ನವದೆಹಲಿ: ಗಣಿಗಾರಿಕೆ ಮೇಲೆ ಕರ್ನಾಟಕ ಸರ್ಕಾರ ಹಲವು ಪಟ್ಟು ಹೆಚ್ಚುವರಿ ತೆರಿಗೆ ವಿಧಿಸುತ್ತಿರುವ ಹಿನ್ನೆಲೆ ಕೇಂದ್ರದ ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೊಂದಿಗೆ ಮಹತ್ವದ ಸಭೆ ನಡೆಸಿದರು. ಗಣಿ ಮತ್ತು ಉಕ್ಕು ವಲಯಗಳ ಮೇಲೆ ಬೀರಬಹುದಾದ ಪ್ರತಿಕೂಲಕರ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ್ರು.

ನವದೆಹಲಿಯ ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ  ನಡೆದ ಈ ಸಭೆಯಲ್ಲಿ ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್, ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ ಅಧ್ಯಕ್ಷ ಅಮಿತವ್ ಮುಖರ್ಜಿ, ಕಾನೂನು ಸಚಿವಾಲಯದ ಅಧಿಕಾರಿಗಳು ಹಾಗೂ ಹಲವು ಗಣಿ ಕಂಪನಿಗಳ ಉನ್ನತಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸುತ್ತಿರುವ ಪರಿಣಾಮ ದೇಶಿಯ ಉಕ್ಕು ಮತ್ತು ಗಣಿ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಒಟ್ಟಾರೆ ಸಾಧಕ ಬಾಧಕಗಳ ಬಗ್ಗೆ ಸಚಿವ ಮೇಘವಾಲ್ ಅವರೊಂದಿಗೆ ಮಾಹಿತಿ ಹಂಚಿಕೊಂಡರು ಕುಮಾರಸ್ವಾಮಿ ಅವರು.

ಸಭೆಯಲ್ಲಿ ಕೇಂದ್ರದ ಉಕ್ಕು ಸಚಿವರು ಹಲವು ಮಹತ್ವದ ಅಂಶಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

2047ಕ್ಕೆ ಪ್ರಧಾನಿ ಮೋದಿ ಅವರು ವಿಕಸಿತ ಭಾರತ ಸಾಕಾರ ಮಾಡುವ ಗುರಿ ಹೊಂದಿದ್ದಾರೆ. ಜಗತ್ತಿನ ಮೂರನೇ ಬೃಹತ್ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮುವ ಬಗ್ಗೆ ಪ್ರಧಾನಿಗಳು ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಮುಖ್ಯವಾಗಿ 2030ನೇ ವರ್ಷದ ವೇಳೆಗೆ ಭಾರತವು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿಯನ್ನು ನಿಗದಿ ಮಾಡಿದ್ದಾರೆ.

ಇಂತ ಮಹತ್ವಾಕಾಂಕ್ಷೆ ಗುರಿಗಳು ನಮ್ಮ ಮುಂದೆ ಇರುವಾಗ ಗಣಿ ಮತ್ತು ಉಕ್ಕು ಕ್ಷೇತ್ರದಲ್ಲಿರುವ ಅಡೆತಡೆಗಳನ್ನು ನಿವಾರಣೆ ಮಾಡಿಕೊಳ್ಳಬೇಕಾಗಿದೆ ಎಂದು ಸಚಿವರು ಹೇಳಿದರು.ಕುಮಾರಸ್ವಾಮಿ ಅವರ ಮಾತಿಗೆ ದನಿಗೂಡಿಸಿದ ಸಚಿವ ಮೇಘವಾಲ್ ಅವರು; ಪ್ರಧಾನಿಗಳ ಕನಸು ನನಸು ಮಾಡಬೇಕಾದರೆ ನಾವು ಒಮ್ಮತ ಹೆಜ್ಜೆಗಳನ್ನು ಇಟ್ಟು ಕ್ರಮ ವಹಿಸಬೇಕಾಗಿದೆ ಎಂದರು.

Author

Leave a Reply

Your email address will not be published. Required fields are marked *