ಪರಿಷತ್ ನಲ್ಲಿ ಗದ್ದಲಕ್ಕೆ ಕಾರಣವಾದ ನಿತ್ಯ ಸುಮಂಗಲಿ ಪದ ಬಳಕೆ: ಸಿ.ಟಿ.ರವಿ ಆರೋಪಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು

Karnataka Legislative Council Session : ನಿಮ್ಮ ಮಾತುಗಳನ್ನು ನೋಡಿದರೆ ಮನುಸ್ಮೃತಿ ಸಂಸ್ಕೃತಿಯಿಂದ ನೀವು ಹೊರಬಂದಂತೆ ಕಾಣುತ್ತಿಲ್ಲ. ಇಂದಿನ ಕಾಲಘಟ್ಟ ತುಂಬಾ ಬದಲಾಗಿದ್ದು, ಮಹಿಳೆಯರಿಗೂ ತುಂಬಾ ಅವಕಾಶಗಳು ಸಿಗುತ್ತಿವೆ. ಮಹಿಳಾ ಸಬಲೀಕರಣವೇ ಸರ್ಕಾರದ ಉದ್ದೇಶ. ನೀವು ಇಂಥ ಪದ ಬಳಸುವುದು ಸರಿಯಲ್ಲ ಎಂದು ಸಚಿವರು ವಾಗ್ದಾಳಿ ನಡೆಸಿದರು

ಬೆಂಗಳೂರು: ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಇಡಿ ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಇಂದು ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡುವ ಭರದಲ್ಲಿ ನಿತ್ಯ ಸುಮಂಗಲಿ ಪದ ಬಳಸಿದ್ದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಹಿರಿಯ ಸದಸ್ಯರಾದ ಉಮಾಶ್ರೀ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.

ಸೋಮವಾರ ಆರಂಭಗೊಂಡ ವಿಧಾನ ಸಭೆ ಅಧಿವೇಶನದಲ್ಲಿ ಭೋಜನ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಸಿ.ಟಿ.ರವಿ, ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಉಲ್ಲೇಖಿಸಿ, ಏನ್ ಮಾಡೋದು ಕೆಲವು ನಿತ್ಯ ಸುಮಂಗಲಿಯರು ಇರ್ತಾರೆ. ಅವರು ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗ್ತಾರೆ ಎಂದರು.

ಇದಕ್ಕೆ ತಕ್ಷಣವೇ ಆಕ್ಷೇಪ ವ್ಯಕ್ತಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಈ ರೀತಿ ಮಾತನಾಡುವುದು ತಪ್ಪು. ದಿನ ನಿತ್ಯ ಮುತ್ತೈದೆ ಅಂದರೆ ಅದಕ್ಕೆ ಅರ್ಥನೇ ಬೇರೆ ಇದೆ. ಅದನ್ನು ತಿಳಿದು ಮಾತನಾಡಿ ಎಂದು ಸಿ.ಟಿ ರವಿ ಅವರನ್ನು ತರಾಟೆಗೆ ತೆಗೆದುಕೊಂಡರು.

ನಿಮ್ಮ ಮಾತುಗಳನ್ನು ನೋಡಿದರೆ ಮನುಸ್ಮೃತಿ ಸಂಸ್ಕೃತಿಯಿಂದ ನೀವು ಹೊರಬಂದಂತೆ ಕಾಣುತ್ತಿಲ್ಲ. ಇಂದಿನ ಕಾಲಘಟ್ಟ ತುಂಬಾ ಬದಲಾಗಿದ್ದು, ಮಹಿಳೆಯರಿಗೂ ತುಂಬಾ ಅವಕಾಶಗಳು ಸಿಗುತ್ತಿವೆ. ಮಹಿಳಾ ಸಬಲೀಕರಣವೇ ಸರ್ಕಾರದ ಉದ್ದೇಶ. ನೀವು ಇಂಥ ಪದ ಬಳಸುವುದು ಸರಿಯಲ್ಲ ಎಂದು ಸಚಿವರು ವಾಗ್ದಾಳಿ ನಡೆಸಿದರು.

ಅದು ಕೆಟ್ಟ ಪದ ಅಲ್ಲ ಒಳ್ಳೆಯ ಪದ ಎಂದು ಸಮರ್ಥಿಸಿಕೊಳ್ಳಲು ಸಿಟಿ ರವಿ ಮುಂದಾದರೂ ಸಚಿವರು ಅವಕಾಶ ನೀಡಲಿಲ್ಲ. ಅಂತಿಮವಾಗಿ ಮಹಿಳಾ ಸದಸ್ಯರ ಆಕ್ಷೇಪಕ್ಕೆ ಮಣಿದ ಸಭಾಪತಿ ಪ್ರಾಣೇಶ್, ಆ ಪದವನ್ನು ಕಡತದಿಂದ ತೆಗೆಯಲು ಸೂಚನೆ ನೀಡಿದರು.

Author

error: