ಪ್ರತಿ ವರ್ಷ ಡಿಸೆಂಬರ್ 27ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಿದ್ಧತಾ ದಿನ (International Pandemic Preparedness Day) ಅನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು—ಭವಿಷ್ಯದಲ್ಲಿ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸರ್ಕಾರಗಳು, ಆರೋಗ್ಯ ವ್ಯವಸ್ಥೆಗಳು ಮತ್ತು ಸಮಾಜ ಒಟ್ಟಾಗಿ ಸಿದ್ಧರಾಗಬೇಕೆಂಬ ಸಂದೇಶವನ್ನು ಬಲವಾಗಿ ಸಾರುವುದಾಗಿದೆ.
2020… ಒಮ್ಮೆಲೆ ಕೊವಿಡ್ -೧೯ ಎಂಬ ಸಾಂಕ್ರಾಮಿಕ ರೋಗ ಭೂತ ಇಡೀ ಜಗತ್ತನ್ನಾವರಿಸಿತು. ಅದಾಗಲೇ ದಡಾರ, ಕಾಲರಾ, ಪೊಲಿಯೊ, ಇನ್ ಫ್ಲ್ಯೂಯೆಂಜಾ ಮೊದಲಾದ ಹತ್ತು ಹಲವು ಸಾಂಕ್ರಾಮಿಕ ಕಾಯಿಲೆಗಳಿಗೆ ನಿರೋಧಕ ಮದ್ದು ಕಂಡು ಹಿಡಿದು ನಾವು ಗೆದ್ದು ಬಿಟ್ಟೆವು ಎಂದು ಮನುಷ್ಯರು ಬೀಗುತಿದ್ದರು. ಆದರೆ ಇಲ್ಲ ನಾನೇ ನಿಮಗಿಂತ ದೊಡ್ಡವನು, ನಾನು ಯಾವಾಗ ಬೇಕಾದರೂ ನಿಮಗೆ ಪಾಠ ಕಲಿಸಬಲ್ಲೆ ಎಂದು ಮತ್ತೊಂದು ಮಹಾಮಾರಿ ಕೋವಿಡ್ ರೂಪದಲ್ಲಿ ದಾಳಿ ಮಾಡಿತ್ತು. ಯಾವುದೇ ಮುಂದಾಲೋಚನೆ, ತಯಾರಿ ಏನೂ ಇಲ್ಲದ ಕಾಲದಲ್ಲಿ ಬೇಕೋ ಬೇಡವೋ ಕ್ವಾರಂಟೈನ್, ಕರ್ಫ್ಯೂ ವಿಧಿಸುವುದಲ್ಲದೇ ಬೇರೆ ದಾರಿ ಇರಲಿಲ್ಲ. ಎಲ್ಲಾ ದೇಶಗಳೂ ಜನರನ್ನೂ, ಆರ್ಥಿಕತೆಯನ್ನೂ ಕಳೆದುಕೊಂಡವು. ಆಗ ಜಾಗತಿಕ ಆರೋಗ್ಯ ಭದ್ರತೆಯಲ್ಲಿನ ದುರ್ಬಲತೆಗಳು ಬಹಿರಂಗವಾಗಿದವು. ವೈದ್ಯಕೀಯ ಮೂಲಸೌಕರ್ಯದ ಕೊರತೆ, ಮಾಹಿತಿ ಹರಿವಿನ ತಡ, ಸಂಶೋಧನೆ ಮತ್ತು ಲಸಿಕೆ ಅಭಿವೃದ್ಧಿಯ ಸವಾಲುಗಳು—ಇವೆಲ್ಲವು ಮುಂದಿನ ದಿನಗಳಲ್ಲಿ ಮಹಾಮಾರಿಗಳನ್ನು ಹೇಗೆ ಎದುರಿಸಬೇಕು ಎಂಬ ಪ್ರಶ್ನೆಯನ್ನು ಎತ್ತಿ ಹಿಡಿದವು. ಈ ಹಿನ್ನೆಲೆಯಲ್ಲೇ ವಿಶ್ವಸಂಸ್ಥೆ ಡಿಸೆಂಬರ್ 27ನ್ನು ಅಂತಾರಾಷ್ಟ್ರೀಯ ಮಹಾಮಾರಿ ರೋಗ ಸಿದ್ಧತಾ ದಿನವೆಂದು ಘೋಷಿಸಿತು.
ಮಹಾಮಾರಿ ಸಿದ್ಧತೆ ಎಂದರೆ ಕೇವಲ ರೋಗ ಬಂದ ನಂತರ ಚಿಕಿತ್ಸೆ ನೀಡುವುದು ಮಾತ್ರವಲ್ಲ. ಶೀಘ್ರ ಪತ್ತೆ ವ್ಯವಸ್ಥೆ ಹೊಂದುವುದು, ಬಲಿಷ್ಠ ಆರೋಗ್ಯ ಮೂಲಸೌಕರ್ಯ ಕಲ್ಪಿಸುವುದು, ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ತಯಾರು ಮಾಡುವುದು, ವೈಜ್ಞಾನಿಕ ಸಂಶೋಧನೆ ಮತ್ತು ಡೇಟಾ ಹಂಚಿಕೆ
ಮಾಡುವುದಾಗಿದೆ.
ಭಾರತದ ಅನುಭವ ಮತ್ತು ಪಾಠಗಳು
ಭಾರತವು ಕೊವಿಡ್-19 ಸಮಯದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿತು. ಆದರೆ ಲಸಿಕೆ ಉತ್ಪಾದನೆ, ಡಿಜಿಟಲ್ ಆರೋಗ್ಯ ವ್ಯವಸ್ಥೆ (ಕೋವಿನ್ ಪ್ಲಾಟ್‌ಫಾರ್ಮ್), ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಮಹತ್ವದ ಪಾಠಗಳನ್ನು ಕಲಿತಿತು. ಈ ಅನುಭವಗಳು ಮುಂದಿನ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಲು ಮಾರ್ಗದರ್ಶಿಯಾಗಿವೆ.
ಸಮುದಾಯದ ಪಾತ್ರ
ಸಾಂಕ್ರಾಮಿಕ ರೋಗಗಳನ್ನು ಎದುರಿಸುವಲ್ಲಿ ಸರ್ಕಾರದ ಪಾತ್ರ ಮಾತ್ರವಲ್ಲ, ನಾಗರಿಕರ ಜವಾಬ್ದಾರಿಯೂ ಅತ್ಯಂತ ಮುಖ್ಯ. ಸಾರ್ವಜನಿಕರು ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತಹ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ತಪ್ಪುಮಾಹಿತಿಯಿಂದ ದೂರವಿರಬೇಕು. ಲಸಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಗೆ ಬೆಂಬಲ ನೀಡಬೇಕು. ಅಂದಾಗ ಮಾತ್ರ ಸಮುದಾಯವೇ ಮೊದಲ ರಕ್ಷಣಾ ಗೋಡೆ ಆಗಬಲ್ಲದು.
ಜಾಗತೀಕರಣದ ಈ ಯುಗದಲ್ಲಿ ಒಂದು ದೇಶದಲ್ಲಿ ಉಂಟಾಗುವ ರೋಗ, ಕ್ಷಣಾರ್ಧದಲ್ಲಿ ವಿಶ್ವದೆಲ್ಲೆಡೆ ಹರಡುವ ಸಾಧ್ಯತೆ ಇದೆ. ಆದ್ದರಿಂದ ರಾಷ್ಟ್ರಾಂತರ ಸಹಕಾರ, ವಿಶ್ವ ಆರೋಗ್ಯ ಸಂಸ್ಥೆಯಂತಹ ಸಂಸ್ಥೆಗಳ ಪಾತ್ರ, ಮತ್ತು ವಿಜ್ಞಾನಾಧಾರಿತ ನೀತಿಗಳು ಅನಿವಾರ್ಯವಾಗಿವೆ. ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಿದ್ಧತಾ ದಿನವು ಕೇವಲ ಸ್ಮರಣಾರ್ಥ ದಿನವಲ್ಲ; ಇದು ಜಾಗತಿಕ ಎಚ್ಚರಿಕೆಯ ಘೋಷಣೆ. ಆರೋಗ್ಯದಲ್ಲಿ ಹೂಡಿಕೆ, ಜ್ಞಾನದಲ್ಲಿ ನಂಬಿಕೆ ಮತ್ತು ಮಾನವೀಯ ಸಹಕಾರ—ಇವೇ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಯುವ ನಿಜವಾದ ಶಸ್ತ್ರಾಸ್ತ್ರಗಳು. ಇಂದು ನಾವು ಸಿದ್ಧರಾಗಿದ್ದರೆ, ನಾಳೆ ಮಾನವಕುಲ ಹೆಚ್ಚು ಸುರಕ್ಷಿತವಾಗಿರುತ್ತದೆ.
