ಬೆಂಗಳೂರು : “ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ದೇವರು ಬೇಕೇ ಹೊರತು, ಬದುಕಿನ ಬದಲಾವಣೆ, ಮನಃಶಾಂತಿಗೆ ಬೇಡವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅರ್ಚಕರ ಸಮಾವೇಶದಲ್ಲಿ ಮಾತನಾಡಿದ ಅವರು, “ಯಾವುದೇ ಧರ್ಮ, ಜಾತಿಯಾದರೂ ನಾವು ದೇವರ ಬಳಿ ಪ್ರಾರ್ಥನೆ ಮಾಡುವುದು ಮನಸ್ಸಿನ ಶಾಂತಿಗೆ. ಯಾವ ಧರ್ಮವೂ ದ್ವೇಷವನ್ನು ಸಾರುವುದಿಲ್ಲ. ಆದರೆ ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಪ್ರಯತ್ನ ಹೆಚ್ಚಾಗುತ್ತಿದೆ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು ಎಂದರು.
ರಾಮಲಿಂಗಾ ರೆಡ್ಡಿ ಅವರು ಮುಜರಾಯಿ ಇಲಾಖೆ ಮಂತ್ರಿಗಳು. ಈ ಇಲಾಖೆಯಲ್ಲಿ ಅವರು ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರು ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಆನೇಕ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಎಲ್ಲರಿಗೂ ಎಲ್ಲಾ ಭಾಗ್ಯ ಸಿಗುವುದಿಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ರಾಮಲಿಂಗಾ ರೆಡ್ಡಿ ಅವರು ತಮಗೆ ಸಿಕ್ಕ ಅವಕಾಶದಲ್ಲಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅರ್ಚಕರಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು. ದೊಡ್ಡ ದೇವಾಲಯಗಳ ಆದಾಯದಲ್ಲಿ ಸಣ್ಣ ದೇವಾಲಯಗಳ ಅಭಿವೃದ್ಧಿಗೆ ಕಾನೂನು ತಿದ್ದುಪಡಿ ತಂದಿದ್ದಾರೆ ಎಂದರು.
ಧರ್ಮ, ದೇವರು ತನ್ನ ಮನೆಯ ಆಸ್ತಿ ಎಂದು ಭಾವಿಸಿರುವ ಬಿಜೆಪಿಯವರು ಇಂತಹ ಕಾನೂನನ್ನು ವಿಧಾನ ಪರಿಷತ್ ನಲ್ಲಿ ವಿರೋಧಿಸಿರುವುದು ಆಶ್ಚರ್ಯ ತಂದಿತು. ನಾವು ಅದನ್ನು ಮತ್ತೇ ಜಾರಿ ಮಾಡಲು ಮುಂದಾದೆವು. ಆದರೆ ಈಗ ರಾಜ್ಯಪಾಲರ ಮೂಲಕ ಅದಕ್ಕೆ ತಡೆಯೊಡ್ಡಿದ್ದಾರೆ. ಬಿಜೆಪಿಗೆ ಧರ್ಮ, ದೇವರು ರಾಜಕೀಯದ ವಿಷಯ ಮಾತ್ರ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ಅರ್ಚಕರಾಗಿರುವ ನೀವೇ ಭಾಗ್ಯವಂತರು :
ಅರ್ಚಕರ ಮಧ್ಯೆ ನಿಂತು ನಿಮ್ಮ ಆಶೀರ್ವಾದ ಬೇಡುವಂತಹ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಅರ್ಚಕ ಹಾಗೂ ದೇವರು ಎರಡರಲ್ಲೂ ಮೂರು ಅಕ್ಷರಗಳಿವೆ. ಅರ್ಚಕನ ಪ್ರಭಾವದಿಂದ ನಾವು ಶಿಲೆಯಲ್ಲೂ ಶಿವನನ್ನು ಕಾಣುತ್ತೇವೆ ಎಂಬ ಶ್ಲೋಕವಿದೆ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಆ ದೇವಾಲಯದ ಸೇವೆ ಮಾಡುತ್ತಾ ಭಕ್ತರ ಆಚಾರ ವಿಚಾರಗಳನ್ನು ಪ್ರಾರ್ಥಿಸಿ ದೇವರಿಗೆ ಅರ್ಪಿಸುವ ಪವಿತ್ರವಾದ ಕೆಲಸ ಮಾಡುವ ಅವಕಾಶವನ್ನು ದೇವರು ನಿಮಗೆ ಕೊಟ್ಟಿದ್ದಾನೆ. ಹೀಗಾಗಿ ನೀವೆಲ್ಲರೂ ಭಾಗ್ಯವಂತರು ಎಂದು ತಿಳಿಸಿದರು.
ಸಂಸ್ಕೃತಿ ದೇಶದ ಆಸ್ತಿ :
ಎಲ್ಲರೂ ಗುರು, ಅರ್ಚಕರಾಗಲು ಸಾಧ್ಯವಿಲ್ಲ. ಈ ದೇಶದ ಆಸ್ತಿಯಾದ ನಮ್ಮ ಸಂಸ್ಕೃತಿ, ಧರ್ಮವನ್ನು ನೀವು ಕಾಪಾಡಿಕೊಂಡು ಬರುತ್ತಿದ್ದೀರಿ. ಎಲ್ಲಾ ಸಮುದಾಯದ ಅರ್ಚಕರು ಸೇರಿ ಈ ಸಂಘ ಮಾಡಿರುವ ಬಗ್ಗೆ ನಮ್ಮ ಸ್ನೇಹಿತರು ಮಾಹಿತಿ ನೀಡಿದರು ಎಂದರು.
ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿವೊಂದೇ, ಕರ್ಮ ಹಲವಾದರೂ ನಿಷ್ಠೆವೊಂದೇ. ದೇವನೊಬ್ಬ ನಾಮ ಹಲವು. ನಾನು ಆಗಾಗ್ಗೆ ಒಂದು ಮಾತು ಹೇಳುತ್ತೇನೆ. ಕಲ್ಲು ಪ್ರಕೃತಿ ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಶಿಲೆಯಿಂದ ಶಿವನ ಲಿಂಗ, ವಿಷ್ಣು, ಶಕ್ತಿದೇವತೆ ಮೂರ್ತಿ ಮಾಡಬಹುದು ಎಂದರು.
ನಮ್ಮ ಧರ್ಮ, ಸಂಸ್ಕೃತಿ, ದೇವಾಲಯಗಳ ಬಗ್ಗೆ ವಿದೇಶಗಳಲ್ಲೂ ಬಹಳ ಪ್ರಾಮುಖ್ಯತೆ ಇದೆ. ನಾನು ಈ ಹಿಂದೆ ಸಹಕಾರ ಮಂತ್ರಿಯಾಗಿದ್ದಾಗ ಪ್ಯಾರಿಸ್ ಪ್ರವಾಸ ಮಾಡಿ ಸಭೆವೊಂದರಲ್ಲಿ ಭಾಗವಹಿಸಿದ್ದೆ. ಅಂದು ನನ್ನ ಜನ್ಮ ದಿನವಾಗಿದ್ದ ಕಾರಣ ಅಂದು ಕೇಕ್ ಕಟ್ ಮಾಡಿಸಲು ಮುಂದಾದರು. ಅಲ್ಲಿ ಮೇಣದ ಬತ್ತಿ ಆರಿಸಿ ಕೇಕ್ ಕಟ್ ಮಾಡಲು ಹೇಳಿದರು. ಆಗ ಅಲ್ಲಿದ್ದವರೊಬ್ಬರು ಇವರು ಭಾರತದಿಂದ ಬಂದಿದ್ದು, ದೀಪವನ್ನು ಹಚ್ಚುವುದು ಇವರ ಸಂಸ್ಕೃತಿ, ದೀಪವನ್ನು ಆರಿಸುವುದಲ್ಲ ಎಂದು ಹೇಳಿದರು. ಹೀಗೆ ನಮ್ಮ ಧರ್ಮ, ಸಂಸ್ಕೃತಿಗೆ ವಿದೇಶಗಳಲ್ಲಿ ಅದರದೇ ಆದ ಗೌರವವಿದೆ ಎಂದು ತಿಳಿಸಿದರು.
ಇಂದು ಕೂಡ ನಾವು ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದ್ದೇವೆ. ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನಸಂಪದಂ. ಜ್ಞಾನಶಕ್ತಿ ಸ್ವರೂಪಸ್ಯ, ದೀಪಜ್ಯೋತಿ ಪ್ರಕಾಶಿತಂ. ಈ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ ಎಂದರು.
ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದಿದೆ :
ನಮ್ಮ ಸರ್ಕಾರ ಎಲ್ಲಾ ವರ್ಗ, ಸಮಾಜಕ್ಕೆ ಅನ್ವಯಿಸುವ ಯೋಜನೆ ಜಾರಿಗೆ ತಂದಿದ್ದೇವೆ. ಎಲ್ಲರ ಮನೆ ಜ್ಯೋತಿ ಬೆಳಗಬೇಕು ಎಂದು ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿ ಕೊಟ್ಟ ಮಾತಿನಂತೆ ನಡೆದಿದ್ದೇವೆ. ಈ ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಸರ್ಕಾರ ನಿಮ್ಮ ಕೈ ಗಟ್ಟಿ ಮಾಡಿದೆ. ನಾವು ನಿಮ್ಮ ಬೇಡಿಕೆಗಳನ್ನು ಅರಿತಿದ್ದೇವೆ. ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ರಾಜಕಾರಣ ಮಾಡುತ್ತಿದ್ದೇವೆ. ನಿಮ್ಮ ಬೇಡಿಕೆಗಳ ಬಗ್ಗೆ ನಾವು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.
ನಾವು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ, ಧರ್ಮರಾಯನ ಧರ್ಮ, ಕರ್ಣನ ದಾನತ್ವ, ಭೀಮನ ಬಲ, ವಿಧುರನ ನೀತಿ, ಅರ್ಜುನನ ಗುರಿ, ಕೃಷ್ಣನ ತಂತ್ರ ಇರಬೇಕು. ಭಾರತ ಧಾರ್ಮಿಕವಾದ ಭೂಮಿ. ಲಕ್ಷಾಂತರ ದೇವಾಲಯಗಳಿವೆ. ಒಂದೊಂದು ದೇವರನ್ನು ನೂರಾರು ಹೆಸರಲ್ಲಿ ಕರೆಯುತ್ತೇವೆ ಎಂದರು.
ಅಲೆಗ್ಸಾಂಡರ್ ಭಾರತವನ್ನು ವಶಪಡಿಸಿಕೊಳ್ಳಲು ಹೊರಟಿದ್ದಾಗ, ಆತನ ಗುರು ಭಾರತದಿಂದ ಐದು ವಸ್ತು ತೆಗೆದುಕೊಂಡು ಬಾ. ರಾಮಾಯಣ, ಮಹಾಭಾರತ ಗ್ರಂಥಗಳು, ಗಂಗಾಜಲ, ಕೃಷ್ಣನ ಕೊಳಲು ಹಾಗೂ ಸಾಧು ಸಂತರನ್ನು ಕರೆದುಕೊಂಡು ಬಾ. ಈ ಐದು ವಸ್ತುಗಳನ್ನು ನೀನು ತಂದರೆ ಭಾರತ ದೇಶವನ್ನು ಕರೆತಂದಂತೆ ಎಂದರಂತೆ. ಇದೆ ನಮ್ಮ ದೇಶದ ಆಸ್ತಿ ಎಂದರು.
ನದಿ ತನ್ನ ಸ್ವಂತಕ್ಕಾಗಿ ಹರಿಯುವುದಿಲ್ಲ, ಪರೋಪಕಾರಕ್ಕೆ ಹರಿಯುತ್ತದೆ. ಮರ ಕೂಡ ಪರೋಪಕಾರಕ್ಕೆ ಹಣ್ಣು ನೀಡುತ್ತದೆ, ಹಸು ಪರೋಪಕಾರಕ್ಕೆ ಹಾಲು ನೀಡುತ್ತದೆ, ಅದೇರೀತಿ ಈ ನಮ್ಮ ಶರೀರ ಕೂಡ ಪರೋಪಕಾರಕ್ಕೆ ಮೀಸಲಾಗಬೇಕು ಎಂದು ತಿಳಿಸಿದರು.
ಯಾವುದೇ ಜಾತಿ, ಯಾವುದೇ ಧರ್ಮವಿರಲಿ, ನಾವು ಅರ್ಚಕರ ಜತೆ ಇದ್ದೇವೆ. ನಿಮ್ಮ ಒಳಿತಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ಇನ್ನು ಹತ್ತು ವರ್ಷ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ” ಎಂದರು.






