ರಾಮನಗರ : ಮುಂದೊಂದು ದಿನ ರಾಜ್ಯದಲ್ಲಿ ಜೆಡಿಎಸ್ – ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ರಾಮನಗರ ನಗರಸಭೆಯನ್ನುಮಹಾ ನಗರಪಾಲಿಕೆಯನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ವಿಠ್ಠಲೇನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಕೇಂದ್ರ ಸಚಿವರು, ಈ ಸರ್ಕಾರದ ಆಡಳಿತದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಈ ಭೂಮಿಗಳನ್ನು ಲೂಟಿ ಹೊಡೆಯುವುದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುತ್ತೇವೆ ಎಂದು ಕೆಲವರು ಹೊರಟಿದ್ದಾರೆ. ನಾವೆಲ್ಲಾ ಈ ನೆಲದ ಮಕ್ಕಳು, ಮಣ್ಣು ನಂಬಿಕೊಂಡು ಜೀವನ ಮಾಡುವವರು. ಮಣ್ಣು ಮಾರಿಕೊಂಡು ಬದುಕುವ ಜನ ನಾವಲ್ಲ ಎಂದರು.
ಚನ್ನಪಟ್ಟಣ ಹಾಗೂ ರಾಮನಗರಗಳನ್ನು ಅವಳಿ ನಗರಗಳನ್ನಾಗಿ ಹುಬ್ಬಳ್ಳಿ – ಧಾರವಾಡದಂತೆ ಅಭಿವೃದ್ಧಿ ಮಾಡಲಾಗುವುದು. ಚನ್ನಪಟ್ಟಣ ಮಾದರಿ ವಿಧಾನಸಭೆ ಕ್ಷೇತ್ರವನ್ನಾಗಿ ರೂಪಿಸಿ ಶೈಕ್ಷಣಿಕ, ಆರ್ಥಿಕ ಹಾಗೂ ಕೈಗಾರಿಕಾ ಹಬ್ ಅನ್ನಾಗಿ ಮಾಡಲಾಗುವುದು ಎಂದು ಸಚಿವರು ಹೇಳಿದರು.
ವಿಠ್ಠಲೇನಹಳ್ಳಿ ಮತ್ತು ದೇವೆಗೌಡರ ಬಾಂಧವ್ಯ ಸ್ಮರಿಸಿದ ಸಚಿವರು:
ವಿಠ್ಠಲೇನಹಳ್ಳಿ ಗ್ರಾಮದ ಜತೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಹೊಂದಿರುವ ಬಾಂಧವ್ಯವನ್ನು ಸ್ಮರಿಸಿದ ಕುಮಾರಸ್ವಾಮಿ ಅವರು, ವಿಶೇಷವಾಗಿ ಗ್ರಾಮಸ್ಥರಿಗೆ ಅಭಿವಂದನೆ ಸಲ್ಲಿಸಿದರು.
ಅಲ್ಲದೆ, ಈ ಗ್ರಾಮದಿಂದ ದೇವೆಗೌಡರು ಬೆಂಗಳೂರುವರೆಗೂ ನಡೆಸಿದ ಪಾದಯಾತ್ರೆಯನ್ನು ನೆನಪು ಮಾಡಿಕೊಂಡರು.







