ಸತತ 20 ಗಂಟೆಗಳ ಕಾರ್ಯಾಚರಣೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳ ಪರಿಶ್ರಮ. ಮಗುವನ್ನು ಜೀವಂತವಾಗಿ ಹೊರ ತರುವ ಛಲ. ಕೊನೆಗೆ ಎಲ್ಲವೂ ಸುಖಾಂತ್ಯ. ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ಹೊರಗೆ ಬಂದ.
ಎರಡು ದಿನಗಳ ಹಿಂದೆ ಕೊರೆಸಿದ್ದ ತೆರೆದ ಕೊಳವೆಬಾವಿಗೆ ಸಾತ್ವಿಕ ಬಿದ್ದಿದ್ದ., ಜೀವನ್ಮರಣದ ನಡುವೆ ಹೋರಾಟ. ಕೊನೆಗೆ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿ ಶಾಮಕ ಮತ್ತು ಪೊಲೀಸರು ಸತತವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬಾಲಕನ ಅಳುವುದು ಕೇಳಿಸಿತು. ಮಧ್ಯಾಹ್ನ 1.44ಕ್ಕೆ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಗೆ ರವಾನಿಸಲಾಯಿತು. ತಾಯಿ ಮಡಿಲಿನಲ್ಲಿ ಮಲಗಿದ್ದ ಮಗುವಿಗೆ ವೈದ್ಯರು ಪರೀಕ್ಷೆ ನಡೆಸಿದರು.
ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್. ಬಾಲಕ ಬುಧವಾರ ಆಟವಾಡುತ್ತಿದ್ದ. ಹಾಗೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದು ಬಿಟ್ಟ.. ಸಂಜೆ 5.30ರ ಸುಮಾರಿಗೆ ಆತ ಕೊಳವೆಬಾವಿಗೆ ಬಿದ್ದಿದ್ದ. ಸಂಜೆ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಸಾತ್ವಿಕ್ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿತ್ತು. ಬಾಲಕ ಬದುಕಿ ಬರಲಿ ಎಂದು ಪೂಜೆ ಸಲ್ಲಿಸಿ ಯುವಕರು ಪ್ರಾರ್ಥನೆ ಸಲ್ಲಿಸಿದ್ದರು. ಬಾಲಕನ ತಂದೆ-ತಾಯಿಯಂತೂ ರಾತ್ರಿಯಿಡೀ ಕೊಳವೆಬಾವಿ ಪಕ್ಕದಲ್ಲೇ ಇದ್ದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.






