ಬೆಂಗಳೂರು : ಭಾರತೀಯರ ನಂಬಿಕೆಯ ಜಗತ್ತಿನಲ್ಲಿ ಗಣೇಶನಿಗೆ ಅಗ್ರಸ್ಥಾನ. ಆತ ಪ್ರಥಮ ಪೂಜಕ. ಯಾವುದೇ ಕೆಲಸ ಮಾಡುವುದಿದ್ದರೂ ಗಜಾನನನಿಗೆ ಮೊದಲ ಪೂಜೆ. ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಹೊರತಲ್ಲ. ಇಂದು ಕಾಂಗ್ರೆಸ್ ಕೋಲಾರ ಜಿಲ್ಲೆ ಕುರುಡುಮಲೆಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಲೋಕಸಭಾ ಚುನಾವಣೆಯ ಪ್ರಚಾರವನ್ನು ಫ್ರಾರಂಭಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರ ನಾಯಕರು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಕೋಲಾರಕ್ಕೆ ಈ ನಾಯಕರು ಆಗಮಿಸಿದರು. ಅಲ್ಲಿಂದ ಕುರುಡುಮಲೆಗೆ ಆಗಮಿಸಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಕುರುಡುಮಲೆಯಿಂದಲೇ ಪ್ರಚಾರವನ್ನು ಪ್ರಾರಂಭಿಸಿತ್ತು. ನಂತರ 136 ಸ್ಥಾನಗಳಲ್ಲಿ ಜಯಬೇರಿ ಭಾರಿಸಿತ್ತು. ಹೀಗಾಗಿ ಈ ಬಾರಿಯೂ ಕಾಂಗ್ರೆಸ್ ಕುರುಡುಮಲೆಯ ಮೂಲಕವೇ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.







