ಬೆಂಗಳೂರು : ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡಿದ್ದವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸುಳ್ಳು ಸುದ್ದಿ ಹರಡಿದವರ ಹಿಂದೆ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ನಾಯಕರು ಇದ್ದಾರೆ. ಅವರ ಬೆಂಬಲದಿಂದಲೇ ಈ ಸುಳ್ಳು ಸುದ್ದಿ ಹರಡಲಾಗಿದೆ ಎಂದಿದ್ದಾರೆ.
ಕನ್ನಡ ಪತ್ರಿಕೆಯೊಂದರ ತುಣಕಿನಂತೆ ಸುದ್ದಿ ತುಣಕನ್ನು ಸಿದ್ದಪಡಿಸಲಾಗಿತ್ತು. ಈ ತುಣಕಿನಲ್ಲಿ ಸಿದ್ದರಾಮಯ್ಯ ಮಾತನಾಡಿದಂತೆ ಸುಳ್ಳು ಸುದ್ದಿಯ ಸುಳ್ಳು ವರದಿ ಮಾಡಲಾಗಿತ್ತು. ಇಂತಹ ಸುಳ್ಳು ಸುದ್ದಿ ಹರಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸುಳ್ಳು ಸುದ್ದಿಯ ತುಣಕ್ಕನ್ನೂ ಮುಖ್ಯಮಂತ್ರಿಗಳು ತಮ್ಮ ಎಕ್ಸ್ (ಟ್ವೀಟರ್) ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ನಮಗೆ ಹಿಂದೂಗಳ ಮತ ಬೇಡ. ಮುಸ್ಲೀಂ ಮತಗಳು ಮಾತ್ರ ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಸುಳ್ಳು ವರದಿಯನ್ನು ಸಿದ್ದಪಡಿಸಿ ಅದನ್ನು ಪತ್ರಿಕಾ ತುಣುಕಿನಂತೆ ಹರಿಬಿಡಲಾಗಿತ್ತು. ನಾನು ಮುಂದಿನ ಜನ್ಮದಲ್ಲಿ ಮುಸ್ಲೀಂ ನಾಗಿ ಹುಟ್ಟುತ್ತೇನೆ. ಅದಕ್ಕಾಗಿ ಬಿಜೆಪಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬುದು ಸುಳ್ಳು ಸುದ್ದಿಯ ಇನ್ನೊಂದು ಸಾಲು.
ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಈ ಸುಳ್ಳು ಸುದ್ದಿಯಲ್ಲಿರುವ ವಿಷಯಗಳು ಕೋಮು ಸೌಹಾರ್ಧತೆಯನ್ನು ಕೆಡಿಸುವಂತೆ ಇದೆ. ಇದೇ ಉದ್ದೇಶದಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಇದನ್ನು ಹರಿಬಿಡಲಾಗಿದೆ ಎಂದಿದ್ದಾರೆ.
ನಮಗೆ ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಈ ಮಟ್ಟಕ್ಕೆ ಇಳಿಯಬಾರದು. ಪ್ರಾಮಾಣಿಕತೆಯಿಂದ ಚುನಾವಣೆಯನ್ನು ಎದುರಿಸಬೇಕು. ಬಿಜೆಪಿ ಮತ್ತು ಜೆಡಿಎಸ್ ನೈತಿಕವಾಗಿ ಎಷ್ಟು ಕುಸಿದಿದ್ದಾರೆ ಎಂಬುದನ್ನು ಇದು ತೋರಿಸಿಕೊಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.







