ಭಾರತದ ಬಾಹ್ಯಾಕಾಶ ವಿಜ್ಞಾನವನ್ನು ಇಂದು ಜಗತ್ತು ಗೌರವದಿಂದ ನೋಡುವಾಗ, ಅದರ ಹಿಂದೆ ನಿಂತಿರುವ ಮೊದಲ ಹೆಸರು ಡಾ. ವಿಕ್ರಮ್ ಸಾರಾಭಾಯಿ. ಅವರು ಕೇವಲ ವಿಜ್ಞಾನಿ ಅಲ್ಲ; ವಿಜ್ಞಾನವನ್ನು ರಾಷ್ಟ್ರ ನಿರ್ಮಾಣದ ಸಾಧನವಾಗಿ ಕಂಡ ದೂರದೃಷ್ಟಿಯ ಚಿಂತಕ. ISRO (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಎಂಬ ಸಂಸ್ಥೆಯ ಹಿಂದೆ ಇರುವ ಆತ್ಮ, ಆಲೋಚನೆ ಮತ್ತು ತತ್ವವೇ ವಿಕ್ರಮ್ ಸಾರಾಭಾಯಿ.
ವಿಜ್ಞಾನಿಯ ಹಿಂದೆ ಇರುವ ಸಂಸ್ಕಾರ
ಆಗಸ್ಟ್ 12, 1919ರಂದು ಅಹಮದಾಬಾದ್‌ನಲ್ಲಿ ಜನಿಸಿದ ವಿಕ್ರಮ್ ಸಾರಾಭಾಯಿ, ಬೌದ್ಧಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಕುಟುಂಬದಲ್ಲಿ ಬೆಳೆದವರು. ಅವರ ತಾಯಿ ಸರಳಾದೇವಿ ಸಾರಾಭಾಯಿ ಸಮಾಜಸೇವಕಿ, ತಂದೆ ಅಂಬಾಲಾಲ್ ಸಾರಾಭಾಯಿ ಕೈಗಾರಿಕೋದ್ಯಮಿ. ಈ ಹಿನ್ನೆಲೆ ಅವರಲ್ಲಿ ವಿಜ್ಞಾನ ಮತ್ತು ಸಮಾಜ ಎಂಬ ಎರಡು ದೃಷ್ಟಿಕೋನಗಳನ್ನು ಬೆಳೆಸಿತು. ಅವರಿಗೊಂದು ಪ್ರಶ್ನೆ ಸದಾ ಇತ್ತು: ವಿಜ್ಞಾನ ಯಾವ ರೀತಿಯಲ್ಲಿ ಸಾಮಾನ್ಯ ಭಾರತೀಯನ ಬದುಕನ್ನು ಬದಲಿಸಬಹುದು? ಎಂಬುದು.
ಬಾಹ್ಯಾಕಾಶ ವಿಜ್ಞಾನ – ಐಶ್ವರ್ಯವಲ್ಲ, ಅವಶ್ಯಕತೆ
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆ ಒಂದು ಐಶ್ವರ್ಯ ಎಂದು ಅನೇಕರು ಭಾವಿಸಿದ್ದ ಕಾಲದಲ್ಲಿ, ಸಾರಾಭಾಯಿ ಅದನ್ನು ಅಭಿವೃದ್ಧಿಗೆ ಅವಶ್ಯಕ ಸಾಧನ ಎಂದು ಕಂಡರು. ಅವರ ದೃಷ್ಟಿಯಲ್ಲಿ ಉಪಗ್ರಹಗಳು ಕೇವಲ ಆಕಾಶದಲ್ಲಿರುವ ಯಂತ್ರಗಳಲ್ಲ; ಅವು ಶಿಕ್ಷಣ, ಕೃಷಿ, ಹವಾಮಾನ ಮುನ್ಸೂಚನೆ, ಸಂವಹನ ಮತ್ತು ಗ್ರಾಮೀಣ ಅಭಿವೃದ್ಧಿಗೆ ಉಪಯೋಗವಾಗಬೇಕಿತ್ತು. ಆ ಹಿನ್ನೆಲೆಯಲ್ಲಿ ಅವರ ಪ್ರಸಿದ್ಧ ಮಾತು ಇಂದಿಗೂ ಪ್ರಸ್ತುತ: “ನಾವು ಚಂದ್ರನಲ್ಲಿಗೆ ಹೋಗುವುದಕ್ಕಾಗಿ ಬಾಹ್ಯಾಕಾಶ ಕಾರ್ಯಕ್ರಮ ಆರಂಭಿಸುತ್ತಿಲ್ಲ; ಭೂಮಿಯ ಸಮಸ್ಯೆಗಳನ್ನು ಪರಿಹರಿಸಲು ಅದನ್ನು ಬಳಸಲು.”
ISRO – ಒಂದು ಸಂಸ್ಥೆ ಅಲ್ಲ, ಒಂದು ತತ್ವ
1960–70ರ ದಶಕದಲ್ಲಿ ವಿಕ್ರಮ್ ಸಾರಾಭಾಯಿ ಹಾಕಿದ ಅಡಿಗಲ್ಲಿನ ಮೇಲೆ ISRO ನಿರ್ಮಾಣವಾಯಿತು. ಕಡಿಮೆ ಸಂಪನ್ಮೂಲ, ಕಡಿಮೆ ತಂತ್ರಜ್ಞಾನ, ಆದರೆ ಅಪಾರ ಆತ್ಮವಿಶ್ವಾಸ – ಇದೇ ಅವರ ಮಾದರಿ. ತುಂಬಾ ಸೀಮಿತ ಮೂಲಸೌಕರ್ಯದಲ್ಲೇ, ತಿರುವನಂತಪುರಂ ಸಮೀಪದ ಥುಂಬಾದಲ್ಲಿ ಮೊದಲ ರಾಕೆಟ್ ಉಡಾವಣೆ ನಡೆದದ್ದು ಭಾರತೀಯ ವಿಜ್ಞಾನ ಇತಿಹಾಸದ ಮಹತ್ವದ ಕ್ಷಣ. 1975ರಲ್ಲಿ ಭಾರತದ ಮೊದಲ ಉಪಗ್ರಹ “ಆರ್ಯಭಟ” ತನ್ನ ಕಕ್ಷೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದು ಇಸ್ರೋದ ಯಶಸ್ಸಿಗೆ ಅವರು ಹಾಕಿಕೊಟ್ಟ ಬುನಾದಿ. ISROಗೆ ಅವರು ಕೊಟ್ಟ ಕೊಡುಗೆ ಕೇವಲ ಆಡಳಿತಾತ್ಮಕವಲ್ಲ; ಪ್ರತಿಭೆಯನ್ನು ಗುರುತಿಸುವ ದೃಷ್ಟಿ, ಯುವ ವಿಜ್ಞಾನಿಗಳ ಮೇಲೆ ನಂಬಿಕೆ ಮತ್ತು ವಿಫಲತೆಯನ್ನು ಪಾಠವಾಗಿ ನೋಡುವ ಮನೋಭಾವ ಇವೆಲ್ಲವೂ ISRO ಸಂಸ್ಕೃತಿಯ ಭಾಗವಾಗಿವೆ.
ವಿಜ್ಞಾನ ಮತ್ತು ಮಾನವೀಯತೆ – ಸಾರಾಭಾಯಿ ದೃಷ್ಟಿಕೋನ
ವಿಕ್ರಮ್ ಸಾರಾಭಾಯಿ ವಿಜ್ಞಾನವನ್ನು ಪ್ರಯೋಗಾಲಯದ ತಣ್ಣನೆಯ ವಿಷಯವಾಗಿ ನೋಡಲಿಲ್ಲ. ವಿಜ್ಞಾನವನ್ನು ಮಾನವೀಯತೆಯೊಂದಿಗೆ ಜೋಡಿಸಿದರು.
ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯ (Physical Research Laboratory), IIM, ಅಹಮದಾಬಾದ್ ಸ್ಥಾಪನೆಯಲ್ಲಿ ಅವರ ಪಾತ್ರ, ಅವರ ಬಹುಮುಖ ಚಿಂತನೆಯ ಸಾಕ್ಷಿ. ವಿಜ್ಞಾನಿಯಾಗಿದ್ದರೂ ಅವರು ಕಲೆ ಮತ್ತು ಸಂಸ್ಕೃತಿಯತ್ತ ಒಲವು ಹೊಂದಿದ್ದರು. ಅವರ ಪತ್ನಿ ಮೃಣಾಲಿನಿ ಸಾರಾಭಾಯಿ ಪ್ರಸಿದ್ಧ ನೃತ್ಯಗಾರ್ತಿ. ಈ ಸಂಗಮವೇ ಅವರ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿತು. ದೇಶದ ವೈಜ್ಞಾನಿಕ ಲೋಕಕ್ಕೊಂದು ದಿಶೆ ತೋರಿದ ಒಬ್ಬ ವಿಜ್ಞಾನಿ, ಪಿತ್ರಾರ್ಜಿತವಾಗಿದ್ದ ದೊಡ್ಡ ಕಂಪನಿಗಳ ಯಶಸ್ವಿ ನಾಯಕ, ಸಮಾಜಮುಖಿ, ಸಹೃದಯಿ ವಿಕ್ರಮ ಸಾರಾಭಾಯಿ ತ್ರಿವಿಕ್ರಮರಾಗಿ ತಮ್ಮ 52ನೇ ವಯಸ್ಸಿನಲ್ಲಿ ವಿಧಿವಶರಾದರು.
ಇಂದಿನ ಇಸ್ರೋದಲ್ಲಿ ಸಾರಾಭಾಯಿಯವರ ಪ್ರಭಾವ
ಇಂದು ಇಸ್ರೋ ಕಡಿಮೆ ವೆಚ್ಚದ ಮಿಷನ್‌ಗಳಿಗೆ ಜಗತ್ತಿನ ಗಮನ ಸೆಳೆಯುತ್ತಿದೆ. ಚಂದ್ರಯಾನ, ಮಂಗಳಯಾನ, ಉಪಗ್ರಹ ಉಡಾವಣೆಗಳಲ್ಲಿ ಕಂಡುಬರುವ ಸರಳತೆ ಮತ್ತು ನಿಖರತೆ ವಿಕ್ರಮ್ ಸಾರಾಭಾಯಿಯವರ ತತ್ವದ ಪ್ರತಿಫಲ. ಭಾರತದ ಬಾಹ್ಯಾಕಾಶ ಯಶಸ್ಸುಗಳು ಕೇವಲ ತಂತ್ರಜ್ಞಾನ ಸಾಧನೆಗಳಲ್ಲ;
ಅವು ಸಾಮಾನ್ಯ ಭಾರತೀಯನ ಬದುಕಿಗೆ ವಿಜ್ಞಾನವನ್ನು ತಲುಪಿಸುವ ಪ್ರಯತ್ನದ ಫಲ.
ವಿಕ್ರಮ್ ಸಾರಾಭಾಯಿ ಬದುಕಿದ್ದ ಕಾಲದಲ್ಲಿ ಇಸ್ರೋ ಇಂದಿನ ಮಟ್ಟಕ್ಕೆ ತಲುಪಿರಲಿಲ್ಲ. ಆದರೆ ಅವರು ಕೊಟ್ಟ ದಿಕ್ಕು ಇಸ್ರೋವನ್ನು ಇಲ್ಲಿಗೆ ತಂದು ನಿಲ್ಲಿಸಿದೆ.
ಅವರು ನಮಗೆ ಕಲಿಸಿದ ಪಾಠ – ವಿಜ್ಞಾನವು ಶಕ್ತಿಶಾಲಿಯಾಗಬೇಕು, ಆದರೆ ಅದು ಸದಾ ಮಾನವಕೇಂದ್ರಿತವಾಗಿರಬೇಕು. ಅದಕ್ಕಾಗಿಯೇ, ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಹೆಸರು – ವಿಕ್ರಮ್ ಸಾರಾಭಾಯಿ.
