ನಿನ್ನೆ ನಡೆದ ಆ ಘಟನೆ. ಕೇವಲ ಒಂದು ವರ್ಷ ಎರಡು ತಿಂಗಳ ಮಗು. ಸಾವು ಬದುಕಿನ ನಡುವಿನ ಹೋರಾಟ. ನಿನ್ನೆಯಿಂದ ನಡೆಯುತ್ತಿರುವ ಕಾರ್ಯಾಚರಣೆ. ಒಂದು ಸಮಾಧಾನದ ಸಂಗತಿ ಅಂದರೆ ಮಗು ಬದುಕಿದೆ. ಕಾಲು ಕೈ ಅಲ್ಲಾಡಿಸುತ್ತಿದೆ.

ರಾಜ್ಯದ ಜನ ದೇವರ ಮೊರೆ ಹೋಗಿದ್ದಾರೆ. ಈ ಮಗು ಜೀವಂತವಾಗಿ ಹೊರಗೆ ಬರಲಿ ಎಂದು ಪ್ರಾರ್ಥಿಸುತಿದ್ದಾರೆ.

ನಿನ್ನೆಯ ಘಟನೆಯನ್ನೇ ನೋಡಿ. ಈ ಮನೆಯ ಮಾಲಿಕ ಎರಡು ಕೊಳವೆ ಬಾವಿಗಳನ್ನು ತೋಡಿಸಿದ್ದಾನೆ. ಎರಡರಲ್ಲೂ ಒಂದೂವರೆ ಇಂಚು ನೀರು ಬಂದಿದೆ. ಮುಂದಿನ ಕೆಲಸ ಅಂದರೆ ಇದಕ್ಕೆ ಕೊಳವೆ ಅಳವಡಿಸಬೇಕು. ಮೊದಲ ಕೊಳವೆಯನ್ನು ಅಳವಡಿಸಲಾಗಿದೆ. ಅದು ಸುಮಾರು ೧೬ ಅಡಿಯದು.

ಮುಂದಿನ ಕೊಳವೆ ಅಳವಡಿಕೆಯ ಕೆಲಸ ಮಾಡಬೇಕು ಎಂದು ಸುಮ್ಮನಿದ್ದಾನೆ. ಆಗಲೇ ಈ ದುರಂತ ನಡೆದುಹೋಗಿದೆ. ಮನೆಯ ಹೊರಗೆ ಆಡುತ್ತಿದ್ದ ಸಾತ್ವಿಕ. ಮನೆಯ ಮುದ್ದಿನ ಮಗು. ಹೊರಗೆ ಆಡುತ್ತಿದ್ದ ಮಗುವನ್ನು ಮನೆಯವರು ಗಮನಿಸಿಲ್ಲ. ಆಡುತ್ತಿದ್ದ ಮಗು ಉರುಳಿ ಹೋಗಿದೆ. ತಲೆ ಕೆಳಗಾಗಿ ಕೊಳವೆ ಬಾವಿಯಲ್ಲಿ ಬಿದ್ದು ಹೋಗಿದೆ. ನಡೆಯಬಾರದ ದುರಂತ ನಡೆದು ಹೋಗಿದೆ. ಮುಂದಿನದು ಹಗಲು ರಾತ್ರಿಯ ಕಾರ್ಯಾಚರಣೆ.

ಹಾಗೆ ನೋಡಿದ ಕೊಳವೆ ಬಾವಿಯಲ್ಲಿ ಮಗು ಬಿದ್ದ ಮೊದಲ ಪ್ರಕರಣ ಇದಲ್ಲ. ಇಂತಹ ಹಲವು ಪ್ರಕರಣಗಳು ನಡೆದು ಹೋಗಿವೆ. ಮುಂದೆ ನಡೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ.

ವಿಜಾಪುರ ಜಿಲ್ಲೆಯೊಂದರಲ್ಲೇ ಈ ಮೊದಲು ಇಂತಹ ಎರಡು ಪ್ರಕರಣಗಳು ನಡೆದಿದ್ದವು.  ಮಗುವನ್ನು ಹೊರಗೆ ತರಲು ವಾರಾನುಗಟ್ಟಲೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಜೀವಂತವಾಗಿ ಮಗುವನ್ನು ಹೊರಕ್ಕೆ ತರಲು ಸಾಧ್ಯವಾಗಿರಲೇ ಇಲ್ಲ. ಆಗಲಾದರೂ ಜಿಲ್ಲಾ ಆಡಳಿತ ಎಚ್ಚರಗೊಳ್ಳಬೇಕಾಗಿತ್ತು. ಆದರೆ ಎಚ್ಚರಗೊಳ್ಳಲಿಲ್ಲ. ಈಗ ಇನ್ನೊಂದು ದುರಂತ ಸಂಭವಿಸಿದೆ.

ರಾಜ್ಯದಲ್ಲಿ ಕೊಳವೆ ಬಾವಿಗಳನ್ನು ತೋಡುವಾಗ ಕೆಲವೊಂದು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಯಾರದರೂ ಕೊಳವೆ ಬಾವಿ ತೊಡಿಸುವುದಿದ್ದರೆ ಜಿಲ್ಲಾಡಳಿತದ ಅನುಮತಿಯನ್ನು ಕಡ್ದಾಯಗೊಳಿಸಬೇಕು. ಜೊತೆಗೆ ಕೊಳವೆ ಬಾವಿಯನ್ನು ತೋಡಿಸಿ ಪೈಪ್ ಅಳವಡಿಸುವವರೆಗೆ ಸರ್ಕಾರದ ಪ್ರತಿನಿಧಿಯೊಬ್ಬರು ಹಾಜರಿರಬೇಕು. ಎಲ್ಲವೂ ಸರಾಗವಾಗಿ ನಡೆದ ಮೇಲೆ ಕೊಳವೆ ಬಾವಿ ತೋಡಿಸಿದವರಿಗೆ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಬೇಕು. ಬಾವಿ ತೋಡೀಸುವ ಕೆಲಸ ಸಂಪೂರ್ಣವಾಗಿ ಮುಗಿದು ಪ್ರಮಾಣ ಪತ್ರ ನೀಡಿದ ಮೇಲೆ ಸರ್ಕಾರಿ ಅಧಿಕಾರಿಗಳು ಅಲ್ಲಿಂದ ತೆರಳಬೇಕು.

ಜೊತೆಗೆ ಯಾವುದೇ ಕೊಳವೆ ಬಾವಿಯಲ್ಲಿ ನೀರು ಬರದಿದ್ದರೆ ಅದನ್ನು ಮುಚ್ಚಿಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಬೇಕಾದ್ದು ಸರ್ಕಾರದ ಜವಾಬ್ದಾರಿ> ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಜಿಲ್ಲಾ ಅಥವಾ ತಾಲ್ಲೂಕು ಆಡಳಿತದ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.

ಆದರೆ ನಮ್ಮಲ್ಲಿ ಅಧಿಕಾರ ಶಾಹಿಯ ಬೇಜವ್ಬಾರಿಯ ಜೊತೆಗೆ ಸಾರ್ವಜನಿಕರ ಬೇಜವಾಬ್ದಾರಿತನವೂ ಕಾಣುತ್ತಿದೆ. ಕನಿಷ್ಟ ಕೊಳವೆ ಬಾವಿ ತೋಡಿಸುವ ಸಂದರ್ಭದಲ್ಲಿ ಮಕ್ಕಳನ್ನು ದೂರ ಇಡುಬೇಕು ಎನ್ನುವ ಅರಿವಾದರೂ ಇವರಿಗೆ ಬೇಡವೆ ? ಇಂತಹ ಬೇಜವಾಬ್ದಾರಿಯಿಂದ ಇನ್ನೆಷ್ಟು ಮಕ್ಕಳು ಹೀಗೆ ಬಲಿಯಾಗಬೇಕೋ ಗೊತ್ತಿಲ್ಲ.ಓ ದೇವರೆ, ಈ ಮಗುವನ್ನು ಉಳಿಸು

Author

Leave a Reply

Your email address will not be published. Required fields are marked *