ತ್ಯಾಗ, ಧರ್ಮರಕ್ಷಣೆ ಮತ್ತು ಸಮಾನತೆಯ ಶಾಶ್ವತ ಪರಂಪರೆ

ಭಾರತದ ಧಾರ್ಮಿಕ–ಸಾಂಸ್ಕೃತಿಕ ಇತಿಹಾಸದಲ್ಲಿ ಸಿಖ್ ಧರ್ಮವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಕ್ತಿ, ಧರ್ಮರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಮಾನವ ಗೌರವವನ್ನು ಮೂಲ ತತ್ತ್ವಗಳಾಗಿ ಹೊಂದಿರುವ ಈ ಧರ್ಮದ ಬೆಳವಣಿಗೆಯಲ್ಲಿ ಗುರು ಗೋವಿಂದ್ ಸಿಂಗ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ಕೇವಲ ಧಾರ್ಮಿಕ ಗುರು ಮಾತ್ರವಲ್ಲದೆ, ನ್ಯಾಯ, ಶೌರ್ಯ ಮತ್ತು ಸ್ವಾಭಿಮಾನಕ್ಕೆ ಸಂಕೇತವಾದ ಮಹಾನ್ ನಾಯಕನಾಗಿದ್ದರು.

ಸಿಖ್ ಧರ್ಮದ ಉದಯ: ಗುರು ನಾನಕ್ ದೇವ್ ಜೀ ಯಿಂದ ಆರಂಭ

ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ (1469–1539) ಉತ್ತರ ಭಾರತದ ಧಾರ್ಮಿಕ ಹಾಗೂ ಸಾಮಾಜಿಕ ಅಸಮಾನತೆಗಳ ನಡುವೆ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. “ಇಕ್ ಓಂಕಾರ್” ಎಂಬ ತತ್ತ್ವದ ಮೂಲಕ ದೇವರೊಬ್ಬನೇ, ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದರು. ಜಾತಿ, ಧರ್ಮ, ಲಿಂಗದ ಭೇದವಿಲ್ಲದೆ ಮಾನವೀಯತೆಯೇ ಧರ್ಮ ಎಂಬ ಚಿಂತನೆ ಸಿಖ್ ಧರ್ಮದ ಆಧಾರವಾಗಿದೆ. ಗುರು ನಾನಕ್ ನಂತರ ಬಂದ ಒಂಬತ್ತು ಗುರುಗಳು ಈ ಧರ್ಮವನ್ನು ಸಂಘಟಿತ ರೂಪಕ್ಕೆ ತಂದರು. ಕಾಲಕ್ರಮೇಣ ಸಿಖ್ ಸಮುದಾಯ ಧಾರ್ಮಿಕ ಚಳವಳಿಯಿಂದ ಸಾಮಾಜಿಕ–ರಾಜಕೀಯ ಶಕ್ತಿಯಾಗಿ ಬೆಳೆಯಿತು.

ಗುರು ಗೋವಿಂದ್ ಸಿಂಗ್ ಕೊಟ್ಟ ಸಿಖ್ ಇತಿಹಾಸದ ತಿರುವು

1666ರಲ್ಲಿ ಪಾಟ್ನಾ ಸಾಹಿಬ್‌ನಲ್ಲಿ ಜನಿಸಿದ ಗುರು ಗೋವಿಂದ್ ಸಿಂಗ್, ಸಿಖ್ ಧರ್ಮದ ಹತ್ತನೇ ಮತ್ತು ಕೊನೆಯ ಮಾನವ ಗುರು. ಬಾಲ್ಯದಲ್ಲೇ ಅವರ ತಂದೆ ಗುರು ತೆಗ್ ಬಹಾದುರ್ ರನ್ನು ಔರಂಗ್ ಜೇಬ್ ಕೊಲ್ಲಿಸಿದ. ಇದನ್ನು ಕಂಡು ಅವರು ಧರ್ಮಕ್ಕಾಗಿ ತ್ಯಾಗವೇ ಶ್ರೇಷ್ಠ ಎಂಬ ಪಾಠವನ್ನು ಜೀವನದ ಕೇಂದ್ರಬಿಂದು ಮಾಡಿಕೊಂಡರು. ಮುಗಲ್ ಆಡಳಿತದ ಕಾಲದಲ್ಲಿ ಧಾರ್ಮಿಕ ಹಿಂಸೆ, ಬಲವಂತದ ಮತಾಂತರಗಳು ಹೆಚ್ಚಾಗಿದ್ದವು. ಈ ಸಂದರ್ಭ ಗುರು ಗೋವಿಂದ್ ಸಿಂಗ್ ಸಿಖ್ ಧರ್ಮವನ್ನು ಕೇವಲ ಆಧ್ಯಾತ್ಮಿಕ ಚಳವಳಿಯಿಂದ ಧರ್ಮರಕ್ಷಕ ಶಕ್ತಿಯಾಗಿ ರೂಪಿಸಿದರು.

ಖಾಲ್ಸಾ ಪಂಥದ ಸ್ಥಾಪನೆ: ಧೈರ್ಯ ಮತ್ತು ಸಮಾನತೆಯ ಘೋಷಣೆ

1699ರಲ್ಲಿ ವೈಸಾಖಿ ಹಬ್ಬದಂದು, ಗುರು ಗೋವಿಂದ್ ಸಿಂಗ್ ಖಾಲ್ಸಾ ಪಂಥವನ್ನು ಸ್ಥಾಪಿಸಿದರು. ಇದು ಸಿಖ್ ಇತಿಹಾಸದಲ್ಲಿನ ಕ್ರಾಂತಿಕಾರಿ ಘಟ್ಟ. ಖಾಲ್ಸಾ ಪಂಥದ ತತ್ತ್ವಗಳು:

* ಎಲ್ಲರೂ ಸಮಾನರು – ರಾಜ–ರೈತ ಭೇದವಿಲ್ಲ

* ಅನ್ಯಾಯದ ವಿರುದ್ಧ ಹೋರಾಟ ಧರ್ಮ

* ಧರ್ಮ ರಕ್ಷಣೆಗಾಗಿ ಶಸ್ತ್ರ ಮತ್ತು ಶಾಂತಿ ಎರಡೂ ಅಗತ್ಯ

* ಐದು ಕಕ್ಕರ್‌ಗಳು (ಕೇಶ, ಕಂಗಾ, ಕರಾ, ಕಚ್ಚಾ, ಕಿರ್ಪಾನ್) ಸಿಖ್ ಗುರುತಿನ ಚಿಹ್ನೆಗಳು

1708ರಲ್ಲಿ ಗುರು ಗೋಬಿಂದ್ ಸಿಂಗ್ ಜೀ ಮಾನವ ಗುರು ಪರಂಪರೆಯನ್ನು ಅಂತ್ಯಗೊಳಿಸಿ, ಗುರು ಗ್ರಂಥ ಸಾಹಿಬ್‌ನ್ನು ಸಿಖ್ ಧರ್ಮದ ಶಾಶ್ವತ ಗುರು ಎಂದು ಘೋಷಿಸಿದರು. ಇದು ಜಗತ್ತಿನ ಧಾರ್ಮಿಕ ಇತಿಹಾಸದಲ್ಲೇ ಅಪರೂಪದ ತೀರ್ಮಾನ. ಪುಸ್ತಕವೇ ಗುರುವೆಂದು ಸಾರುತ್ತ, ಧರ್ಮ; ವ್ಯಕ್ತಿಗಳಿಗಿಂತ ತತ್ತ್ವಗಳ ಮೇಲೆ ನಿಂತಿದೆ ಎಂಬುದನ್ನು ನಿರೂಪಿಸಿದರು. ಭಕ್ತಿಗೀತಗಳು, ಸೂಫಿ ಮತ್ತು ಸಂತ ಕವಿಗಳ ವಚನಗಳೂ ಸೇರಿರುವ ಇದು ಕೇವಲ ಧರ್ಮಗ್ರಂಥವಲ್ಲ, ಗುರುಗ್ರಂಥವಲ್ಲ , ಸಮಾನತೆಯ ಗ್ರಂಥವೂ ಆಗಿದೆ.

ಭಾರತದಲ್ಲಿನ ಸಿಖ್‌ಗಳ ಐತಿಹಾಸಿಕ ಪಾತ್ರ

ಗುರು ಗೋವಿಂದ್ ಸಿಂಗ್ ಅವರ ನಂತರ ಸಿಖ್ ಸಮುದಾಯವು ಮೊಘಲ್ ದೌರ್ಜನ್ಯದ ವಿರುದ್ಧ ಹೋರಾಟ ಮುಂದುವರಿಸಿತು. ಮಹಾರಾಜಾ ರಂಜಿತ್ ಸಿಂಗ್ ಕಾಲದಲ್ಲಿ ಶಕ್ತಿಶಾಲಿ ಸಿಖ್ ಸಾಮ್ರಾಜ್ಯ ಸ್ಥಾಪನೆಯಾಯಿತು. ಈ ಸಮುದಾಯವು ಬ್ರಿಟಿಷ್ ಕಾಲದಲ್ಲಿ ಸೈನಿಕ ಮತ್ತು ಆಡಳಿತ ಸೇವೆಯಲ್ಲಿ ಸಕ್ರಿಯವಾಗಿತ್ತು. ಆದಾಗ್ಯೂ ಸ್ವಾತಂತ್ರ್ಯ ಹೋರಾಟದಲ್ಲಿಯೂ ಈ ಸಮುದಾಯ ತನ್ನದೇ ಕೊಡುಗೆ ನೀಡಲು ಹಿಂದೆ ಬಿದ್ದಿಲ್ಲ. ಇಂದಿಗೂ ಭಾರತೀಯ ಸೇನೆ, ಕೃಷಿ, ಕೈಗಾರಿಕೆ, ಶಿಕ್ಷಣ ಮತ್ತು ಸೇವಾ ಕ್ಷೇತ್ರಗಳಲ್ಲಿ ಸಿಖ್ ಸಮುದಾಯದ ಕೊಡುಗೆ ಅತ್ಯಂತ ಮಹತ್ವದ್ದು.

ಗುರು ಗೋವಿಂದ್ ಸಿಂಗ್ ಅವರ ಜೀವನ ಇಂದು ಕೂಡ ಪ್ರಸ್ತುತ. ಧರ್ಮ ಎಂದರೆ ಅಂಧ ನಂಬಿಕೆ ಅಲ್ಲ, ಧರ್ಮ ಎಂದರೆ ನ್ಯಾಯ. ಭಕ್ತಿ ಮತ್ತು ಶೌರ್ಯ ಒಂದೇ ನಾಣ್ಯದ ಎರಡು ಮುಖಗಳು. ಅಲ್ಪಸಂಖ್ಯಾತರ ಹಕ್ಕು ರಕ್ಷಣೆ ರಾಷ್ಟ್ರಧರ್ಮ ಎಂಬುದನ್ನು ತಿಳಿಸಿಕೊಡುತ್ತದೆ. ಭಾರತದ ಬಹುಸಾಂಸ್ಕೃತಿಕ ಸಮಾಜದಲ್ಲಿ ಸಿಖ್ ಧರ್ಮವು ಧಾರ್ಮಿಕ ಸಹಿಷ್ಣುತೆ ಮತ್ತು ಮಾನವೀಯತೆಯ ಶಾಶ್ವತ ಪಾಠವನ್ನು ನೀಡುತ್ತಿದೆ. ಗುರು ಗೋವಿಂದ್ ಸಿಂಗ್ ಅವರ ಜೀವನ ಮತ್ತು ಸಿಖ್ ಧರ್ಮದ ಇತಿಹಾಸವು ಕೇವಲ ಒಂದು ಸಮುದಾಯದ ಕಥೆಯಲ್ಲ; ಅದು ಭಾರತದ ಆತ್ಮದ ಕಥೆ. ತ್ಯಾಗ, ಧೈರ್ಯ, ಸಮಾನತೆ ಮತ್ತು ನ್ಯಾಯ – ಈ ಮೌಲ್ಯಗಳು ಭಾರತದ ಜನತಾಂತ್ರಿಕ ಪರಂಪರೆಯ ಹೃದಯವಾಗಿದೆ. ಸಿಖ್ ಇತಿಹಾಸವನ್ನು ತಿಳಿಯುವುದು ಎಂದರೆ ಭಾರತವನ್ನು ಅರ್ಥಮಾಡಿಕೊಳ್ಳುವ ಮತ್ತೊಂದು ದಾರಿ.

Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

By Sheela Bhat

ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

Leave a Reply

Your email address will not be published. Required fields are marked *