ಹುಬ್ಬಳ್ಳಿ : ಪ್ರಲ್ಹಾದ್ ಜೋಶಿ. ಬಿಜೆಪಿಯ ಪವರ್ ಫುಲ್ ನಾಯಕ.. ಪ್ರಧಾನಿ ನರೇಂದ್ರ ಮೋದಿಯವರ ನೆರಳಿನಂತೆ ಇರುವವರು. ಈಗ ಅವರಿಗೆ ಬಸವ ಕಂಟಕ ಪ್ರಾರಂಭವಾಗಿದೆ. ಅವರು ಪ್ರತಿನಿಧಿಸುವ ಧಾರವಾಡ -ಹುಬ್ಬಳ್ಳಿಯಲ್ಲೇ ಈ ಬೆಳವಣಿಗೆ ನಡೆದಿದೆ.
ಲಿಂಗಾಯತ ಪ್ರಾಬಲ್ಯ ಇರುವ ಈ ಕ್ಷೇತ್ರದಿಂದ ಸದಾ ಆಯ್ಕೆಯಾಗುತ್ತ ಬಂದಿದ್ದಾರೆ. ಇಲ್ಲಿನ ಲಿಂಗಾಯತರು ಜೋಶಿಯವರನ್ನು ತಮ್ಮವರು ಎಂದು ಆಯ್ಕೆ ಮಾಡುತ್ತ ಬಂದಿದ್ದಾರೆ. ಆದರೆ ಅವರ ನಡವಳಿಕೆ, ಮಠಾಧೀಶರ ಜೊತೆ ನಡೆದುಕೊಳ್ಳುವ ರೀತಿ ಅವರಿಗೆ ಮುಳುವಾಗುತ್ತಿದೆ. ಬಿಜೆಪಿಯ ಬೆನ್ನೆಲುಬಾದ ಮಠಾಧೀಶರು ಪ್ರಲ್ಹಾದ್ ಜೋಶಿ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ನಡೆದ ಮಠಾಧೀಶರ ಸಮಾವೇಶ ಜೋಶಿ ಅವರಿಗೆ ಟಿಕೆಟ್ ಅನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿದೆ.
ಮಾರ್ಚ್ 31 ರೊಳಗೆ ಅವರಿಗೆ ನೀಡಿರುವ ಟಿಕೆಟ್ ಅನ್ನು ವಾಪಸ್ಸು ಪಡೆಯಬೇಕು. ಬೇರೆಯವರಿಗೆ ಟಿಕೆಟ್ ನೀಡಬೇಕು ಎಂದು ಮಠಾಧೀಶರು ಆಗ್ರಹಪಡಿಸಿದ್ದಾರೆ. ಇಲ್ಲದಿದ್ದರೆ ಏಪ್ರಿಲ್ 2 ರಂದು ಇನ್ನೊಮ್ಮೆ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ.
ಈ ಮಠಾಧೀಶರ ಸಭೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ, ಮೂರು ಸಾವಿರ ಮಠದ ಸ್ವಾಮೀಜಿಗಳು ಸೇರಿದಂತೆ ಹಲವು ಮಠಾಧೀಶರು ಪಾಲ್ಗೊಂಡಿದ್ದರು. ಅವರು ಕೈಗೊಂಡ ನಿರ್ಣಯದಲ್ಲಿ ಜೋಶಿ ಅವರ ವಿರುದ್ಧ ಗಂಭೀರ ಆರೋಪವನ್ನು ಮಾಡಲಾಗಿದೆ. ಎಚ್ಚರಿಕೆಯನ್ನು ನೀಡಲಾಗಿದೆ.
ಸಭೆಯ ನಿರ್ಣಯಗಳು:
- ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕೇ ಹೊರತು ಇತರರನ್ನು ತುಳಿದು ರಾಜಕಾರಣ ಮಾಡಬಾರದು.
- ಧಾರವಾಡ ಮತಕ್ಷೇತ್ರಕ್ಕೆ ಕೇಂದ್ರ ಸಚಿವರಿಗೆ ಟಿಕೆಟ್ ಘೋಷಣೆಯಾಗಿದೆ. ಅದನ್ನು ಬದಲಾವಣೆ ಮಾಡಬೇಕು-ಬೇರೆ ಕ್ಷೇತ್ರಕ್ಕೆ ಅಥವಾ ಪಕ್ಷದ ಕೆಲಸಕ್ಕೇ ಬಳಸಬೇಕು.
- ಇಲ್ಲಿಯ ಮಾಜಿ ಸಿಎಂಗೆ ಬೇರೆ ಕ್ಷೇತ್ರ ಕೊಟ್ಟಂತೆ ಮತ್ತು ೪ ಸಾರೆ ಲಿಂಗಾಯತರು ಇವರ ಬೆನ್ನಿಗೆ ನಿಂತು ಗೆಲ್ಲಿಸಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ.
- ಆ ಉಪಕಾರಕ್ಕೆ ಕ್ಷೇತ್ರ ತ್ಯಾಗ ಮಾಡಲಿ ಹಾಗೂ ಲಿಂಗಾಯತರ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವೇ ಆದರೆ ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ನಿಲ್ಲಿಸಲಿ. ಆರಿಸಿ ತರಲಿ.
- ಬದಲಾವಣೆಗೆ ಕಾರಣ ಬಹುಸಂಖ್ಯಾತ ಲಿಂಗಾಯತ ಹಾಗೂ ಇತರ ಸಮಾಜದ ನಾಯಕರನ್ನು ನೌಕರ, ವ್ಯಾಪಾರಿ, ಸ್ವಾಮಿಗಳು ಇವರಿಂದ ತುಳಿತಕ್ಕೊಳಗಾಗಿದ್ದಾರೆ.
- ಇವರ ಸೇಡಿನ ರಾಜಕಾರಣದಿಂದ ನಮ್ಮ ಬಹಳ ನಾಯಕರು ಜಾತ್ಯಾತೀತವಾಗಿ ತುಳಿತಕ್ಕೆ ಒಳಗಾಗಿದ್ದಾರೆ, ದುರ್ಬಲರಾಗಿದ್ದಾರೆ. ಮಾನಸಿಕ, ದೈಹಿಕ, ಆರ್ಥಿಕ, ರಾಜಕೀಯವಾಗಿ ಕುಸಿದು ಬಿಟ್ಟಿದ್ದಾರೆ. ಮಹಿಳಾ ಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ.
- ಐಟಿ-ಇಡಿ ಇತರ ದಾಳಿಯ ದಾಳ ಮತ್ತು ಭಯ ಉಂಟು ಮಾಡಿ ಬಾಯಿಬಿಟ್ಟು ಮಾತಾಡದ ಹಾಗೆ ಮಾಡಿದ್ದರಿಂದ ಸ್ವಾತಂತ್ರ್ಯ ಹೀನರಾಗಿ ದಾಸ್ಯತ್ವದಲ್ಲಿ ಬದುಕಿದ್ದಾರೆ.







