ಉತ್ತರ – ದಕ್ಷಿಣ ಕರ್ನಾಟಕ ಲಿಂಗಾಯತರ ಸಂಘಟನೆ ಅಗತ್ಯ: ಸಚಿವ ಎಂ ಬಿ ಪಾಟೀಲ

Lingayat Organization; ಉತ್ತರ‌ ಮತ್ತು ದಕ್ಷಿಣ ಕರ್ನಾಟಕದ ಲಿಂಗಾಯತರು ಒಟ್ಟಾಗುವುದರ ಜತೆಗೆ, ಎಲ್ಲ ಉಪ ಪಂಗಡಗಳನ್ನೂ ಒಂದು ಮಾಡಿ ಸಮನ್ವಯ ಸಾಧಿಸಬೇಕು. ಅನೇಕ ಉಪ ಪಂಗಡಗಳು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಈ ನ್ಯೂನತೆಯನ್ನು ಸರಿಪಡಿಸುವ ಕೆಲಸ ಮೊದಲು ಆಗಬೇಕಾಗಿದೆ

ಮೈಸೂರು: ಈಗ ಉತ್ತರ ಮತ್ತು ದಕ್ಷಿಣ ಕರ್ನಾಟಕ- ಎರಡೂ ಪ್ರಾದೇಶಿಕ ಭಾಗಗಳ ಸಮಸ್ತ ಲಿಂಗಾಯತರ ಸಂಬಂಧ ಮತ್ತು ಸಂಪರ್ಕ ಗಾಢವಾಗಬೇಕಾದ ಅಗತ್ಯವಿದೆ. ಇದು ಸಾಧ್ಯವಾದರೆ ಲಿಂಗಾಯತ ಸಮುದಾಯದ ಸಂಘಟನೆ ಮತ್ತಷ್ಟು ವ್ಯವಸ್ಥಿತವಾಗಿ ಆಗಲಿದೆ ಎಂದು ಸಮುದಾಯದ ಹಿರಿಯ ಮುಖಂಡರೂ ಆದ ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಮೈಸೂರಿನ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತರ‌ ಮತ್ತು ದಕ್ಷಿಣ ಕರ್ನಾಟಕದ ಲಿಂಗಾಯತರು ಒಟ್ಟಾಗುವುದರ ಜತೆಗೆ, ಎಲ್ಲ ಉಪ ಪಂಗಡಗಳನ್ನೂ ಒಂದು ಮಾಡಿ ಸಮನ್ವಯ ಸಾಧಿಸಬೇಕು. ಅನೇಕ ಉಪ ಪಂಗಡಗಳು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಈ ನ್ಯೂನತೆಯನ್ನು ಸರಿಪಡಿಸುವ ಕೆಲಸ ಮೊದಲು ಆಗಬೇಕಾಗಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಸಿದ್ಧಗಂಗೆ ಮತ್ತು ಸುತ್ತೂರು ಮಠಗಳು ಅಪಾರ ಕೆಲಸ ಮಾಡಿವೆ. ಈಗ ಸಂಘಟನೆಯ ದೃಷ್ಟಿಯಿಂದ ಉತ್ತರ ಭಾಗದವರು ದಕ್ಷಿಣ ಭಾಗದವರಿಗೆ ಸ್ಪಂದಿಸುವ ಕೆಲಸ ಮಾಡಲಿದ್ದೇವೆ. ಜತೆಗೆ ಸಮುದಾಯದ ನ್ಯಾಯಯುತ ಬೇಡಿಕೆಗಳಿಗೆ ಸರಕಾರದ ಬೆಂಬಲವೂ ಇರಲಿದೆ ಎಂದು ಅವರು ನುಡಿದರು.

ನಾವು ನಮ್ಮ ಧರ್ಮವನ್ನು ಪ್ರೀತಿಸಬೇಕು. ಜೊತೆಗೆ ಉಳಿದ ಧರ್ಮಗಳನ್ನು ಗೌರವಿಸಬೇಕು. ಹಿಂದಿನ ಸಲ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದೆವು. ಈ ಬಾರಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆವು ಎಂದು ಅವರು ಹೇಳಿದರು.

ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಿದ ಕೀರ್ತಿ ಶಿರಸಂಗಿಯ ಲಿಂಗರಾಜ ದೇಸಾಯಿ ಅವರಿಗೆ ಸಲ್ಲುತ್ತದೆ. ಅವರು ವೀರಶೈವ -ಲಿಂಗಾಯತ ಮಹಾಸಭೆ ಹುಟ್ಟು ಹಾಕಿದರು. ಹರ್ಡೀಕರ್ ಮಂಜಪ್ಪನವರು ಬಸವ ಜಯಂತಿಗೆ ಒಂದು ಅರ್ಥಪೂರ್ಣ ರೂಪ ಕೊಟ್ಟರು. ಫ.ಗು.ಹಳಕಟ್ಟಿ ಅವರು ಒಟ್ಟು 700ಕ್ಕೂ ಹೆಚ್ಚು ವಚನಕಾರರನ್ನು ಗುರುತಿಸಿದರು. ಸಂಸ್ಕೃತಮಯವಾಗಿದ್ದ ಕನ್ನಡಕ್ಕೆ ಇಲ್ಲಿನ ಸಹಜ ರೂಪ ಕೊಟ್ಟ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಎಂದು ಅವರು ವಿವರಿಸಿದರು.

Author

error: