ಜಂತರ್ ಮಂತರ್ನಲ್ಲಿ ಸೋನಂ ವಾಂಗ್ಚುಕ್ ಸತ್ಯಾಗ್ರಹ: ನೀಟ್ ಅಕ್ರಮ, ಶಿಕ್ಷಣ ಸುಧಾರಣೆ ಮತ್ತು ರಾಜಕೀಯ ಪರಿಣಾಮಗಳು
ಈ ಬಾರಿ ಸೋನಂ ವಾಂಗ್ಚುಕ್ ಅವರ ಸತ್ಯಾಗ್ರಹ ಲಡಾಖ್ ವಿಚಾರಕ್ಕೆ ಸಂಬಂಧಪಟ್ಟದ್ದಲ್ಲ. ಇದು ಭಾರತದ ಶಿಕ್ಷಣ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡಿರುವ ಲಕ್ಷಾಂತರ ವಿದ್ಯಾರ್ಥಿಗಳ ಧ್ವನಿಯಾಗಿ ಮಾರ್ಪಟ್ಟಿದೆ. ಅವರು ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಉಪವಾಸವು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದೆ.
ಪ್ರತಿಭಟನೆಯ ಹಿನ್ನೆಲೆ ಏನು?
2026ರ ನೀಟ್ ಪರೀಕ್ಷೆಯ ಸುತ್ತ ಮತ್ತೆ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕುರಿತು ಗಂಭೀರ ಆರೋಪಗಳು ಕೇಳಿಬಂದವು. ಲಕ್ಷಾಂತರ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷಾ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ಯುವ ಚಳವಳಿಯಾಗಿ ಹೊರಹೊಮ್ಮಿದ ಕಾಕ್ರೊಚ್ ಜನತಾ ಪಕ್ಷ (CJP) ಪ್ರತಿಭಟನೆ ಆರಂಭಿಸಿತು. ನಂತರ ಸೋನಂ ವಾಂಗ್ಚುಕ್ ಅದಕ್ಕೆ ಬೆಂಬಲ ಸೂಚಿಸಿ ಉಪವಾಸಕ್ಕೆ ಕುಳಿತರು.
ವಾಂಗ್ಚುಕ್ ಅವರ ಪ್ರಮುಖ ಬೇಡಿಕೆಗಳು
ಸೋನಂ ವಾಂಗ್ ಚುಕ್ ಅವರು ಪ್ರಮುಖವಾಗಿ ನಾಲ್ಕು ಬೇಡಿಕೆಗಳನ್ನಿಟ್ಟಿದ್ದಾರೆ. ಅವುಗಳು :-
1. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ವಾಂಗ್ಚುಕ್ ಅವರ ಅಭಿಪ್ರಾಯದಲ್ಲಿ, ನಿರಂತರ ಪರೀಕ್ಷಾ ಅಕ್ರಮಗಳಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ನಿಗದಿಯಾಗಬೇಕು. “ಯಾವುದೇ ಸ್ವಾಭಿಮಾನಿ ಸಚಿವರು ಇಂತಹ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡುತ್ತಿದ್ದರು” ಎಂದು ಅವರು ಹೇಳಿದ್ದಾರೆ.
2. ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ಪುನರ್ರಚನೆ
- ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ – ದೇಶದಲ್ಲಿ NEET ಮೊದಲು ಬಂದಾಗ ಬಹಳ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಆದರೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಜನರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಈ ನಿಟ್ಟಿನಲ್ಲಿ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮುಖ್ಯವಾಗಿದೆ.
- ಪ್ರಶ್ನೆಪತ್ರಿಕೆ ಭದ್ರತೆ – ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹೊಸತಲ್ಲ. ಕಳೆದ ಕೆಲವು ವರ್ಷಗಳಲ್ಲಿ ವಿವಿಧ ರಾಜ್ಯಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ NEET, ಶಿಕ್ಷಕರ ನೇಮಕಾತಿ ಪರೀಕ್ಷೆಗಳು, ಪೊಲೀಸ್ ನೇಮಕಾತಿ ಪರೀಕ್ಷೆಗಳು, ರಾಜ್ಯ ಸೇವಾ ಆಯೋಗಗಳ ಪರೀಕ್ಷೆಗಳು ಪುನಃ ಪುನಃ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳನ್ನು ಎದುರಿಸಿವೆ. ಆದರೆ NEET ನಂತಹ ರಾಷ್ಟ್ರೀಯ ಮುಖ್ಯ ಪರೀಕ್ಷೆಗಳು ಒಮ್ಮೆಯಲ್ಲ , ಹಲವು ಬಾರಿ ಒಂದೇ ಸಮನೆ ಸೋರಿಕೆಯಾಗುವುದು ವ್ಯವಸ್ಥೆಯಲ್ಲಿ ಲೋಪದೋಷಗಳಿವೆ. ಪ್ರಶ್ನೆಪತ್ರಿಕೆಗಳ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಸೂಚನೆಯೂ ಹೌದು. ಆದ್ದರಿಂದ ಪ್ರಶ್ನೆಪತ್ರಿಕೆಯ ಭದ್ರತೆಯ ಬಗ್ಗೆ ಗಮನಹರಿಸಲೇಬೇಕು ಎನ್ನುವುದು ಇನ್ನೊಂದು ಬೇಡಿಕೆ.
- ಪರೀಕ್ಷಾ ಸಂಸ್ಥೆಗಳ ಸ್ವಾಯತ್ತತೆ – ಪರೀಕ್ಷಾ ಸಂಸ್ಥೆಗಳ ಸ್ವಾಯತ್ತತೆಯಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಎದ್ದು ಕಾಣುತ್ತದೆ. ಇದು ಜವಾಬ್ದಾರಿಯನ್ನು ನಿಗದಿ ಮಾಡುವುದರಲ್ಲಿ ಗೊಂದಲ ಮೂಡಿಸುತ್ತದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಹಲವು ಕೈಗಳ ಹಸ್ತಕ್ಷೇಪದ ಸಾಧ್ಯತೆ ಇದ್ದಾಗ ಸೋರಿಕೆಯ ಸಾಧ್ಯತೆ ಹೆಚ್ಚು. ಇವೆಲ್ಲ ಕಾರಣಗಳಿಗೆ ಸ್ವಾಯತ್ತತೆ ಅನಿವಾರ್ಯ ಎನ್ನುವುದು ಅವರ ವಾದ.
- ತಾಂತ್ರಿಕ ಸುರಕ್ಷತೆ – ಎಲ್ಲವೂ ಡಿಜಿಟಲ್ ಆಗಿರುವಾಗ ಪ್ರಶ್ನೆ ಪತ್ರಿಕೆಗಳು ಬೇರೆ ರೂಪದಲ್ಲಿಯೂ ಸೋರಿರಬಹುದು. ಆದರೆ ತಾಂತ್ರಿಕ ಸುರಕ್ಷತೆಯ ಕುರಿತು ಕೈಗೊಂಡಿರುವ ಕ್ರಮಗಲು ಸಾಲದು ಎನ್ನುವುದು ಈಗಾಗಲೇ ಸಾಬೀತಾಗಿದೆ.
- ಸ್ವತಂತ್ರ ತನಿಖಾ ವ್ಯವಸ್ಥೆ – ಈಗ ನಡೆದಿರುವ ಅಕ್ರಮಕ್ಕೆ ಯಾರನ್ನೋ ಜವಾಬ್ದಾರರನ್ನಾಗಿ ಮಾಡಿ ಕೈತೊಳೆದುಕೊಂಡಾಗಿದೆ. ಆದರೆ ಸಂಪೂರ್ಣ ಪ್ರಾಮಾಣಿಕ, ಸ್ವಾಯುತ್ತ, ಸಮಗ್ರ ತನಿಖೆಯಾಗಿಲ್ಲ. ಅದಕ್ಕಾಗಿ ಸ್ವತಂತ್ರ ತನಿಖಾ ವ್ಯವಸ್ಥೆ ಬೇಕು.
3. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ಪ್ರಕರಣಗಳ ಕುರಿತು ರಾಷ್ಟ್ರೀಯ ನೀತಿ
ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ವಿದ್ಯಾರ್ಥಿಗಳಿಗೆ ಒತ್ತಡ ಸಾಮಾನ್ಯ. ಪರೀಕ್ಷಾ ಒತ್ತಡ, ನಿರುದ್ಯೋಗ ಭಯ, ಪೋಷಕರ ನಿರೀಕ್ಷೆಗಳು, ಸ್ಪರ್ಧೆಯ ಒತ್ತಡ ಇವು ವಿದ್ಯಾರ್ಥಿಗಳಲ್ಲಿ ಖಿನ್ನತೆ ಮತ್ತು ಆತ್ಮಹತ್ಯೆ ಪ್ರವೃತ್ತಿಯನ್ನು ಹೆಚ್ಚಿಸುತ್ತಿವೆ ಎಂದು ಶಿಕ್ಷಣ ತಜ್ಞರು ಎಚ್ಚರಿಸುತ್ತಿದ್ದಾರೆ.
NEET ವ್ಯವಸ್ಥೆ ಜಾರಿಯಾದ ಮೇಲಂತೂ ಪ್ರತಿವರ್ಷ ಈ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಳವಳಕ್ಕೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ಈ ಬಗ್ಗೆ ಸಮಗ್ರವಾದ ರಾಷ್ಟ್ರೀಯ ನೀತಿ ಬೇಕೆಂಬುದು ಮತ್ತೊಂದು ಬೇಡಿಕೆ.
4. ಶಿಕ್ಷಣವನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೀಮಿತಗೊಳಿಸದ ವ್ಯವಸ್ಥೆ
ಇಡೀ ಶಿಕ್ಷಣ ವ್ಯವಸ್ಥೆ NEET, JEE, UPSC, CET ಮುಂತಾದ ಪರೀಕ್ಷೆಗಳ ಸುತ್ತ ಸುತ್ತುತ್ತಿದೆ. ಪರಿಣಾಮವಾಗಿ ವಿದ್ಯಾರ್ಥಿಗಳ ಮೇಲೆ ಭಾರೀ ಮಾನಸಿಕ ಒತ್ತಡ ಹೆಚ್ಚಿದೆ. ಕೋಚಿಂಗ್ ಉದ್ಯಮ ಹೆಚ್ಚಾಗಿದೆ. ಕೋಟಾ, ಹೈದರಾಬಾದ್, ದೆಹಲಿ, ಬೆಂಗಳೂರು ಮುಂತಾದ ನಗರಗಳಲ್ಲಿ ಕೋಟ್ಯಂತರ ರೂಪಾಯಿಗಳ ಕೋಚಿಂಗ್ ಉದ್ಯಮ ಬೆಳೆದಿದೆ. “ಒಳ್ಳೆಯ ಶಿಕ್ಷಣ ಶಾಲೆಯಲ್ಲಿ ದೊರೆಯಬೇಕು; ದುಬಾರಿ ಕೋಚಿಂಗ್ ಕೇಂದ್ರಗಳಲ್ಲಿ ಅಲ್ಲ.” ಎನ್ನುವುದು ವಾಂಗ್ ಚುಕ್ ಅವರ ಅಭಿಪ್ರಾಯ.
ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈಗಾಗಲೇ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯಾಧಾರಿತ ಕಲಿಕೆಗೆ ಒತ್ತು ನೀಡಲಾಗಿದೆ. ಆದಾಗ್ಯೂ ೧೨ನೇ ತರಗತಿಯ ನಂತರ ಶಿಕ್ಷಣ ಇನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೇ ಸೀಮಿತವಾಗಿದೆ. ಅದನ್ನೂ ಸಹಿತ ಕಲಿಕೆ ಮತ್ತು ಕೌಶಲ್ಯಾಧಾರಿತಗೊಳಿಸಬೇಕು.
ಸೋನಂ ವಾಂಗ್ಚುಕ್ ಯಾಕೆ ಈ ವಿಚಾರದಲ್ಲಿ ಧ್ವನಿ ಎತ್ತುತ್ತಿದ್ದಾರೆ?
ಸೋನಂ ವಾಂಗ್ಚುಕ್ ಕೇವಲ ಪರಿಸರ ಹೋರಾಟಗಾರರಲ್ಲ. ಅವರು ಲಡಾಖ್ನಲ್ಲಿ SECMOL (Students’ Educational and Cultural Movement of Ladakh) ಮೂಲಕ ಪರ್ಯಾಯ ಶಿಕ್ಷಣ ಮಾದರಿಯನ್ನು ರೂಪಿಸಿದ ಶಿಕ್ಷಣ ಸುಧಾರಕರಾಗಿದ್ದಾರೆ. ಅವರು ಭಾರತದ ಶಿಕ್ಷಣ ವ್ಯವಸ್ಥೆ “ಮಕ್ಕಳನ್ನು ಅಂಕಗಳ ಯಂತ್ರಗಳಾಗಿ ಪರಿವರ್ತಿಸುತ್ತಿದೆ” ಎಂದು ಹಲವು ಬಾರಿ ಟೀಕಿಸಿದ್ದಾರೆ. “ಭಾರತದಲ್ಲಿ ಶಿಕ್ಷಣವು ಕಲಿಕೆಯನ್ನು ಉತ್ತೇಜಿಸುವುದಕ್ಕಿಂತ ಪರೀಕ್ಷೆಗಳನ್ನು ಉತ್ತೀರ್ಣಗೊಳ್ಳುವ ಯಂತ್ರಗಳನ್ನು ಸೃಷ್ಟಿಸುತ್ತಿದೆ.” ಎನ್ನುವುದು ಅವರ ವಾದ. ಅವರ ಶಾಲೆಯ ಕೌಶಲ್ಯಾಧಾರಿತ ಶಿಕ್ಷಣದ ಸ್ಫೂರ್ತಿ ಪಡೆದು ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಂಡಾಗ ಇದೇ ಧರ್ಮೇಂದ್ರ ಪ್ರಧಾನ್ ಅವರನ್ನು ಸೋನಂ ವಾಂಗ್ಚುಕ್, ಮತ್ತವರ ಪತ್ನಿ ಗೀತಾಂಜಲಿ ಭೇಟಿಯಾಗಿ ಅಭಿನಂದಿಸಿದ್ದರು.
ಈಗ ಪರಿಸ್ಥಿತಿ ಮತ್ತು ವಿಷಯ ಬೇರೆಯಾಗಿದೆ. ಈಗ ತಮ್ಮ ಕೆಲಸದಿಂದ ಸ್ಫೂರ್ತಿ ಪಡೆದು ಮಾಡಿದ ಕೆಲಸಕ್ಕೆ ಅಭಿನಂದಿಸುವ ವಾಂಗ್ ಚುಕ್, ತಪ್ಪಿದಾಗ ಎಚ್ಚರಿಸುವ ಯತ್ನದಲ್ಲಿದಾರೆ. ಆದರೆ ಅವರ ಈ ನಡೆ ದ್ವಂದ್ವದ್ದು ಎಂದು ಹಲವರ ವಾದವಾಗಿದೆ.
ಪ್ರತಿಭಟನೆಗೆ ಈಗಾಗಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್,ಆಮ್ ಆದ್ಮಿ ಪಕ್ಷ ಸೇರಿದಂತೆ ರೈತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ನಾಗರಿಕ ಸಮಾಜ ಮತ್ತು ಹಲವಾರು ಸಿನಿಮಾ ಮತ್ತು ಸಾಂಸ್ಕೃತಿಕ ಗಣ್ಯರು ಬೆಂಬಲ ಸೂಚಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಜಂತರ್ ಮಂತರ್ಗೆ ತೆರಳಿ ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸಿ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ನಿಲುವು ಏನು?
ಇಲ್ಲಿಯವರೆಗೆ ಕೇಂದ್ರ ಸರ್ಕಾರ ಸಚಿವರ ರಾಜೀನಾಮೆಯ ಬೇಡಿಕೆಯನ್ನು ತಿರಸ್ಕರಿಸಿದೆ. ಪ್ರತಿಭಟನಾಕಾರರೊಂದಿಗೆ ಯಾವುದೇ ಅಧಿಕೃತ ರಾಜಕೀಯ ಸಂವಾದ ನಡೆಸಿಲ್ಲ. ವಾಂಗ್ಚುಕ್ ಅವರ ಆರೋಗ್ಯದ ಮೇಲ್ವಿಚಾರಣೆಗೆ ಮಾತ್ರ ಒಪ್ಪಿದೆ. ಜುಲೈ ೧೮ರಂದು ಅವರನ್ನು ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಿದೆ. ಭದ್ರತೆಯ ಹೆಸರಲ್ಲಿ ಜೈಲಿನ ವಾತಾವರಣವಿದೆ ಎಂದು ಅವರ ಪತ್ನಿ ಗೀತಾಂಜಲಿ ಆರೋಪಿಸಿದ್ದಾರೆ. ಕೇಂದ್ರ ಸರಕಾರದಿಂದ ಇಲ್ಲಿಯವರೆಗೆ ಕನಿಷ್ಠ ಒಂದು ಹೇಳಿಕೆ ಸಹ ವ್ಯಕ್ತವಾಗಿಲ್ಲ. ಇದು ಸಮಾಜದ ಎಚ್ಚೆತ್ತ ನಾಗರಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಮುಂದೇನಾಗಬಹುದು?
ಸನ್ನಿವೇಶ 1: ಸರ್ಕಾರ ಮಾತುಕತೆಗೆ ಮುಂದಾಗಬಹುದು
ವಿದ್ಯಾರ್ಥಿ ಮತ್ತು ಸಾರ್ವಜನಿಕ ಒತ್ತಡ ಹೆಚ್ಚಾದರೆ ಸರ್ಕಾರ ಸುಧಾರಣಾ ಸಮಿತಿಯನ್ನು ಘೋಷಿಸಬಹುದು.
ಸಾಧ್ಯತೆ: ಮಧ್ಯಮ
ಸನ್ನಿವೇಶ 2: ರಾಜೀನಾಮೆ ಇಲ್ಲ, ಆದರೆ ಶಿಕ್ಷಣ ಸುಧಾರಣೆಯ ಘೋಷಣೆ
ಸರ್ಕಾರ ಪರೀಕ್ಷಾ ಸಂಸ್ಥೆಗಳ ಪುನರ್ರಚನೆ ಮತ್ತು ಹೊಸ ಭದ್ರತಾ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.
ಸಾಧ್ಯತೆ: ಹೆಚ್ಚು
ಸನ್ನಿವೇಶ 3: ಪ್ರತಿಭಟನೆ ರಾಷ್ಟ್ರೀಯ ವಿದ್ಯಾರ್ಥಿ ಚಳವಳಿಯಾಗಿ ರೂಪಾಂತರ
ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿ ಚಳವಳಿ ಉಂಟಾಗಬಹುದು.
ಸಾಧ್ಯತೆ: ಹೆಚ್ಚುತ್ತಿರುವುದು
ಈಗಾಗಲೇ ನಾಳೆ ನಡೆಯಲಿರುವ ಲೋಕಭವನ ಚಲೋ ಮುತ್ತಿಗೆ ಕಾರ್ಯಕ್ರಮಕ್ಕೆ ಎಲ್ಲಾ ರಾಜ್ಯಗಳಿಂದ ವಿದ್ಯಾರ್ಥಿಗಳು, ಪೋಷಕರು ಜಮಾಯಿಸುತ್ತಿದ್ದಾರೆ.
ರಾಜಕೀಯ ಪರಿಣಾಮ
ಈ ಚಳವಳಿ ಕೇವಲ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಅಲ್ಲ. ಇದು ಮೂರು ದೊಡ್ಡ ಪ್ರಶ್ನೆಗಳನ್ನು ಎತ್ತುತ್ತಿದೆ:
- ಸರ್ಕಾರದ ಉತ್ತರದಾಯಿತ್ವ ಎಲ್ಲಿದೆ?
- ಭಾರತದ ಪರೀಕ್ಷಾ ವ್ಯವಸ್ಥೆ ವಿಶ್ವಾಸಾರ್ಹವೇ?
- ಯುವಜನರ ಭವಿಷ್ಯವನ್ನು ನಾವು ಸುರಕ್ಷಿತಗೊಳಿಸಿದ್ದೇವೆಯೇ?
ಸರಕಾರ ಈಗಲೂ ಉತ್ತರದಾಯಿತ್ವ ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ತನ್ನ ಬುಡಕ್ಕೆ ತಾನೇ ಬೆಂಕಿ ಹಾಕಿಕೊಳ್ಳುವ ಪ್ರಕ್ರಿಯೆ ಇದಾದರೂ ಆಶ್ಚರ್ಯವಿಲ್ಲ.
ಸೋನಂ ವಾಂಗ್ಚುಕ್ ಅವರ ಉಪವಾಸವು ಒಬ್ಬ ಸಚಿವರ ರಾಜೀನಾಮೆಗಾಗಿ ನಡೆಯುತ್ತಿರುವ ಹೋರಾಟ ಮಾತ್ರವಲ್ಲ. ಇದು ಭಾರತದ ಶಿಕ್ಷಣ ವ್ಯವಸ್ಥೆಯ ನೈತಿಕ ಸಂಕಷ್ಟದ ವಿರುದ್ಧದ ಸತ್ಯಾಗ್ರಹವಾಗಿದೆ. ಒಂದು ಪೀಳಿಗೆ ಇಂದು ಪ್ರಶ್ನಿಸುತ್ತಿದೆ: “ನಮ್ಮ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷಾ ವ್ಯವಸ್ಥೆಯ ಮೇಲೆಯೇ ನಂಬಿಕೆ ಇರದಿದ್ದರೆ, ನಾವು ಯಾರನ್ನು ನಂಬಬೇಕು?”






