ಎರಡು ಸಚಿವ ಸ್ಥಾನಕ್ಕೆ ಟವೆಲ್ ಹಾಕಿದ ದೇವೇಗೌಡರ ಕುಟುಂಬ : ಕುಮಾರಸ್ವಾಮಿಗೆ ಬೇಕಂತೆ ಕೃಷಿ ಸಚಿವ ಸ್ಥಾನ !

ಬೆಂಗಳೂರು : ಇನ್ನೂ ಚುನಾವಣೆ ಮುಗಿದಿಲ್ಲ.. ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಎಷ್ಟು ಸ್ಠಾನ ಪಡೆಯಬಹುದು ಎಂಬುದು ಗೊತ್ತಿಲ್ಲ. ಆದರೆ ಜೆಡಿಎಸ್ ಈಗಾಗಲೇ ಸಚಿವ ಸ್ಥಾನವನ್ನು ತಾನೇ ಹಂಚಿಕೊಂಡು ಬಿಟ್ಟಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿರು ಡಾ. ಮಂಜುನಾಥ್ ಆರೋಗ್ಯ ಸಚಿವರಾಗುತ್ತಾರೆ ಎಂದು ಪ್ರಚಾರ ಮಾಡುತ್ತಿರುವುದು ಜೆಡಿಎಸ್.

ಈಗ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಎಚ್. ಡಿ. ಕುಮಾರಸ್ವಾಮಿ ಅವರೂ ತಾವು ಸಚಿವರಾಗುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಉತ್ತಮ ಭವಿಷ್ಯಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಚುನಾವಣೆ ನಂತರ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಕೆ ಅವರ ಪಕ್ಷ ಮತ್ತು ನಾಯಕರು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಸಚಿವ ಸ್ಥಾನಕ್ಕೆ ಟವೆಲ್ ಹಾಕಿಬಿಟ್ಟಿದಾರೆ. ಕೇಂದ್ರದಲ್ಲಿ ಮತ್ತೆ ಎನ್ ಡಿಎ ಅಧಿಕಾರಕ್ಕೆ ಬಂದು ಪ್ರಧಾನಿ ಮೋದಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಕೊಟ್ಟರೆ ಕೃಷಿ ಸಚಿವನಾಗಲು ಬಯಸುತ್ತೇನೆ ಎಂದಿದ್ದಾರೆ ಕುಮಾರಸ್ವಾಮಿ.

ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಚಿವರಾಗುವ ತಮ್ಮ ಆಸೆಯನ್ನು ಬಹಿರಂಗಪಡಿಸಿದ್ದಾರೆ,
“ನಾವು ಎನ್‌ಡಿಎ ಭಾಗವಾಗುವುದು ಭವಿಷ್ಯದಲ್ಲಿ ನಮ್ಮ ಪಕ್ಷದ ನಾಯಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಬಿಜೆಪಿಯೊಂದಿಗೆ ದೀರ್ಘಕಾಲದ ಸಂಬಂಧವನ್ನು ಬಯಸುತ್ತೇವೆ ಆದರೆ ಅಂತಿಮವಾಗಿ ನಮ್ಮನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಮತ್ತು ಬಿಜೆಪಿಯಿಂದ ನಮಗೆ ಎಷ್ಟು ಗೌರವ ಸಿಗುತ್ತದೆ ಎಂಬುದರ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

”ನನ್ನನ್ನು ಕೇಂದ್ರ ಸಚಿವರನ್ನಾಗಿ ನೋಡಬೇಕು ಎಂಬುದು ಮಂಡ್ಯದ ಜನರ ಆಕಾಂಕ್ಷೆ ಮಾತ್ರವಲ್ಲ ಬಿಜೆಪಿ ಗೆಳೆಯರೂ ಸಹ ನಾನು ಸಚಿವರಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಭಾವಿಸಿದ್ದಾರೆ, ನಾನು ಕೃಷಿ ಹಿನ್ನೆಲೆಯಿಂದ ಬಂದಿದ್ದೇನೆ ಮತ್ತು ನನಗೆ ಅವಕಾಶ ನೀಡಿದರೆ ಕೃಷಿ ಸಚಿವನಾಗಿ ಸರ್ಕಾರಕ್ಕೆ ಒಳ್ಳೆ ಹೆಸರು ತಂದುಕೊಡುತ್ತೇನೆ. ನಾನು ಒಳ್ಳೆಯ ಕೆಲಸ ಮಾಡಬಲ್ಲೆ ಎಂಬ ನಂಬಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದೆ. ಅವಕಾಶ ಸಿಕ್ಕರೆ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಇದರಿಂದ ಒಂದು ಅಂಶ ಸ್ಪಷ್ಟ. ದೇವೇಗೌಡರ ಕುಟುಂಬ ಡಾ. ಮಂಜುನಾಥ್ ಮತ್ತು ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಬಯಸುತ್ತಿದೆ. ಇದು ಬಿಜೆಪಿಗೆ ತಲೆ ನೋವಾಗಬಹುದೆ ಎಂಬುದನ್ನು ಭವಿಷ್ಯವೇ ಹೇಳಬೇಕು. ಜೊತೆಗೆ ಇವರು ಗೆಲ್ಲಬೇಕು ಅವರೂ ಗೆಲ್ಲಬೇಕು ಅಷ್ಟೇ,

Author

Leave a Reply

Your email address will not be published. Required fields are marked *