ನವದೆಹಲಿ : ಕಾಲಮಿತಿಯೊಳಗೆ ಕೆಎಫ್ ಡಿ ತಡೆಗೆ ಲಸಿಕೆ ಲಭ್ಯತೆ ಅಗತ್ಯವಾಗಿದ್ದು, 2026ರ ವೇಳೆಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಎಫ್ ಡಿ ಲಸಿಕೆ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೆಹಲಿಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕರನ್ನ ಭೇಟಿ ಮಾಡಿ ಚೆರ್ಚೆ ನಡೆಸಿ ಪ್ರಕಟಣೆ ಹೊರಡಿಸಿರುವ ಅವರು, ಲಸಿಕೆಯ ಎರಡನೇ ಹಂತವನ್ನ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು.
2025ರ ಏಪ್ರಿಲ್ ತಿಂಗಳಲ್ಲಿ ಲಸಿಕೆಯ ಮಾನವ ಪ್ರಯೋಗಗಳನ್ನ ನಡೆಸಲು ಯೋಜಿಸಲಾಗಿದ್ದು, 2026 ರಲ್ಲಿ ಲಸಿಕೆ ಬಳಕೆಗೆ ಲಭ್ಯವಿರುತ್ತದೆ. ಕೆಎಫ್.ಡಿ ಲಸಿಕೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ವೀತ್ತಿಯ ನೆರವು ಒದಗಿಸುವಂತೆ ICMR ನಿರ್ದೇಶಕರಿಗೆ ಕೇಳಲಾಗಿದೆ ಎಂದರು.
ರಾಜ್ಯದ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಗೆ ICMR ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜು ಮಕ್ಕಳನ್ನ ರಕ್ತಗೀನತೆ ತಪಾಸಣೆಗೆ ಒಳಪಡಿಸುತ್ತಿರುವುದು ಉತ್ತಮ ಯೋಜನೆ ಎಂದಿದ್ದಾರೆ. ಅಲ್ಲದೇ ಭಾರತ ಸರ್ಕಾರದ ರಕ್ತ ಹೀನತೆ ಮುಕ್ತ ಭಾರತ್ 2.O ಯೋಜನೆಗೆ ಅನುಗುಣವಾಗಿ ಯೋಜನೆ ವಿಸ್ತರಿಸುವಂತೆ ಸಚಿವರಲ್ಲಿ ವಿನಂತಿಸಿದರು.
ರಾಜ್ಯದಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೈಗೊಂಡಿರುವ ನವೀನ ತಂತ್ರಜ್ಞಾನಗಳ ಬಗ್ಗೆ ಆಸಕ್ತಿ ತೋರಿದ ICMR ನಿರ್ದೇಶಕರು, ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನ ದೇಶದ ಇತರ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ICMR ನಿರ್ದೇಶಕರು ಸಚಿವರಿಗೆ ತಿಳಿಸಿದರು.
ಆರೋಗ್ಯ ಸೇವೆಗಳ ಉತ್ತಮ ವಿತರಣೆಗಾಗಿ ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ವಿಶೇಷ ಯೋಜನೆಗಳನ್ನು ಕೈಗೊಳ್ಳುವಲ್ಲಿ ಪರಸ್ಪರ ಸಹಕರಿಸುವ ನಿಟ್ಟಿನಲ್ಲಿ ಭೇಟಿ ವೇಳೆ ಚರ್ಚೆ ನಡೆಸಲಾಯಿತು.
ಸಚಿವರ ಜೊತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ, NHM ಎಂ.ಡಿ ನವೀನ್ ಭಟ್ ಉಪಸ್ಥಿತರಿದ್ದರು.







