ಒಂದು ಮಗು ಕಣ್ಣಿಲ್ಲದೆ ಹುಟ್ಟಿದರೆ ಆ ತಂದೆ-ತಾಯಿಗೆ ಏನು ಅನ್ನಿಸಬಹುದು? ಅದೇ ಮಗು ಹುಟ್ಟಿ ಬೆಳೆದಾಗ ಎಲ್ಲರೂ ಬೆಳಕಿನ ಆಟವನ್ನು ನೋಡುತ್ತ , ಅನುಭವಿಸುತ್ತಿರುವಾಗ ಅದರ ಅಂಧಕಾರವನ್ನು ಕೇಳುವವರು ಯಾರು? ಇಂತಹ ಅಂಧಕಾರದಲ್ಲಿ ಹುಟ್ಟಿದ ದೊಡ್ಡ ಆಶಾಕಿರಣವೇ ಬ್ರೈಲಿ ಲಿಪಿ. ಇಂದು ಅಂದರೆ ಜನವರಿ 4ರಂದು ಪ್ರತಿ ವರ್ಷ ವಿಶ್ವದಾದ್ಯಂತ ವಿಶ್ವ ಬ್ರೈಲ್ ದಿನ (World Braille Day) ಆಚರಿಸಲಾಗುತ್ತದೆ. ಈ ದಿನವು ಕೇವಲ ಒಂದು ತಂತ್ರಜ್ಞಾನದ ಸ್ಮರಣೆಯಷ್ಟೇ ಅಲ್ಲ; ದೃಷ್ಟಿಹೀನರ ಬದುಕಿಗೆ ಅಕ್ಷರ, ಶಿಕ್ಷಣ, ಗೌರವ ಮತ್ತು ಸ್ವಾವಲಂಬನೆ ನೀಡಿದ ಮಹಾನ್ ಮಾನವೀಯ ಆವಿಷ್ಕಾರದ ಸ್ಮರಣೆ. ಬ್ರೈಲ್ ಪದ್ಧತಿಯ ಆವಿಷ್ಕಾರಕ ಲೂಯಿಸ್ ಬ್ರೈಲ್ ಅವರ ಜನ್ಮದಿನವನ್ನು ಗೌರವಿಸುವ ಉದ್ದೇಶದಿಂದ ಈ ದಿನಕ್ಕೆ ವಿಶ್ವಸಂಸ್ಥೆ ಅಧಿಕೃತವಾಗಿ ಮಾನ್ಯತೆ ನೀಡಿದೆ. ಈ ವರ್ಷ ಡಿಜಿಟಲ್-ಮೊದಲ ಜಗತ್ತಿನಲ್ಲಿ ಪ್ರವೇಶಸಾಧ್ಯತೆಯನ್ನು ಕಲ್ಪಿಸುವುದು ವಿಷಯ-ಉದ್ದೇಶವಾಗಿದೆ.
ಬ್ರೈಲ್ ಎನ್ನುವುದು ಅಂಧವ್ಯಕ್ತಿ ಸ್ಪರ್ಶದ ಮೂಲಕ ಓದಲು ಮತ್ತು ಬರೆಯಲು ಸಹಾಯ ಮಾಡುವ ಅಕ್ಷರ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಪ್ರತಿ ಅಕ್ಷರವೂ 6 ಉಬ್ಬಿದ ಚುಕ್ಕಿಗಳ ಸಂಯೋಜನೆಯಿಂದ ರೂಪಿತವಾಗಿರುತ್ತದೆ. ಬೆರಳುಗಳ ಸ್ಪರ್ಶವೇ ಇಲ್ಲಿ ಕಣ್ಣುಗಳಾಗುತ್ತದೆ. ಈ ಪದ್ಧತಿಯ ಮೂಲಕ ಅಂಧರು ಪುಸ್ತಕ ಓದಲು, ಬರೆಯಲು, ಗಣಿತ, ವಿಜ್ಞಾನ ಕಲಿಯಲು, ಸಂಗೀತ, ಕಂಪ್ಯೂಟರ್ ತಂತ್ರಜ್ಞಾನ ಬಳಸಲು ಸಾಧ್ಯವಾಗುತ್ತದೆ.
ಬ್ರೈಲ್ ಇಲ್ಲದೆ ದೃಷ್ಟಿಹೀನರ ಬದುಕು ಹೇಗಿರುತ್ತಿತ್ತು? ಒಂದು ಕ್ಷಣ ಕಲ್ಪಿಸಿಕೊಳ್ಳಿ! ಬ್ರೈಲ್ ಪದ್ಧತಿ ಇಲ್ಲದ ಲೋಕದಲ್ಲಿ ಅಂಧರು ಬದುಕುತ್ತಿದ್ದರೆ? ಶಾಲೆಗೆ ಹೋದರೂ ಓದಲು ಸಾಧ್ಯವಿರಲಿಲ್ಲ. ಅಕ್ಷರ ಜ್ಞಾನವಿಲ್ಲದ ಕಾರಣ ಶಿಕ್ಷಣದಿಂದ ವಂಚನೆ ನಿಶ್ಚಿತವಾಗುತ್ತಿತ್ತು. ಉದ್ಯೋಗ ಅವಕಾಶಗಳು ಬಹುತೇಕ ಇರುತ್ತಲೇ ಇರಲಿಲ್ಲ. ಕಣ್ಣಿಲ್ಲದ ಚೈತನ್ಯಗಳು ಸ್ವಾಭಿಮಾನ ಮತ್ತು ಸ್ವಾವಲಂಬನೆ ಎರಡೂ ಇಲ್ಲದೆ ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿತ ಬದುಕು ಬದುಕಬೇಕಾಗಿತ್ತು. ಬ್ರೈಲ್ ಇಲ್ಲದೆ ಅಂಧ ಚೈತ್ಯನ್ಯರ ಬದುಕು ಕೇವಲ ಕಷ್ಟಕರವಲ್ಲ, ಅಮಾನವೀಯವಾಗಿರುತ್ತಿತ್ತು. ಅವರು ಬುದ್ಧಿವಂತಿಕೆ, ಪ್ರತಿಭೆ, ಕನಸುಗಳಿದ್ದರೂ ಅವು ವ್ಯಕ್ತವಾಗದ ಕತ್ತಲೆಯಲ್ಲಿ ಸಿಲುಕುತ್ತಿದ್ದರು.
ಬ್ರೈಲ್ ನೀಡಿದ ಶಕ್ತಿ ಮತ್ತು ಗೌರವ
ಬ್ರೈಲ್ ಪದ್ಧತಿ ದೃಷ್ಟಿಹೀನರಿಗೆ ಶಿಕ್ಷಣದ ಹಕ್ಕು ನೀಡಿತು. ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಬೆಳೆಸಿತು. ಉದ್ಯೋಗ ಮತ್ತು ಸ್ವಾವಲಂಬನೆಗೆ ದಾರಿ ತೆರೆಯಿತು. ತಮ್ಮ ಧ್ವನಿಯನ್ನು ಸಮಾಜಕ್ಕೆ ತಲುಪಿಸುವ ಶಕ್ತಿ ನೀಡಿತು. ಆದ್ದರಿಂದಲೇ ಇಂದು ಅನೇಕ ಅಂಧ ಚೇತನರು ಶಿಕ್ಷಕರಾಗಿದ್ದಾರೆ,ಸಂಗೀತಗಾರರಾಗಿದ್ದಾರೆ, ಆಟಗಾರರಾಗಿದ್ದಾರೆ, ಲೇಖಕರಾಗಿದ್ದಾರೆ ಜೊತೆಗೆ ಸರಕಾರಿ ಅಧಿಕಾರಿಗಳೂ ಆಗಿದ್ದಾರೆ. ಇವೆಲ್ಲವೂ ಬ್ರೈಲ್ ಇಲ್ಲದೆ ಸಾಧ್ಯವಿರಲಿಲ್ಲ.
ಭಾರತದಲ್ಲಿ ಬ್ರೈಲ್ ಮಹತ್ವ

ಭಾರತದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿಗೆ ಸಂಪೂರ್ಣ ಅಂಧತ್ವವಿದೆ. ಅಂಧತ್ವ/ದೃಷ್ಟಿದೋಷದ ಬೇರೆ ಬೇರೆ ಹಂತಗಳನ್ನು ಸೇರಿಸಿ ಸುಮಾರು 7.5 ಕೋಟಿ ಜನರಿದ್ದಾರೆ. ಇದು ವಿಶ್ವದ ಒಟ್ಟೂ ಅಂಧರು ಮತ್ತು ದೃಷ್ಟಿದೋಷವಿರುವ ಶೇ.20ರಷ್ಟು. ಆದಾಗ್ಯೂ ಇನ್ನೂ ಎಲ್ಲಾ ಪುಸ್ತಕಗಳು ಬ್ರೈಲ್‌ನಲ್ಲಿ ಲಭ್ಯವಿಲ್ಲ. ಡಿಜಿಟಲ್ ಬ್ರೈಲ್ ತಂತ್ರಜ್ಞಾನ ಎಲ್ಲರಿಗೂ ತಲುಪಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಬ್ರೈಲ್ ಸೌಲಭ್ಯ ಅತ್ಯಂತ ಅಪರೂಪ. ಈಗ ಅಂಧ ಚೇತನರಿಗಾಗಿ ದೇಶಾದ್ಯಂತ ಬ್ರೈಲ್ ಶಿಕ್ಷಣ, ಬ್ರೈಲ್ ಪುಸ್ತಕಗಳು, ಸರ್ಕಾರಿ ದಾಖಲೆಗಳು, ಔಷಧಿ ಪ್ಯಾಕೆಟ್‌ಗಳು, ಲಿಫ್ಟ್‌ಗಳು, ಬ್ಯಾಂಕ್ ಸೇವೆಗಳು ಇವೆಲ್ಲದರಲ್ಲೂ ಬ್ರೈಲ್ ಬಳಕೆ ಅಳವಡಿಸಬೇಕು. ಅದು ಅಂಧ ಚೇತನರಿಗೆ ಸಮಾನತೆ ಮತ್ತು ಗೌರವ ಕಲ್ಪಿಸುವ ಪ್ರಕ್ರಿಯೆಯಾಗಿದೆ ಮತ್ತು ಸ್ವಸ್ಥ ಶರೀರವುಳ್ಳ ಸಹಜ ಚೇತನರ ಜವಾಬ್ದಾರಿಯೂ ಹೌದು. ವಿಶ್ವ ಬ್ರೈಲ್ ದಿನದಂದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, “ನಾವು ಎಲ್ಲರಿಗೂ ಓದಲು ಅವಕಾಶ ನೀಡುತ್ತಿದ್ದೇವೆಯೆ?” . ಬ್ರೈಲ್ ಎಂದರೆ ಕೇವಲ ಅಕ್ಷರ ಪದ್ಧತಿ ಅಲ್ಲ ಅದು ಮಾನವ ಹಕ್ಕು, ಸಮಾನತೆಯ ಭಾಷೆ, ಕತ್ತಲೆಗೆ ಬೆಳಕು ನೀಡುವ ಸ್ಪರ್ಶ.






