ಮೋದಿ ಅವರ ಗುಣಗಾನ; ಮಕ್ಕಳು ಮೊಮ್ಮಕ್ಕಳ ಜೊತೆ ಮೋದಿ ಜೊತೆ ವೇದಿಕೆ ಹಂಚಿಕೊಂಡ ದೇವೇಗೌಡ.. ಇದಾಗಿತ್ತು ಕುಟುಂಬ ಸಂಭ್ರಮ..

H D Devegowda Family : ಇಡೀ ಕಾರ್ಯಕ್ರಮ ಬಿಜೆಪಿ ವ್ಯವಸ್ಥೆ ಮಾಡಿತ್ತು ಬಿಜೆಪಿಯ ಕಮಲ ಎಲ್ಲೆಡೆ ಕಾಣುತ್ತಿತ್ತು. ಆದರೆ ಈ ಕಮಲ ಮುಡಿದವರು ದೇವೇಗೌಡ ಮತ್ತು ಅವರ ಕುಟುಂಬ.

ಮೈಸೂರು : ಮಾಜಿ ಪ್ರಧಾನಿ ದೇವೇಗೌಡ. ಅವರ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ. ಜೊತೆಗೆ ವೇದಿಕೆಯಲ್ಲಿದ್ದ ಹೆಚ್. ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ.. ನಿಖಿಲ್ ಕುಮಾರಸ್ವಾಮಿ ಮಾತ್ರ ಕಾಣುತ್ತಿರಲಿಲ್ಲ. ದೇವೇಗೌಡರ ಕುಟುಂಬದ ಹೆಣ್ಣು ಮಕ್ಕಳ ಮಾತ್ರ ಇರಲಿಲ್ಲ. ಉಳಿದಂತೆ ದೇವೇಗೌಡರ ಕುಟುಂಬದ ಮದುವೆಯೋ ಇನ್ಯಾವ ಕಾರ್ಯಕ್ರಮ ಎನ್ನುವಂತಿತ್ತು ಇವತ್ತಿನ ಮೈಸೂರಿನ ಪ್ರಚಾರ ಸಭೆ.

ಇಡೀ ಕಾರ್ಯಕ್ರಮ ಬಿಜೆಪಿ ವ್ಯವಸ್ಥೆ ಮಾಡಿತ್ತು ಬಿಜೆಪಿಯ ಕಮಲ ಎಲ್ಲೆಡೆ ಕಾಣುತ್ತಿತ್ತು. ಆದರೆ ಈ ಕಮಲ ಮುಡಿದವರು ದೇವೇಗೌಡ ಮತ್ತು ಅವರ ಕುಟುಂಬ.

ಮೋದಿಯವರು ಬರುವುದಕ್ಕಿಂತ ಮೊದಲು ಎಲ್ಲಾ ಎಕ್ಸ್​ ಪ್ಲೇಯರ್ ಗಳಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಇದರಲ್ಲಿ ಸಂಸದೆ ಸುಮಲತಾ ಅವರೂ ಸೇರಿದ್ದರು.

ಕುಮಾರಸ್ವಾಮಿ ಅವರ ಹೆಸರನ್ನು ಸಂಭೋದಿಸಿ ಸುಮಲತಾ ಮಾತನಾಡುತ್ತಿರುವಾಗಲೇ ಮೋದಿ ಅವರು ಬರಲು ಸಮಯವಾಗಿತ್ತು. ಹೀಗಾಗಿ ಅವರಿಗೆ ತಮ್ಮ ಸ್ವಾಭಿಮಾನದ ಬಗ್ಗೆ ಮಾತನಾಡಲು ಸಾಧ್ಯವಾಗಲಿಲ್ಲ. ಮಂಡ್ಯದ ಸೊಸೆಯ ಅನಾಥ ಸ್ಥಿತಿಯ ಬಗ್ಗೆಯೂ ಮಾತನಾಡಲು ಅವಕಾಶ ಇರಲಿಲ್ಲ. ಹೀಗಾಗಿ ಸುಮಲತಾ ಒಂದು ರೀತಿಯಲ್ಲಿ ಏಕಾಂಗಿಯಾಗಿ ಕಾಣುತ್ತಿದ್ದರು.

ಬಹಳ ಹೊತ್ತಿನ ವರೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಭೆಗೆ ಬಂದಿರಲಿಲ್ಲ. ವೇದಿಕೆಯ ಒಂದು ತುದಿಗೆ ಕುಳಿತಿದ್ದ ರೇವಣ್ಣ ನವರು ಮೋದಿಯವರು ಕುಳಿತಿದ್ದ ಕಡೆ ಓಡೋಡಿ ಬಂದರು. ತಮ್ಮನ್ನೇ ತಾವು ಪರಿಚಯಿಸಿಕೊಂಡರು. ಕುಮಾರಣ್ಣ ಇವರು ನನ್ನ ಅಣ್ಣ ಎಂದಿರಬೇಕು. ಅಗ ರೇವಣ್ಣ ಏನು ಹೇಳಿದರೋ ಗೊತ್ತಿಲ್ಲ. ಕೈ ಮಾತ್ರ ಮುಗಿದುಕೊಂಡೇ ಇದ್ದರು.

ದೇವೇಗೌಡರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉಗಿದರು. ಸಿದ್ದರಾಮಯ್ಯ ಅವರನ್ನು ಬೈದರು. ಕರ್ನಾಟಕದಲ್ಲಿ ಹೊಸ ಸರ್ಕಾರ ಬರಬೇಕು ಎಂದು ಕರೆ ನೀಡಿದರು.

ಅದು ತಮ್ಮ ಮಗನ ನೇತೃತ್ವದ ಸರ್ಕಾರ ಎಂದು ಬಾಯಿ ಬಿಟ್ಟು ಮಾತ್ರ ಅವರು ಹೇಳಲಿಲ್ಲ.

Author

error: