ವಿಶ್ವ ತಂಬಾಕು ವಿರೋಧಿ ದಿನ: ಯುವಜನರನ್ನು ನುಂಗುತ್ತಿರುವ ಮತ್ತೊಂದು ಮೌನ ಮಹಾಮಾರಿ

ವಿಶ್ವ ತಂಬಾಕು ವಿರೋಧಿ ದಿನದ ಹಿನ್ನೆಲೆಯಲ್ಲಿ ಯುವಕರಲ್ಲಿ ಹೆಚ್ಚುತ್ತಿರುವ ಗುಟ್ಕಾ ಮತ್ತು ತಂಬಾಕು ವ್ಯಸನ, ಅದರ ಆರೋಗ್ಯ, ಫಲವತ್ತತೆ ಮತ್ತು ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ವಿಶ್ಲೇಷಣಾತ್ಮಕ ಲೇಖನ.

ಇವತ್ತು ಮೇ ೩೧. ವಿಶ್ವ ತಂಬಾಕು ವಿರೋಧಿ ದಿನ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆ ಮಾನವ ಸಮುದಾಯದ ಆರೋಗ್ಯದ ಮೇಲೆ ತಂಬಾಕು ಮತ್ತು ಅದರ ಉತ್ಪನ್ನಗಳು ಉಂಟುಮಾಡುತ್ತಿರುವ ಭೀಕರ ಪರಿಣಾಮಗಳನ್ನು ಗಮನಿಸಿ ಈ ದಿನವನ್ನು ಆಚರಿಸುತ್ತಿವೆ. ಈ ವರ್ಷದ ಘೋಷವಾಕ್ಯವೂ ಅತ್ಯಂತ ಅರ್ಥಪೂರ್ಣವಾಗಿದೆ — “ಮನವಿಯನ್ನು ಬಹಿರಂಗಪಡಿಸುವುದು”. ವಿಶೇಷವಾಗಿ ನಿಕೋಟಿನ್ ಮತ್ತು ತಂಬಾಕು ವ್ಯಸನಕ್ಕೆ ಯುವಜನರನ್ನು ಸೆಳೆಯಲು ಬಳಸಲಾಗುತ್ತಿರುವ ಉದ್ಯಮದ ಹೊಸ ತಂತ್ರಗಳನ್ನು ಬಯಲಿಗೆಳೆಯುವುದು ಇದರ ಮುಖ್ಯ ಉದ್ದೇಶ.

ಹಿಂದೆ ತಂಬಾಕು ಎಂದರೆ ಸಿಗರೇಟು ಅಥವಾ ಬೀಡಿ ಎನ್ನುವ ಕಲ್ಪನೆ ಇತ್ತು. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ವಿಶೇಷವಾಗಿ ಕರ್ನಾಟಕದಂತಹ ರಾಜ್ಯಗಳಲ್ಲಿ ಗುಟ್ಕಾ, ಪಾನ್ ಮಸಾಲಾ, ಫ್ಲೇವರ್ ತಂಬಾಕು, ನಿಕೋಟಿನ್ ಪೌಚ್ ಗಳಂತಹ ಉತ್ಪನ್ನಗಳು ಯುವಕರ ಬದುಕನ್ನೇ ಹಾಳು ಮಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಶಾಲೆ, ಕಾಲೇಜು, ಬಸ್ ನಿಲ್ದಾಣ, ಹಳ್ಳಿಗಳ ಅಂಗಡಿ, ನಗರಗಳ ಮೂಲೆ — ಎಲ್ಲೆಡೆ ಈ ವ್ಯಸನ ಸುಲಭವಾಗಿ ಸಿಗುತ್ತಿದೆ.

ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಸಿಗರೇಟು ಸೇದು ಹೊಗೆ ಉಗುಳುವ “ಸ್ಟೈಲ್” ನೋಡಿ ಹುಡುಗರು ಆಕರ್ಷಿತರಾಗುತ್ತಿದ್ದರು. ಕೆಲವರಿಗೆ ಅದು ಪುರುಷತ್ವದ ಸಂಕೇತದಂತೆ ಕಾಣುತ್ತಿತ್ತು. ಈಗ ಆ ಸ್ಥಾನವನ್ನು ಗುಟ್ಕಾ ಮತ್ತು ನಿಕೋಟಿನ್ ಉತ್ಪನ್ನಗಳು ಹಿಡಿದಿವೆ. “ಕೂಲ್”, “ಮಾಡರ್ನ್”, “ಟೆನ್ಷನ್ ರಿಲೀಫ್” ಎಂಬ ಹೆಸರಿನಲ್ಲಿ ಯುವಕರಿಗೆ ನಿಧಾನವಾಗಿ ವಿಷವನ್ನು ಮಾರಲಾಗುತ್ತಿದೆ. ಹಲವರು ಹೈಸ್ಕೂಲ್ ಹಂತದಲ್ಲೇ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಒಮ್ಮೆ ಅಭ್ಯಾಸ ಆರಂಭವಾದರೆ ಅದರಿಂದ ಹೊರಬರುವುದು ತುಂಬ ಕಷ್ಟ.

ಇಲ್ಲಿ ಗಮನಿಸಬೇಕಾದ ದೊಡ್ಡ ವಿಚಾರವೇನೆಂದರೆ — ತಂಬಾಕು ಉದ್ಯಮದ ಮಾರ್ಕೆಟಿಂಗ್ ತಂತ್ರಗಳು ಈಗ ಬಹಳ ಸೂಕ್ಷ್ಮವಾಗಿವೆ. ನೇರ ಜಾಹಿರಾತುಗಳಿಗಿಂತ ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್ ಇನ್‌ಫ್ಲುಯೆನ್ಸರ್‌ಗಳು, ಸಿನಿ ನಟರು, ವೆಬ್ ಸೀರೀಸ್, ಕ್ರಿಕೆಟ್ ಸಂಸ್ಕೃತಿ, ಮ್ಯೂಸಿಕ್ ವಿಡಿಯೋಗಳು ಇತ್ಯಾದಿಗಳ ಮೂಲಕ ಪರೋಕ್ಷ ಪ್ರಚಾರ ನಡೆಯುತ್ತಿದೆ. ಯುವಕರು ತಮಗೆ ಇಷ್ಟವಾದ ವ್ಯಕ್ತಿಗಳ ನಡವಳಿಕೆಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ಅವರ ಮೇಲೆ ಈ ಪ್ರಭಾವ ಇನ್ನಷ್ಟು ಗಾಢವಾಗುತ್ತದೆ.

ದುಃಖದ ಸಂಗತಿ ಎಂದರೆ ತಂಬಾಕಿನ ದುಷ್ಪರಿಣಾಮಗಳನ್ನು ಚೆನ್ನಾಗಿ ಅರಿತಿರುವವರೂ ಕೂಡ ಇದರಿಂದ ದೂರವಿಲ್ಲ. ವೈದ್ಯರು, ಶಿಕ್ಷಕರು, ಅಧಿಕಾರಿಗಳು, ವಿದ್ಯಾವಂತರು, ಮಾಧ್ಯಮ ಕ್ಷೇತ್ರದ ಜನರು — ಅನೇಕರು ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಕೆಲವರು ಅದರ ಜಾಹಿರಾತುಗಳಿಗೂ ಮುಖವಾಗುತ್ತಾರೆ. ಸಮಾಜದಲ್ಲಿ ಗೌರವ ಹೊಂದಿರುವ ವ್ಯಕ್ತಿಗಳೇ ಈ ರೀತಿಯಾಗಿ ಕಾಣಿಸಿಕೊಂಡಾಗ ಯುವಕರಿಗೆ “ಇದು ಅಷ್ಟು ಅಪಾಯಕರವಲ್ಲ” ಎಂಬ ತಪ್ಪು ಸಂದೇಶ ಹೋಗುತ್ತದೆ.

ವಿಶ್ವ ಮಟ್ಟದಲ್ಲಿ ಪ್ರತಿವರ್ಷ ಸುಮಾರು ೮ ದಶಲಕ್ಷ ಜನರು ತಂಬಾಕು ಸಂಬಂಧಿತ ರೋಗಗಳಿಂದ ಮರಣ ಹೊಂದುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಕ್ಯಾನ್ಸರ್, ಹೃದಯ ರೋಗ, ಉಸಿರಾಟದ ಸಮಸ್ಯೆಗಳು, ಬಾಯಿ ಕ್ಯಾನ್ಸರ್, ಶ್ವಾಸಕೋಶದ ಹಾನಿ — ಇವೆಲ್ಲವೂ ತಂಬಾಕಿನೊಂದಿಗೆ ನೇರ ಸಂಬಂಧ ಹೊಂದಿವೆ. ಕರ್ನಾಟಕದಲ್ಲಿ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಗುಟ್ಕಾ ಮತ್ತು ಜರ್ದಾ ಬಳಕೆಯ ಪರಿಣಾಮವೆಂದು ವೈದ್ಯರು ಎಚ್ಚರಿಸುತ್ತಾರೆ.

ಕರ್ನಾಟಕದಲ್ಲಿ ತಂಬಾಕು ಬಳಕೆಯ ಪ್ರಮಾಣ ಇನ್ನೂ ಆತಂಕಕಾರಿ ಮಟ್ಟದಲ್ಲೇ ಇದೆ. ಇತ್ತೀಚಿನ ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS) ಪ್ರಕಾರ ರಾಜ್ಯದಲ್ಲಿ ಸುಮಾರು 22.8% ವಯಸ್ಕರು ಯಾವುದಾದರೂ ರೂಪದಲ್ಲಿ ತಂಬಾಕು ಬಳಸುತ್ತಿದ್ದಾರೆ. ಅಂದರೆ ಪ್ರತಿ ನಾಲ್ಕರಲ್ಲಿ ಒಬ್ಬರು ತಂಬಾಕಿನ ಚಟಕ್ಕೆ ಒಳಗಾಗಿದ್ದಾರೆ ಎನ್ನಬಹುದು. ಪುರುಷರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು — ಸುಮಾರು 35% ಕ್ಕೂ ಅಧಿಕ.

ಒಳ್ಳೆಯ ಸಂಗತಿ ಎಂದರೆ ಯುವಕರಲ್ಲಿ ತಂಬಾಕು ಬಳಕೆ ಸ್ವಲ್ಪ ಕಡಿಮೆಯಾಗಿದೆ. ಆದರೆ ತಜ್ಞರು ಹೇಳುವಂತೆ ಈಗ ಸಮಸ್ಯೆ ರೂಪಾಂತರಗೊಂಡಿದೆ. ಹಿಂದೆ ಬೀಡಿ ಸೇದುವವರ ಸಂಖ್ಯೆ ಹೆಚ್ಚು ಇತ್ತು. ಈಗ ಅದರ ಜಾಗವನ್ನು ಸಿಗರೇಟು, ಗುಟ್ಕಾ, ಫ್ಲೇವರ್ ತಂಬಾಕು ಮತ್ತು ಬ್ರಾಂಡೆಡ್ ನಿಕೋಟಿನ್ ಉತ್ಪನ್ನಗಳು ಹಿಡಿದಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಗುಟ್ಕಾ ಬಳಕೆ ಸಾಮಾನ್ಯ ಜೀವನಶೈಲಿಯ ಭಾಗವಾಗಿಬಿಟ್ಟಿದೆ.

ಕಿಡ್ವಾಯಿ ಕ್ಯಾನ್ಸರ್ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಕಂಡುಬರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು 40% ಪ್ರಕರಣಗಳಿಗೆ ತಂಬಾಕು ನೇರ ಕಾರಣವಾಗಿದೆ. ಪುರುಷರಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳ ಅರ್ಧಕ್ಕಿಂತ ಹೆಚ್ಚು ತಂಬಾಕಿನೊಂದಿಗೆ ಸಂಬಂಧ ಹೊಂದಿವೆ ಎಂಬುದು ಮತ್ತಷ್ಟು ಆತಂಕಕಾರಿ ವಿಚಾರ.

ನಮ್ಮ ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ತಂಬಾಕು ಒಂದು ಸಾಮಾನ್ಯ ಚಟದಂತೆ ಕಾಣಬಹುದು. ಆದರೆ ಅದರ ಪರಿಣಾಮಗಳು ತುಂಬ ಆಳವಾಗಿವೆ. ಕ್ಯಾನ್ಸರ್ ಮಾತ್ರವಲ್ಲ, ಇವತ್ತು ವೈದ್ಯಕೀಯ ಅಧ್ಯಯನಗಳು ಹೇಳುತ್ತಿರುವುದು ಏನೆಂದರೆ — ದೀರ್ಘಕಾಲ ತಂಬಾಕು ಸೇವನೆ ಫಲವತ್ತತೆ ಮೇಲೂ ಪರಿಣಾಮ ಬೀರುತ್ತದೆ.

ಮಕ್ಕಳಾಗದ ಸಮಸ್ಯೆ, ಹಾರ್ಮೋನ್ ಅಸಮತೋಲನ, ದೈಹಿಕ ದುರ್ಬಲತೆ, ಯುವ ವಯಸ್ಸಿನಲ್ಲೇ ಆರೋಗ್ಯ ಹಾಳಾಗುವುದು — ಇವೆಲ್ಲವೂ ನಿಧಾನವಾಗಿ ಕಾಣಿಸಿಕೊಳ್ಳುವ ಪರಿಣಾಮಗಳು. ಆದರೂ ಹಲವರು “ನನಗೆ ಏನೂ ಆಗಲ್ಲ” ಎನ್ನುವ ಭ್ರಮೆಯಲ್ಲಿ ಬದುಕುತ್ತಿದ್ದಾರೆ.

ದುಃಖದ ಸಂಗತಿ ಏನೆಂದರೆ, ಹಳ್ಳಿಗಳಲ್ಲಿ ಕೆಲವರು ಬೆಳಿಗ್ಗೆ ಎದ್ದ ಕ್ಷಣದಿಂದಲೇ ಗುಟ್ಕಾ ಅಥವಾ ತಂಬಾಕು ಹಾಕಿಕೊಳ್ಳುತ್ತಾರೆ. ಅದು ಚಟವಲ್ಲ, ಬದುಕಿನ ಭಾಗವೇ ಆಗಿಬಿಟ್ಟಿದೆ. ಯುವಕರು ಹಿರಿಯರನ್ನು ನೋಡಿ ಅದನ್ನೇ ಅನುಕರಿಸುತ್ತಿದ್ದಾರೆ.

ಆದರೆ ಒಂದು ದೊಡ್ಡ ವಿರೋಧಾಭಾಸ ಇಲ್ಲಿ ಕಾಣಿಸುತ್ತದೆ. ಒಂದು ಕಡೆ ಸರ್ಕಾರಗಳು ಆರೋಗ್ಯ ಜಾಗೃತಿ ಅಭಿಯಾನ ನಡೆಸುತ್ತವೆ. ಸಿನಿಮಾ ಥಿಯೇಟರ್ ಗಳಲ್ಲಿ “ತಂಬಾಕು ಜೀವಕ್ಕೆ ಹಾನಿಕರ” ಎನ್ನುವ ಜಾಹಿರಾತು ತೋರಿಸುತ್ತವೆ. ತಂಬಾಕು ಖರೀದಿ ಮಾಡುವ ವಯೋಮಾನದ ಅರ್ಹತೆಯನ್ನು ೧೮ರಿಂದ ೨೦ಕ್ಕೆ ಏರಿಸಲಾಗಿದೆ. ಸಾರ್ವಜನಿಕ ವಲಯದಲ್ಲಿ ಧೂಮಪಾನ/ತಂಬಾಕು ಸೇವನೆ ಮಾಡಿದಲ್ಲಿ ೨೦೦ರೂ. ಗಳಿಂದ ೧೦೦೦ರೂ. ಗಳವರೆಗೆ ದಂಡ ವಿಧಿಸಬಹುದಾಗಿದೆ. ಹಿಂದೆ ಶೇ.೨೮ರಷ್ಟು ಇದ್ದ ತಂಬಾಕು ವ್ಯಸನಿಗಳ ಸಂಖ್ಯೆ ಕರ್ನಾಟಕದಲ್ಲಿ ಶೇ.೨೨ಕ್ಕೆ ಇಳಿದಿದೆ. ಇನ್ನೊಂದು ಕಡೆ ತಂಬಾಕು ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ತೆರಿಗೆ ಆದಾಯ, ಉದ್ಯೋಗ, ಕೃಷಿ ಆರ್ಥಿಕತೆ ಎಂಬ ಕಾರಣಗಳಿಂದ ತಂಬಾಕು ಉದ್ಯಮವನ್ನು ಸಂಪೂರ್ಣವಾಗಿ ತಡೆಯಲು ಸರ್ಕಾರಗಳು ಹಿಂದೇಟು ಹಾಕುತ್ತವೆ. ಆರೋಗ್ಯ ಮತ್ತು ಆರ್ಥಿಕ ಹಿತಾಸಕ್ತಿಗಳ ನಡುವೆ ಸಮಾಜ ಸಿಲುಕಿಕೊಂಡಂತಾಗಿದೆ.

ಇವತ್ತಿನ ದೊಡ್ಡ ಸವಾಲು ಎಂದರೆ ಕೇವಲ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವುದಲ್ಲ. ಯುವಕರ ಮನಸ್ಸಿನಲ್ಲಿ “ಇದು ಸ್ಟೈಲ್ ಅಲ್ಲ, ಇದು ನಿಧಾನವಾದ ಆತ್ಮಹತ್ಯೆ” ಎಂಬ ಅರಿವು ಮೂಡಿಸುವುದು. ಕುಟುಂಬ, ಶಾಲೆ, ಮಾಧ್ಯಮ, ಸಿನಿಮಾ, ಸರ್ಕಾರ — ಎಲ್ಲರೂ ಸೇರಿ ಕೆಲಸ ಮಾಡಬೇಕಾದ ಸಮಯ ಬಂದಿದೆ. ಕಾನೂನು ಮಾತ್ರ ಸಾಕಾಗುವುದಿಲ್ಲ. ಸಮಾಜದ ಮನೋಭಾವ ಬದಲಾಗಬೇಕು.

ಇವತ್ತು ವಿಶ್ವ ತಂಬಾಕು ವಿರೋಧಿ ದಿನ ಆಚರಿಸುವುದು ಒಂದು ದಿನದ ಕಾರ್ಯಕ್ರಮವಾಗಬಾರದು. ಇದು ಒಂದು ಸಾಮಾಜಿಕ ಆತ್ಮಪರಿಶೀಲನೆ ಆಗಬೇಕು. ನಾವು ಯುವಕರಿಗೆ ಯಾವ ರೀತಿಯ ಜೀವನಶೈಲಿಯನ್ನು ಮಾದರಿಯಾಗಿ ತೋರಿಸುತ್ತಿದ್ದೇವೆ? ಹಣಕ್ಕಾಗಿ ಆರೋಗ್ಯವನ್ನು ಬಲಿಕೊಡುವ ಉದ್ಯಮ ಸಂಸ್ಕೃತಿಗೆ ನಾವು ಎಷ್ಟು ಮಟ್ಟಿಗೆ ಮೌನ ಸಹಕಾರ ನೀಡುತ್ತಿದ್ದೇವೆ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ದಿನ ಇದಾಗಿದೆ.

ತಂಬಾಕು ವ್ಯಸನ ಕೇವಲ ಒಬ್ಬ ವ್ಯಕ್ತಿಯ ಆರೋಗ್ಯ ಸಮಸ್ಯೆಯಲ್ಲ. ಅದು ಕುಟುಂಬದ ನೋವು, ಸಮಾಜದ ಹೊರೆ ಮತ್ತು ಭವಿಷ್ಯದ ಪೀಳಿಗೆಯ ಮೇಲೆ ಬೀಳುವ ದೊಡ್ಡ ಅಪಾಯ.

Author

  • ಶೀಲಾ ಭಟ್ ಅವರಿಗೆ ಪತ್ರಿಕೋದ್ಯಮದಲ್ಲಿ ೨೨ ವರ್ಷಗಳ ಅನುಭವವಿದೆ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕಿ, ವರದಿಗಾರ್ತಿ , ಕಾರ್ಯಕ್ರಮ ನಿರ್ದೇಶನ ಮತ್ತು ಕಾರ್ಯಕ್ರಮ ನಿರ್ವಹಣೆಯ ಕೆಲಸ ಮಾಡಿದ್ದಾರೆ. ಸಮಾಜ, ರಾಜಕೀಯ, ವೈದ್ಯಕೀಯ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಆಳವಾದ ಆಸಕ್ತಿ ಹೊಂದಿರುವ ಅವರು, ನಿರಂತರ ಕಲಿಕೆಯನ್ನು ಬದುಕಿನ ಭಾಗವಾಗಿ ನೋಡುತ್ತಾರೆ.

error: