ಜೈಪುರ : ಈ ಬಾರಿಯ ಐಪಿಎಲ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನೆಲಕ್ಕೆ ಬಿದ್ದ ತಂಡಗಳು ಎದ್ದು ನಿಲ್ಲುತ್ತಿವೆ. ಎದ್ದು ನಿಂತ ತಂಡಗಳು ಸೋಲುತ್ತಿವೆ. ನಿನ್ನೆ ನಡೆದ ಪಂದ್ಯ ಕೂಡ ಹಾಗೆ.
ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಮೂರು ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು ಈ ಬಾರಿಯ ಐಪಿಎಲ್ ನಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಿದ್ದ ಗುಜರಾತ್ ಮತ್ತೆ ಗೆಲುವಿನ ಲಯ ಕಂಡುಕೊಂಡಿತು.
ಜೈಪುರದ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. , ಸಂಜು ಸಾಮ್ಸನ್ ಹಾಗೂ ರಿಯಾನ್ ಪರಾಗ್ ಅವರ ಅದ್ಭುತ ಆಟದಿಂದಾಗಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 196 ರನ್ ಗಳ ಬೃಹತ್ ಮೊತ್ತ ಸೇರಿಸಿತು. ಇದು ಗೆಲ್ಲಲು ಸಾಕು ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ ಹಾಗಾಗಲಿಲ್ಲ. ಈ ಮೊತ್ತ ಸಾಕಾಗಲಿಲ್ಲ.
ಗೆಲುವಿಗೆ 197 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಆರಂಭಿಕ ಆಟಗಾರ ಸಾಯಿ ಸುದರ್ಶನ್35 ಮತ್ತು ನಾಯಕ ಶುಭಮನ್ ಗಿಲ್72 ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದರು. ಆಗಲೇ ಈ ಆಟಗಾರರು ಗೆಲುವಿನ ಬುನಾದಿ ಹಾಕಿದರು. ನಂತರ ಗುಜರಾತ್ ತಂಡ ದಿಟ್ಟ ಬ್ಯಾಟಿಂಗ್ ಹೋರಾಟ ನಡೆಸಿ 20 ಓವರ್ ಆಡಿ 7 ವಿಕೆಟ್ ನಷ್ಟಕ್ಕೆ 199 ರನ್ ಬಾರಿಸಿತು. ಗೆಲುವಿನ ನಗೆ ಬೀರಿತು.
ಕೊನೆಯಲ್ಲಿ ರಾಹುಲ್ ತೆವಾಟಿಯ 11 ಎಸೆತಗಳಲ್ಲಿ 22 ರನ್ ಬಾರಿಸಿದರೆ, ರಶೀದ್ ಖಾನ್ 11 ಎಸೆತಗಳಲ್ಲಿ ಅಜೇಯ 24 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
150ನೇ ಐಪಿಎಲ್ ಪಂದ್ಯವನ್ನಾಡಿದ ಯಜುವೇಂದ್ರ ಚಹಲ್ ಅವರು 4 ಓವರ್ ಬೌಲಿಂಗ್ನಡೆಸಿ 2 ವಿಕೆಟ್ ಪಡೆದರು. ಮಧ್ಯ ಪ್ರದೇಶದ ಮೂಲದ ಯುವ ವೇಗಿ ಕುಲ್ದೀಪ್ ಸೇನ್ ಘಾತಕ ಬೌಲಿಂಗ್ ದಾಳಿ ನಡೆಸಿ ಮೂರು ವಿಕೆಟ್ ಕಬಳಿಸಿದರು.






