ದೇವರಿಗೂ ನಿದ್ರೆ ವಿಶ್ರಾಂತಿ ಬೇಕಾ ?ಈ ಪ್ರಶ್ನೆ ಈಗ ವಿವಾದ ಕೇಂದ್ರ. ಸದಾ ದೇವಸ್ಥಾನದ ಬಾಗಿಲು ತೆಗೆದಿಟ್ಟರೆ ದೇವರ ಗತಿ ಏನು ? ದೇವರು ನಿದ್ರೆ ಮಾಡುವುದು ಯಾವಾಗ ? ವಿಶ್ರಾಂತಿ ಪಡೆಯುವುದು ಯಾವಾಗ ? ಈ ಸಮಸ್ಯೆ ಕಾಡುತ್ತಿರುವುದು ಅಯೋಧ್ಯೆಯಲ್ಲಿ. ಶ್ರೀರಾಮಚಂದ್ರನ ಆಯೋಧ್ಯೆಯಲ್ಲಿ. ರಾಮ ಲಲ್ಲಾ ಅಥವಾ ಬಾಲ ರಾಮ ಇರುವ ಅಯೋಧ್ಯೆಯಲ್ಲಿ. ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದ ನಮಗೆಲ್ಲ ಗೊತ್ತು. ಬಾಬ್ರಿ ಮಸೀದಿಯನ್ನು ಉರುಳಿಸಿ ರಾಮ ಮಂದಿರ ಕಟ್ಟಿದ್ದು ನಮಗೆಲ್ಲ ಗೊತ್ತಿದೆ.
ಈಗ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ದಿನನಿತ್ಯ ಲಕ್ಷಾಂತರ ಭಕ್ತರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ದೇವ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇದೇ ತಿಂಗಳು ರಾಮ ನವಮಿ ಬಂದಿದೆ. ರಾಮ ನವಮಿ ರಾಮ ಹುಟ್ಟಿದ ದಿನ.
ಇದಕ್ಕಾಗಿ ರಾಮ ಲಲ್ಲಾ ದೇವಸ್ಥಾನದ ಆಡಳಿತ ಮಂಡಳಿ ಭಾರಿ ವ್ಯವಸ್ಥೆ ಮಾಡಿದೆ. ಸುಮಾರು 72 ಗಂಟೆಗಳ ಕಾಲ ದೇವಾಲಯದ ಬಾಗಿಲು ಮುಚ್ಚುವುದಿಲ್ಲ. ಯಾವಾಗ ಬೇಕಾದರೂ ದೇವರ ದರ್ಶನ ಮಾಡಬಹುದು. ಆದರೆ ಇದಕ್ಕೆ ಸಂತರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ದೇವರಿಗೆ ವಿಶ್ರಾಂತಿ ಬೇಡವೆ ? ರಾಮ ಲಲ್ಲಾ ನಿದ್ರೆ ಮಾಡುವುದು ಯಾವಾಗ ಎಂಬುದು ಅವರ ತಕರಾರು.
ಇದಕ್ಕೆ ಹಲವಾರು ಸಾದು ಸಂತರು ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ ವಿವಾದ ಸೃಷ್ಟಿಯಾಗಿದೆ.
ದೇವರಿಗೂ ನಿದ್ರೆ ವಿಶ್ರಾಂತಿ ಬೇಕು ಎಂದಾದರೆ ದೇವರು ನಮ್ಮಂತೆ ಎಂದಾಯಿತು. ಅವಣೂ ನಮ್ಮಂತೆ ನಿದ್ರೆ ಮಾಡುವುದಿದ್ದರೆ ಆತ ದೇವರು ಹೇಗಾಗುತ್ತಾನೆ ? ಈ ಪ್ರಶ್ನೆ ಕೇಳಿದರೆ ನಮಗೆ ದೈವದ್ರೋಹಿ ಎಂಬ ಆರೋಪ ಬರಬಹುದು ಹುಷಾರು….!
