ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದ ಕಾದಾಟ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಪಕ್ಷದ ಚುನಾವಣಾ ಚಾಣಕ್ಯ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿಗೆ ಸಿಎಂ ಸ್ಥಾನ ತಪ್ಪಿಸಲು ಸಿದ್ದು ಬಣದ ದಲಿತ ನಾಯಕರು ಮುಂದಾಗಿದ್ದಾರೆ. ಡಿಕೆಶಿ ವಿರುದ್ಧ ದಲಿತಾಸ್ತ್ರ ಪ್ರಯೋಗಿಸಿ ಅವರ ಸಿಎಂ ಕನಸನ್ನ ನುಚ್ಚುನೂರು ಮಾಡಲು ರಣತಂತ್ರ ರೂಪಿಸಲಾಗುತ್ತಿದೆ ಎಂಬ ಚರ್ಚೆಗಳು ಪ್ರಾರಂಭವಾಗಿವೆ.
ಈ ಬೆಳವಣಿಗಳ ಮಧ್ಯೆ ಅಲರ್ಟ್ ಆದ ರಾಜ್ಯಾಧ್ಯಕ್ಷರು ಕೂಡಲೇ ಡಿನ್ನರ್ ಪಾಲಿಟಿಕ್ಸ್ಗಳಿಗೆ ಹೈಕಮಾಂಡ್ ಮೂಲಕ ಬ್ರೇಕ್ ಹಾಕಿಸಿದ್ದಾರೆ. ಇದು ಸಿದ್ದು ಬೆಂಬಲಿಗರ ಕಣ್ಣನ್ನ ಕೆಂಪಾಗಿಸಿದ್ದು, ಸಚಿವ ಕೆ.ಎನ್ ರಾಜಣ್ಣ ಡಿಕೆಶಿ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ರು. ಇದೀಗ ಪರಿಸ್ಥಿತಿ ಕೈಮೀರದಂತೆ ತಡೆಯಲು ಸಿಎಂ ಸಿದ್ದರಾಮಯ್ಯ ರಂಗಪ್ರವೇಶ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿಎಂ
ಎರಡು ಬಣಗಳ ನಾಯಕರ ಅಸಮಾಧಾನ ಶಮನಕ್ಕೆ ಸಿಎಂ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಜನವರಿ 13 ಸೋಮವಾರ ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಕರೆಯಲಾಗುತ್ತಿರುವ ಮೊದಲ ಶಾಸಕಾಂಗ ಪಕ್ಷದ ಸಭೆ ಇದಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ವಾರ ಡಿಕೆ ಶಿವಕುಮಾರ್ ರಾಜ್ಯದಲ್ಲಿ ಇಲ್ಲದಿರುವಾಗ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆದಿತ್ತು. ಆ ಡಿನ್ನರ್ ಮೀಟಿಂಗ್ನಲ್ಲಿ ಕೇವಲ ಸಿದ್ದರಾಮಯ್ಯ ಆಪ್ತ ಬಣದ ಸಚಿವರು ಮತ್ತು ಶಾಸಕರು ಮಾತ್ರ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಸಹ ಡಿನ್ನರ್ ಮೀಟಿಂಗ್ ಕರೆದಿದ್ದರು. ಆದರೆ, ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ.
ಇದೇ ವಿಚಾರ ಈಗ ಪಕ್ಷದಲ್ಲಿ ಜೋರಾಗಿ ಚರ್ಚೆಯಾಗುತ್ತದೆ. ಡಿನ್ನರ್ ಮೀಟಿಂಗ್ ಯಾಕೆ ಮಾಡಿದರು? ರದ್ದುಗೊಂಡಿದ್ದು ಏಕೆ? ಎಂಬ ಪ್ರಶ್ನೆಗಳು ಮೂಡಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ದಿಢೀರ್ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಭಾರಿ ಕುತೂಹಲ ಮೂಡಿಸಿದೆ.
ಈ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಕಾರ್ಯಕ್ರಮವನ್ನು ಜನವರಿ 21ರಂದು ನಡೆಸಲು ನಿರ್ಧರಿಸಿಸಿದ್ದಾರೆ. ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಲು ಮುಂದಾಗಿದ್ದಾರೆ.
ಜೊತೆಗೆ ಇತ್ತ ಪಕ್ಷದ ಆತಂರಿಕ ಬಿಕಟ್ಟು ಹೆಚ್ಚಾಗುತ್ತಿದ್ದನ್ನ ಅರಿತ ಚಾಣಕ್ಯ ಡಿಕೆಶಿ, ಗೃಹ ಸಚಿವ ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ಮೂಲಕ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶ ರವಾನಿಸಲು ಯತ್ನಿಸಿದರು.
ಈ ವೇಳೆ ಮಾತಾಡಿದ ಡಿಕೆಶಿ, ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೌಲ್ಯಗಳನ್ನು ಉಳಿಸಲು, ಸಂವಿಧಾನವನ್ನು ರಕ್ಷಿಸಲು ಮತ್ತು ನಮ್ಮ ಪಕ್ಷದ ತತ್ವಗಳನ್ನು ಉತ್ತೇಜಿಸಲು ಸಿಎಲ್ಪಿ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ನಾವು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗುತ್ತೆ ಎಂದರು.
ಒಟ್ಟಾರೆ ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಈ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಹೇಗೆ ಎದುರಿಸುತ್ತಾರೆ ಎಂಬುದು ಕಾದುನೋಡಬೇಕಾಗಿದೆ.






