ಶಾಸಕ ಹೆಚ್.ಡಿ.ರೇವಣ್ಣ ಅವರ ಪುತ್ರ ಹಾಗೂ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಕುರಿತಂತೆ , ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ಆರಂಭಿಸಿದೆ..
ಸಂತ್ರಸ್ತರ ಮಹಿಳೆಯರಲ್ಲಿ ಒಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಪ್ರಕರಣ ಬಯಲಾಯಿತು.. ಲೈಂಗಿಕ ದೌರ್ಜನ್ಯದ ಅಶ್ಲೀಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.
ಪ್ರಕರಣ ಸಂಬಂಧ ಎಡಿಜಿಪಿ-ಸಿಐಡಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಹೆಚ್ಚುವರಿ ಕಮಿಷನರ್ ಸುಮನ್ ಡಿ ಪೆನ್ನೇಕರ್ ಮತ್ತು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಅವರನ್ನೊಳಗೊಂಡ ಎಸ್ಐಟಿ ತಂಡ ತನಿಖೆಯನ್ನು ಆರಂಭಿಸಿತು
ಪೊಲೀಸರು ಐಪಿಸಿ ಸೆಕ್ಷನ್ 354ಎ (ಲೈಂಗಿಕ ಕಿರುಕುಳ), 354ಡಿ (ಮಹಿಳೆಗೆ ಮುಜುಗರ), 506 (ಬೆದರಿಕೆ), 509 (ಮಹಿಳೆಯರ ಮರ್ಯಾದೆಗೆ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ, ರೇವಣ್ಣ ಅವರನ್ನು 1 ಮತ್ತು ಪ್ರಜ್ವಲ್ ರೇವಣ್ಣ ಅವರನ್ನು 2ನೇ ಆರೋಪಿಗಳನ್ನಾಗಿ ಮಾಡಲಾಗಿದೆ.
ಮನೆಯಲ್ಲಿ ಒಬ್ಬಳೇ ಇದ್ದಾಗ ರೇವಣ್ಣ ಮತ್ತು ಪ್ರಜ್ವಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಅಂದಾಜು 2,876 ಮಹಿಳೆಯರನ್ನು ಪ್ರಜ್ವಲ್ ಶೋಷಣೆ ಮಾಡಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಹೇಳಿದ್ದು, ಈ ಸಂಬಂಧ ತಮ್ಮ ವಾಟ್ಸಾಪ್ ಖಾತೆಯಲ್ಲಿ ದೂರನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಎಸ್ಐಟಿ ತಂಡ ವೀಡಿಯೊಗಳಿರುವ ಪೆನ್ ಡ್ರೈವ್‌ಗಳನ್ನು ಸಂಗ್ರಹಿಸುತ್ತಿದ್ದು, ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನಿಸಲು ಮುಂದಾಗಿದೆ.
ಅಲ್ಲದೆ, ಪ್ರಕರಣದಲ್ಲಿ ಆರೋಪಿಗಳಾಗಿರುವ ಪ್ರಜ್ವಲ್ ಹಾಗೂ ರೇವಣ್ಣ ಅವರಿಗೂ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿದ್ದು, ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಲುಕ್‌ಔಟ್ ನೋಟಿಸ್’ನ್ನು ಶೀಘ್ರದಲ್ಲೇ ಜಾರಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
