ಬೆಂಗಳೂರು: ಕನ್ನಡ ಸಿನಿಮಾ ಮಾರುಕಟ್ಟೆಗೆ ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಕೋಟಿ ಸಿನಿಮಾ ಮೂಲಕ ಕಾಲಿಟ್ಟಿದೆ. ಕನ್ನಡದ ಅತಿ ಪ್ರತಿಭಾವಂತ ನಟ ಧನಂಜಯ ಈ ಸಿನಿಮಾ ನಾಯಕರಾಗಿದ್ದು ಪರಮ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಇದರ ಟೀಸರ್ ಬಿಡುಗಡೆ ಸಮಾರಂಭ ಇಂದು ಬೆಂಗಳೂರಿನಲ್ಲಿ ನಡೆಯಿತು.

ಬೈಪನ್ ಭಾರಿ ದೇವಾ (ಮರಾಠಿ), ಆರ್ಟಿಕಲ್ 370, ತೇರಿ ಬಾತೋಂಮೆ ಐಸಾ ಉಲ್ಜಾಜಿಯಾ, ಶೈತಾನ್ ಮತ್ತು ಲಾಪಾತಾ ಲೇಡೀಸ್ ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ಜಿಯೋ ಸ್ಟುಡಿಯೋಸ್ ಕೊಟ್ಟಿದೆ. ಈಗ ಕನ್ನಡ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ತನ್ನ ಸ್ಥಾನವನ್ನು ಈ ನಿರ್ಮಾಣ ಸಂಸ್ಥೆ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

ನಟಿಸುವ ಬದಲು ಪಾತ್ರವೇ ಆಗಿಬಿಡುವ ಧನಂಜಯ ಕನ್ನಡದ ಸೂಕ್ಷ್ಮ ನಟ. ತಮ್ಮ ಹೊಸ ಸಿನಿಮಾ ʼಕೋಟಿʼಯ ಪಾತ್ರದ ಬಗ್ಗೆ ಎಕ್ಸೈಟ್ ಆಗಿರುವ ಅವರು ಈ ಸಿನಿಮಾದಲ್ಲಿ ಅಭಿನಯದ ಹೊಸ ಮಗ್ಗುಲುಗಳನ್ನು ಅನ್ವೇಷಿಸಿದ್ದಾರೆ.

‘ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ತಿರ್ತಾರೆ. ನಮ್ ಕೋಟಿನೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡ್ಕೋಬಹುದು ಅಂದ್ಕೋತಾ ಇರ್ತಾರೆ ʼ ಎಂದು ಪಾತ್ರದ ಬಗ್ಗೆ ಮಾತಾಡುತ್ತಾರೆ ಧನಂಜಯ.

“ಮಜಾ ಅಂದ್ರೆ ಎಲ್ರೊಳಗೂ ಕೋಟಿಯಂಥ ಒಬ್ಬ ವ್ಯಕ್ತಿ ಇರ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಸಿನಿಮಾ ನೋಡಬೇಕು’ ಎಂದು ಸೇರಿಸಲು ಅವರು ಮರೆಯುವುದಿಲ್ಲ.

ಈ ಸಿನಿಮಾ ನಿರ್ದೇಶಿಸುತ್ತಿರುವುದು ಪರಮ್. ಇದು ಅವರ ಚೊಚ್ಚಲ ಸಿನಿಮಾ. ಸಿನಿಮಾ ನಿರ್ದೇಶಕನಾಗಿ ಮೊದಲ ಅನುಭವವಾದರೂ ಕತೆ ಹೇಳುವುದು ಅವರಿಗೆ ಹೊಸದಲ್ಲ. ಟೆಲಿವಿಷನ್ ಚಾನೆಲ್ಲಿನಲ್ಲಿ ಹಲವು ಯಶಸ್ವೀ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ರೂಪಿಸಿದ ಅನುಭವವಿರುವ ಅವರು ಇಲ್ಲಿ ವಿಶಾಲ ಕ್ಯಾನ್ವಾಸಿನಲ್ಲಿ ಕತೆ ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ.

Author

Leave a Reply

Your email address will not be published. Required fields are marked *