ಗದಗ: ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದ ಸಮೀಪ ಇರುವ ಬಾವಿಯೊಂದಕ್ಕೆ ಬಿದ್ದಿದ್ದ ಎಮ್ಮೆಯನ್ನು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಬಿಂಕದಕಟ್ಟಿ ಗ್ರಾಮದ ಯಮನಪ್ಪ ಅವರಿಗೆ ಸೇರಿದ ಎಮ್ಮೆಯು 40 ಅಡಿ ಆಳದ ಬಾವಿಗೆ ಬಿದ್ದಿತ್ತು. ಎಮ್ಮೆಯನ್ನು ಮೇಲೆತ್ತಲು ಸಾಧ್ಯವಾಗದ ಕಾರಣ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಎಮ್ಮೆಯನ್ನು ಜೀವಂತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿ.ಎಸ್.ಟಕ್ಕೆಕರ್ ನೇತೃತ್ವದಲ್ಲಿ ಠಾಣಾಧಿಕಾರಿ ಲೋಕೇಶ್ ಜಿ.ಕೆ., ಸಿಬ್ಬಂದಿಯಾದ ಜೆ.ಎ.ಜಾನೋಪಂತರ್, ಮುತ್ತಪ್ಪ ಡಿ. ಆರ್.ಜೆ.ನದಾಫ್, ವಿ.ಪಿ.ಹುಲಕೋಟಿ, ಕೆ.ಎಂ.ಹುಯಿಲಗೋಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







