡಳಿತದ ಪ್ರಾಮಾಣಿಕತೆಯ ಮೇಲೆ ಅವರ ನಂಬಿಕೆ ಅವರನ್ನು ವಿಶಿಷ್ಟ ಮುತ್ಸದ್ದಿಯನ್ನಾಗಿ ಗುರುತಿಸಿತು. ಅವರ ಜನ್ಮದಿನದ ಸಂದರ್ಭವು, ಭಾರತೀಯ ರಾಜಕೀಯದಲ್ಲಿ ಸ್ಥೈರ್ಯ, ವಿವೇಕ ಮತ್ತು ಸಾರ್ವಜನಿಕ ಸೇವಾ ಧರ್ಮದ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ನೆನಪಿಸುತ್ತದೆ.
