ಲೈಂಗಿಕ ದೌರ್ಜನ್ಯ ಪ್ರಕರಣ: ಹೆಚ್. ಡಿ. ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ

G Parameshwar : ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ. ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ಇಂದು ಸಂಜೆಯವರೆಗೂ ಸಮಯಾವಕಾಶವಿದೆ.

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಜೊತೆಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಶನಿವಾರ ತಿಳಿಸಿದರು.

ತನಿಖೆ ನಡೆಸುತ್ತಿರುವ SIT ಮುಂದೆ ವಿಚಾರಣೆಗೆ ಹಾಜರಾಗಲು ಇಂದು ಸಂಜೆಯವರೆಗೂ ಸಮಯಾವಕಾಶವಿದೆ. ಅವರ ವಿರುದ್ಧ ಈಗಾಗಲೇ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಈ ನಡುವೆ ಹೊಳೆ ನರಸೀಪುರದ ಹೆಚ್. ಡಿ. ರೇವಣ್ಣ ನಿವಾಸದಲ್ಲಿ ಎಸ್ ಐಟಿಯಿಂದ ಸ್ಥಳ ಮಹಜರು ನಡೆಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಮತ್ತು ಪ್ರಜ್ವಲ್ ಇಬ್ಬರ ವಿರುದ್ಧವೂ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ. ರೇವಣ್ಣ ಕೂಡ ವಿದೇಶಕ್ಕೆ ಹೋಗಲು ಮುಂದಾಗಬಹುದು ಎಂಬ ನಿರೀಕ್ಷೆಯಲ್ಲಿ ಈ ನೋಟಿಸ್ ನೀಡಲಾಗಿದೆ ಎಂದರು.

ಈ ನಡುವೆ ಅಪಹರಣ ಪ್ರಕರಣದಲ್ಲಿ ಹೆಚ್. ಡಿ. ರೇವಣ್ಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಬಂಧನ ಆಗಲಿದೆ. ಲುಕ್‌ಔಟ್ ನೋಟಿಸ್‌ಗಳನ್ನು ನೀಡಲಾಗಿದೆ. ಇತರ ಹಲವಾರು ಬೆಳವಣಿಗೆಗಳು ನಡೆಯುತ್ತವೆ, ಅನೇಕ ವಿಷಯಗಳು ಸಾರ್ವಜನಿಕರ ಗಮನಕ್ಕೆ ಬರದೇ ಇರಬಹುದು. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಕಳೆದ ಭಾನುವಾರ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ತಂದೆ ಮತ್ತು ಮಗನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

Author

error: