ಶಿವಮೊಗ್ಗ : ಸಂಸದ ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಅವರ ವೀಡಿಯೋಗಳನ್ನು ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್ ಎಂದು ಬಿಜೆಪಿಗೆ ಗೊತ್ತಿತ್ತು. ಹೀಗಿದ್ದರೂ ಅವರ ಪರ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿಯನ್ನು ಗುರಿಯಾಗಿಸಿಕೊಂಡು “ಮಾಸ್ ರೇಪಿಸ್ಟ್” ಪರವಾಗಿ ಮತಯಾಚಿಸಿದ್ದಕ್ಕಾಗಿ ಅವರು ದೇಶದ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದರು.

ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾರೆ. ಇದು ಲೈಂಗಿಕ ಹಗರಣವಲ್ಲ. ಮಾಸ್ ಅತ್ಯಾಚಾರ ಎಂದು ರಾಹುಲ್ ಆರೋಪಿಸಿದರು.

ನೀವು ಈ ರೇಪಿಸ್ಟ್‌ಗೆ ಮತ ಹಾಕಿದರೆ ಅದು ನನಗೆ ಸಹಾಯ ಮಾಡುತ್ತದೆ ಎಂದು ಅವರು ಕರ್ನಾಟಕದ ಜನತೆಗೆ ಹೇಳಿದರು. ಆದರೆ ಪ್ರಧಾನಿ ನಿಮ್ಮ ಮತವನ್ನು ಕೇಳುವಾಗ ಪ್ರಜ್ವಲ್ ಏನು ಮಾಡಿದರು ಎಂಬುದು ಕರ್ನಾಟಕದ ಪ್ರತಿಯೊಬ್ಬ ಮಹಿಳೆಗೆ ತಿಳಿದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಪ್ರಜ್ವಲ್ ಒಬ್ಬ ಮಾಸ್ ಅತ್ಯಾಚಾರಿ ಎಂದು ಪ್ರತಿಯೊಬ್ಬ ಬಿಜೆಪಿ ನಾಯಕರಿಗೆ ತಿಳಿದಿದ್ದರೂ ಅವರು ಅವರನ್ನು ಬೆಂಬಲಿಸಿದರು ಮತ್ತು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡರು ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಧಾನಿ ಮೋದಿ ಪ್ರಜ್ವಲ್ ರೇವಣ್ಣ ಪರ ಮತಯಾಚಿಸುವ ಮೂಲಕ ಭಾರತದ ಪ್ರತಿಯೊಬ್ಬ ಮಹಿಳೆಯನ್ನು ಅವಮಾನಿಸಿದ್ದಾರೆ. ಪ್ರಧಾನಿ, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ಲಾ ಬಿಜೆಪಿ ನಾಯಕರು ದೇಶದ ಪ್ರತಿಯೊಬ್ಬ ಮಹಿಳೆಯರ ಕ್ಷಮೆಯಾಚಿಸಬೇಕು. ವಿಶ್ವದ ಯಾವುದೇ ನಾಯಕ “ಮಾಸ್ ಅತ್ಯಾಚಾರಿ” ಪರವಾಗಿ ಮತ ಕೇಳುವುದಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.

Author

Leave a Reply

Your email address will not be published. Required fields are marked *