ವಿಶ್ವ ಯುದ್ಧ ಅನಾಥರ ದಿನ: ಮಕ್ಕಳ ಬದುಕಿನ ಮೇಲೆ ಯುದ್ಧದ ನೆರಳು
ಅಮೆರಿಕಾ–ವೆನಿಜುವೆಲಾ ಸಂಘರ್ಷದ ಬೆದರಿಕೆಯ ನಡುವೆ ಒಂದು ಮಾನವೀಯ ಚಿಂತನೆ
ಪ್ರತಿ ವರ್ಷ ಆಚರಿಸಲಾಗುವ ವಿಶ್ವ ಯುದ್ಧ ಅನಾಥರ ದಿನವು, ಯುದ್ಧಗಳ ಪರಿಣಾಮವಾಗಿ ತಂದೆ–ತಾಯಿಯನ್ನು ಕಳೆದುಕೊಂಡ ಲಕ್ಷಾಂತರ ಮಕ್ಕಳ ನೋವು, ನಿರ್ಲಕ್ಷ್ಯ ಮತ್ತು ಅಸುರಕ್ಷತೆಯ ಬದುಕನ್ನು ಜಗತ್ತಿಗೆ ನೆನಪಿಸುವ ದಿನವಾಗಿದೆ. ಯುದ್ಧಗಳು ಗಡಿಗಳನ್ನು ಮೀರಿ ರಾಜಕೀಯ ಶಕ್ತಿಪ್ರದರ್ಶನವಾಗಬಹುದು. ಆದರೆ ಅದರ ಭೀಕರ ಪರಿಣಾಮವನ್ನು ಅನುಭವಿಸುವವರು ಮಾತ್ರ ನಿರಪರಾಧಿ ಮಕ್ಕಳು. ಇತ್ತೀಚೆಗೆ ಜಾಗತಿಕ ರಾಜಕೀಯ ವಲಯದಲ್ಲಿ ಅಮೆರಿಕಾ ಮತ್ತು ವೆನಿಜುವೆಲಾ ನಡುವಿನ ಉದ್ವಿಗ್ನತೆ ಹಾಗೂ ಯುದ್ಧದ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಕೇಳಿಬರುತ್ತಿರುವ ಈ ಹೊತ್ತಿನಲ್ಲಿ, ವಿಶ್ವ ಯುದ್ಧ ಅನಾಥರ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಿದೆ.
ಯುದ್ಧಗಳು ಉಳಿಸುವ ನಿಜವಾದ ಗಾಯಗಳು
ಒಂದು ಯುದ್ಧ ಕೇವಲ ಎರಡು ಶಕ್ತಿಗಳ ಸಂಘರ್ಷವಲ್ಲ. ಅದು ಎರಡು ಶಕ್ತಿಗಳ ನಾಶದ ಆರಂಭವೂ ಹೌದು. ಈ ನಾಶದ ಮೊದಲ ಹೆಜ್ಜೆ ಅನಾಥ ಮಕ್ಕಳ ಸುಂದರ ಬಾಲ್ಯ ಕಮರುವುದಾಗಿದೆ. ಭವಿಷ್ಯದ ನಾಗರಿಕ ಭಯ ಮತ್ತು ಸೇಡಿನ ಮನೋವ್ಯಾಪಾರಕ್ಕೆ ಸಿಕ್ಕಾಗ ಆ ರಾಷ್ಟ್ರ ಹೇಗೆ ತಾನೆ ಮಾನವೀಯ ಬೆಳಕು ಕಂಡೀತು? ಕಳೆದ ಶತಮಾನದಲ್ಲಿನ ಪ್ರಥಮ ಹಾಗೂ ದ್ವಿತೀಯ ವಿಶ್ವಯುದ್ಧಗಳಿಂದ ಹಿಡಿದು ಇಂದಿನ ಪ್ರಾದೇಶಿಕ ಯುದ್ಧಗಳವರೆಗೆ, ಕೋಟಿ ಕೋಟಿ ಮಕ್ಕಳು ಹೀಗೆ ಅನಾಥರಾಗಿದ್ದಾರೆ. ಅನಾಥರಾದ ಮಕ್ಕಳು ಶಿಕ್ಷಣ, ಆರೋಗ್ಯ, ಭದ್ರತೆ ಮತ್ತು ಮಾನಸಿಕ ನೆಮ್ಮದಿ ಎಂಬ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಾರೆ. ಶರಣಾರ್ಥಿ ಶಿಬಿರಗಳು, ಬಡತನ, ಬಾಲಕಾರ್ಮಿಕತೆ, ಮಾನವ ಸಾಗಣೆ ಮತ್ತು ಅತಿರೇಕದ ಹಿಂಸಾಚಾರ ಇವೆಲ್ಲವೂ ಯುದ್ಧ ಅನಾಥರ ಜೀವನದ ಕಠಿಣ ಸತ್ಯಗಳು. ಈ ಸತ್ಯದ ಕಠೋರತೆಯನ್ನು ಮಕ್ಕಳು ಹೇಗೆ ಎದುರಿಸಬಹುದು? ಬಾಲ್ಯ ನಶಿಸುತ್ತದೆ, ಬದುಕು ನಶಿಸುತ್ತದೆ. ಈ ನಾಶದ ಬೂದಿಯಿಂದ ಎದ್ದ ಮಕ್ಕಳು ಶಾಂತಿದೂತರಾದರೆ ಅದು ಜಗತ್ತಿನ ಭಾಗ್ಯ. ಅದೇ ಭಯ ಮತ್ತು ಸೇಡಿನ ಬೀಜವಾದರೆ ಜನಾಂಗೀಯ ದ್ವೇಷ ಮತ್ತು ಮತ್ತೊಂದು ಯುದ್ಧದ ನಾಂದಿ..
ಅಮೆರಿಕಾ–ವೆನಿಜುವೆಲಾ: ರಾಜಕೀಯ ಸಂಘರ್ಷ ಮತ್ತು ಮಾನವೀಯ ಆತಂಕ
ಅಮೆರಿಕಾ ಮತ್ತು ವೆನಿಜುವೆಲಾ ನಡುವಿನ ರಾಜಕೀಯ–ಆರ್ಥಿಕ ಉದ್ವಿಗ್ನತೆಗಳು ಹೊಸದೇನಲ್ಲ. ಆದರೆ ಈ ಸಂಘರ್ಷಗಳು ಯುದ್ಧದ ರೂಪ ಪಡೆದರೆ, ಅದರ ಬೆಲೆಯನ್ನು ರಾಜಕೀಯ ನಾಯಕರಲ್ಲ , ಸಾಮಾನ್ಯ ನಾಗರಿಕರು, ವಿಶೇಷವಾಗಿ ಮಕ್ಕಳು ಕಟ್ಟಬೇಕಾಗುತ್ತದೆ. ವೆನಿಜುವೆಲಾ ಈಗಾಗಲೇ ಆರ್ಥಿಕ ಸಂಕಷ್ಟ, ಆಹಾರ ಕೊರತೆ ಮತ್ತು ವಲಸೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶ. ಇಂತಹ ಸ್ಥಿತಿಯಲ್ಲಿ ಯುದ್ಧ ಸಂಭವಿಸಿದರೆ, ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗುವುದು ಅನಿವಾರ್ಯ. ಇದೇ ರೀತಿ, ಯಾವುದೇ ಮಹಾಶಕ್ತಿ ತೊಡಗುವ ಯುದ್ಧವು ಜಾಗತಿಕ ಮಟ್ಟದಲ್ಲಿ ಅಸ್ಥಿರತೆ, ಶರಣಾರ್ಥಿ ಸಮಸ್ಯೆ ಮತ್ತು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ.
ಯುದ್ಧ ಅನಾಥರು: ಮೌನವಾಗಿರುವ ಬಲಾತ್ಕೃತರು
ಯುದ್ಧ ಅನಾಥರು ಬಹುಶಃ ಸುದ್ದಿಶೀರ್ಷಿಕೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ರಾಜಕೀಯ ಚರ್ಚೆಗಳಲ್ಲಿ, ಸೇನಾ ತಂತ್ರಗಳಲ್ಲಿ, ವಿಜಯ–ಪರಾಜಯದ ಲೆಕ್ಕಾಚಾರಗಳಲ್ಲಿ ಅವರ ನೋವು ಅಡಗಿಹೋಗುತ್ತದೆ. ಆದರೆ ಪ್ರತಿಯೊಂದು ಬಾಂಬ್ ಸ್ಫೋಟದ ಹಿಂದೆ, ಪ್ರತಿಯೊಂದು ಗಡಿಯಾಚೆ ಓಡುವ ಜನಸಮೂಹದ ಹಿಂದೆ, ಒಂದು ಮಗುವಿನ ಮುರಿದ ಕನಸು ಅಡಗಿದೆ. ವಿಶ್ವ ಯುದ್ಧ ಅನಾಥರ ದಿನವು ಈ ಮೌನಿ ಮಕ್ಕಳಿಗೆ ಧ್ವನಿ ನೀಡುವ ಯತ್ನವಾಗಿದೆ.
ವಿಶ್ವದ ಹೊಣೆಗಾರಿಕೆ ಏನು?
ಜಾಗತಿಕ ನಾಯಕರಲ್ಲಿ ಯುದ್ಧವನ್ನು ಕೊನೆಯ ಆಯ್ಕೆಯಾಗಿ ಮಾತ್ರ ಪರಿಗಣಿಸುವ ರಾಜಕೀಯ ಪ್ರಜ್ಞೆ ಹೆಚ್ಚಾಗಬೇಕು. ವೈಯಕ್ತಿಕ ಅಹಂಗಳ ನಿರೂಪಕ ಅಂಗಳವಾಗಕೂಡದು. ಸಂಘರ್ಷಗಳಿಗೆ ರಾಜತಾಂತ್ರಿಕ ಪರಿಹಾರಗಳನ್ನು ಹುಡುಕುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಅನಿವಾರ್ಯವಾಗಿ ಯುದ್ಧ ಆಗಿಯೇ ಬಿಟ್ಟರೆ ಯುದ್ಧ ಪೀಡಿತ ಮಕ್ಕಳಿಗೆ ಶಿಕ್ಷಣ, ಮಾನಸಿಕ ಆರೈಕೆ ಮತ್ತು ಪುನರ್ವಸತಿ ಕಲ್ಪಿಸುವ ಔದಾರ್ಯ ತೋರಿಸಬೇಕು. ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಶ್ರೀಮಂತ ರಾಷ್ಟ್ರಗಳ ಮಾನವೀಯ ಬದ್ಧತೆ ಬಲಗೊಳ್ಳಬೇಕು. ಇವೆಲ್ಲ ಆಯಾ ರಾಷ್ಟ್ರಗಳು , ವಿಶ್ವಸಂಸ್ಥೆಯ ಕೇವಲ ಘೋಷಣೆಗಳಾಗದೆ ಕಾರ್ಯರೂಪಕ್ಕೆ ಬರಬೇಕು.
ವಿಶ್ವ ಯುದ್ಧ ಅನಾಥರ ದಿನವು ಕೇವಲ ಒಂದು ದಿನದ ಆಚರಣೆಯಾಗಬಾರದು. ಅದು ಯುದ್ಧದ ವಿರುದ್ಧ ಮಾನವೀಯ ಎಚ್ಚರಿಕೆಯ ಸಂಕೇತವಾಗಬೇಕು. ರಾಜಕೀಯ ಶಕ್ತಿಗಳ ತೀರ್ಮಾನಗಳು ಮಕ್ಕಳ ಬದುಕನ್ನು ನಾಶ ಮಾಡಬಾರದು ಎಂಬುದೇ ಈ ದಿನದ ಮೂಲ ಸಂದೇಶ. ಅಮೆರಿಕಾ–ವೆನಿಜುವೆಲಾ ಮಾತ್ರವಲ್ಲ, ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧದ ಮಾತು ಕೇಳಿಬಂದಾಗಲೂ, ನಾವು ಮೊದಲಿಗೆ ನೆನಪಿಸಿಕೊಳ್ಳಬೇಕಾದವರು – ಯುದ್ಧ ಅನಾಥ ಮಕ್ಕಳು.
ಯುದ್ಧ ಗೆಲ್ಲುವವರು ಯಾರೇ ಆಗಿರಲಿ, ಸೋಲುವವರು ಸದಾ ಮಕ್ಕಳು.
— SuddiTV | ಸತ್ಯ, ಸಂವೇದನೆ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ






