ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಸ್ತಾರೆ ಅವರು ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರಿಗೆ 58 ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ.
ನಿರೂಪಕಿ ಅಪರ್ಣಾ ಅವರು, 1989ರಲ್ಲಿ ನಿರೂಪಕಿಯಾಗಿ ಟಿವಿ ಮಾಧ್ಯಮಕ್ಕೆ ಸೇರಿದರು. ಅದಕ್ಕೂ ಮುನ್ನಾ 1984ರಲ್ಲಿ ತೆರೆಕಂಡಂತ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂ ಚಿತ್ರದಲ್ಲಿಯೂ ಕಾಣಿಸಿಕೊಂಡು, ಸಿನಿ ರಂಗದ ಜರ್ನಿ ಆರಂಭಗೊಂಡಿತ್ತು.
ಮಸಣದ ಹೂ ಬಳಿಕ ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಪರ್ಣಾ ನಟಿಸಿ, ಸ್ಯಾಂಡಲ್ ವುಡ್ ನಟಿಯ ಖ್ಯಾತಿಯನ್ನೂ ಗಳಿಸಿದರು. 90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ನಿರೂಪಣೆ ಮಾಡಿದ್ದರು. ಆ ನಂತರ ರೇಡಿಯೋ ಜಾಕಿಯಾಗಿ ಕೂಡ ಕೆಲಸ ಮಾಡಿದ್ದಾರೆ. 1998 ರಲ್ಲೇ ದೀಪಾವಳಿ ಕಾರ್ಯಕ್ರಮದಲ್ಲಿ 8 ಗಂಟೆಗಳ ನಿರೂಪಣೆ ಮಾಡಿ ಹೊಸ ದಾಖಲೆ ಬರೆದದ್ದು ಇವರ ಮತ್ತೊಂದು ಕೀರ್ತಿ.
ಮೂಡಲ ಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ರು. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದರು. ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.
ಅಪರ್ಣಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರ ರಂಗದ ಅನೇಕ ನಟ/ನಟಿಯರು ಅಪರ್ಣಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
