ನವದೆಹಲಿ : ಭಯೋತ್ಪಾದಕರು ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವವರನ್ನು ಮಟ್ಟ ಹಾಕಲು ಯಾವುದೇ ನಿಯಮದ ಅಗತ್ಯ ಇಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಈ ಮೂಲಕ ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲ ನೀಡುವವರನ್ನು ಮಟ್ಟ ಹಾಕಲು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ದ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕರಿಗೆ ಯಾವುದೇ ನಿಯಮಗಳು ಅಥವಾ ಕಾನೂನುಗಳು ಇಲ್ಲದಿರುವಾಗ ಉಗ್ರರನ್ನು ಮಟ್ಟ ಹಾಕಲು ನಮಗೂ ಯಾವುದೇ ನಿಮಯಗಳು ಬೇಕಿಲ್ಲ ಎಂದು ಅವರು ಹೇಳಿದ್ದಾರೆ.
ಎಸ್ ಜೈಶಂಕರ್ ಅವರು ಪುಣೆಯಲ್ಲಿ ನಡೆದ ‘ವೈ ಇಂಡಿಯಾ ಮ್ಯಾಟರ್ಸ್ ಯುವಕರಿಗೆ ಅವಕಾಶಗಳು ಮತ್ತು ಜಾಗತಿಕ ರಂಗದಲ್ಲಿ ಭಾಗವಹಿಸುವಿಕೆ’ ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು..
ಯಾರೂ ನಮ್ಮ ಮೇಲೆ ಪ್ರತಿದಾಳಿ ಮಾಡಲು ಸಾಧ್ಯವಿಲ್ಲ ಎಂದು ಭಯೋತ್ಪಾದಕರು ಭಾವಿಸಬಾರದು. ಭಯೋತ್ಪಾದಕರು ಯಾವುದೇ ನಿಯಮಗಳ ಪ್ರಕಾರ ಆಡುವುದಿಲ್ಲ. ಭಯೋತ್ಪಾದಕರಿಗೆ ಪ್ರತಿಕ್ರಿಯಿಸಲು ನಮಗೂ ಯಾವುದೇ ನಿಯಮಬೇಕಿಲ್ಲ ಎಂದು ಹೇಳಿದರು.
ಭಾರತದ ವಿದೇಶಾಂಗ ನೀತಿಯಲ್ಲಿ ನಿರಂತರತೆಯ ಕುರಿತು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಜೈಶಂಕರ್, ಹೌದು ವಿದೇಶಾಂಗ ನೀತಿಯಲ್ಲಿ 50ರಷ್ಟು ನಿರಂತರತೆ ಮತ್ತು 50 ಪ್ರತಿಶತ ಬದಲಾವಣೆ ಆಗಿದೆ. ಮುಂಬೈ ದಾಳಿಯ ನಂತರ ನಾವು ಪ್ರತಿಕ್ರಿಯೆ ನೀಡಬಾರದಿತ್ತು ಎಂದು ಭಾವಿಸುವ ಒಬ್ಬ ವ್ಯಕ್ತಿಯೂ ಇರಲಿಲ್ಲ. ಆದರೆ ಆ ಸಮಯದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡದಿದ್ದಕ್ಕಿಂತ ಪಾಕಿಸ್ತಾನದ ಮೇಲೆ ದಾಳಿ ಮಾಡುವ ವೆಚ್ಚ ಹೆಚ್ಚು ಎಂದು ಭಾವಿಸಲಾಗಿತ್ತು ಎಂದರು.







