ಹಿಂದುಳಿದ ವರ್ಗಗಳಿಗೂ ರಾಜಕೀಯ ಮೀಸಲಾತಿ ನೀಡಿ: ಸಂತೋಷ್ ಲಾಡ್ ಆಗ್ರಹ
ಬೆಂಗಳೂರು, ಸೆ.೦6: ದೇಶದ ಹಿಂದುಳಿದ ವರ್ಗಗಳಿಗೂ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ ರಾಜಕೀಯ ಮೀಸಲಾತಿ ನೀಡಬೇಕು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ‘ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನಜಾಗೃತಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಸುಮಾರು 65 ಕೋಟಿಗೂ ಅಧಿಕವಾಗಿದ್ದು, ಇದು ಒಟ್ಟು ಜನಸಂಖ್ಯೆಯ ಶೇ.50ರಷ್ಟಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ದೊರೆಯುತ್ತಿರುವ ರಾಜಕೀಯ ಪ್ರಾತಿನಿಧ್ಯವನ್ನು ವಿಧಾನಸಭೆ ಮತ್ತು ಲೋಕಸಭೆಗಳಿಗೂ ವಿಸ್ತರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಅಧಿಕಾರದಲ್ಲಿ ಪಾಲು ದೊರೆತಾಗ ಮಾತ್ರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಲಾಡ್ ಹೇಳಿದರು.
ದೇಶದ ವಿವಿಧ ರಾಜ್ಯಗಳಲ್ಲಿರುವ ಹಿಂದುಳಿದ ವರ್ಗಗಳ ಜನಸಂಖ್ಯೆಯ ಪ್ರಮಾಣವನ್ನು ಪ್ರಸ್ತಾಪಿಸಿದ ಅವರು, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಜತೆಗೆ ರಾಜಕೀಯ ಪ್ರಾತಿನಿಧ್ಯವೂ ಅಗತ್ಯ ಎಂದು ಪ್ರತಿಪಾದಿಸಿದರು.
ಹಿಂದುಳಿದ ವರ್ಗಗಳ ಸಾಮಾಜಿಕ ಅಭಿವೃದ್ಧಿಗಾಗಿ ಮಹಾತ್ಮ ಜ್ಯೋತಿಬಾ ಫುಲೆ, ಛತ್ರಪತಿ ಶಾಹೂ ಮಹಾರಾಜ್, ಗಾಯಕ್ವಾಡ್ ಮಹಾರಾಜರು ಹಾಗೂ ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವು ನಾಯಕರು ನಡೆಸಿದ ಪ್ರಯತ್ನಗಳನ್ನು ಲಾಡ್ ಸ್ಮರಿಸಿದರು.
ಮೀಸಲಾತಿಯ ಉದ್ದೇಶವನ್ನು ವಿವರಿಸುವ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಅವರು, “Reservation is a constitutional weapon of social justice, not charity, not a poverty alleviation scheme” ಎಂದು ಹೇಳಿದರು.
ಲಾಡ್ ಅವರ ಭಾಷಣಕ್ಕೆ ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನರು ಚಪ್ಪಾಳೆ ಹಾಗೂ ಶಿಳ್ಳೆಗಳ ಮೂಲಕ ಬೆಂಬಲ ವ್ಯಕ್ತಪಡಿಸಿದರು.







