ಪ್ರತಿದಿನ ಪ್ರತಿ ಮಾಧ್ಯಮದಲ್ಲೂ ನೀವು ಕೇಳಿರುತ್ತೀರಿ, ನೋಡಿರುತ್ತೀರಿ. ವ್ಯಕ್ತಿಯ ದಿನಚರಿ ಹೇಗಿದ್ದರೆ ಆರೋಗ್ಯವಾಗಿ ಖುಷಿಯಾಗಿ ಇರುತ್ತಾರೆ ಎಂದು. ಬದಲಾದ ಜೀವನ ಕ್ರಮದಲ್ಲಿ ಒಂದು ಸಿದ್ಧ ಮಾದರಿ ಎಂಬುದಿಲ್ಲ. ಆಯುರ್ವೇದ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಕೃತಿ ಭಿನ್ನವಾಗಿರುವುದನ್ನು ಒತ್ತಿಹೇಳುತ್ತದೆ. ಕೆಲವರು ಬೇಗ ಮಲಗಿ ಬೇಗ ಎದ್ದರೆ ಇನ್ನು ಕೆಲವರು ತಡವಾಗಿ ಮಲಗಿ ತಡವಾಗಿ ಏಳುತ್ತಾರೆ. ಕೆಲವರಿಗೆ ಹಗುರ ಆಹಾರ ಒಗ್ಗಿದರೆ, ಇನ್ನು ಕೆಲವರಿಗೆ ಲಘು ಆಹಾರ ಆಗಿಬರುತ್ತದೆ. ಆದಾಗ್ಯೂ ಕೆಲವು ದಿನಚರಿಗಳು ಎಲ್ಲರಿಗೂ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತವೆ. ಅವು ಯಾವುವು? ನೋಡೋಣ.

  • ಬೆಳಿಗ್ಗೆ ಏಳುವ ಅಭ್ಯಾಸ – ಕೆಲವರು ರಾತ್ರಿ ಒಂದೆರಡು ಗಂಟೆಯವರೆಗೆ ಎಚ್ಚರವಿರುತ್ತಾರೆ. ಬೆಳಗ್ಗೆ 10-11 ಗಂಟೆಯವರೆಗೂ ಮಲಗಿರುತ್ತಾರೆ. ಆಯುರ್ವೇದದ ಪ್ರಕಾರ ಎಷ್ಟೇ ಹೊತ್ತಿಗೆ ಮಲಗಿರಲಿ, ಬೆಳಗ್ಗೆ 8 ಗಂಟೆಯ ಒಳಗೆ ಎದ್ದೇಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಆದ್ದರಿಂದ ಎಷ್ಟೇ ತಡವಾಗಿ ಮಲಗಿದರೂ ಬೆಳಗು ಮುಗಿದು ಮಧ್ಯಾಹ್ನ ಆಗುವುದರೊಳಗೆ ಎದ್ದೇಳಲೇಬೇಕು.
  • ಮಲಮೂತ್ರಗಳ ವಿಸರ್ಜನೆ – ಕೆಲಸ ಬಹಳ ಮುಖ್ಯ ನಿಜ. ಕೆಲವರು ತಮ್ಮ ಕೆಲಸ, ಕಾರ್ಯಗಳ ನಡುವೆ ಮಲ-ಮೂತ್ರಗಳನ್ನು ಕಟ್ಟಿಕೊಳ್ಳುತ್ತಾರೆ. ಒತ್ತಡ ಬಂದರೂ ಎದ್ದು ಹೋಗಿ ವಿಸರ್ಜಿಸುವುದಿಲ್ಲ. ಇದರಿಂದ ದೇಹದೊಳಗಿನ ವಿಷ ಹಾಗೆಯೇ ಉಳಿದು ಅಲರ್ಜಿ, ಪಿತ್ತವಿಕಾರ, ರಕ್ತದೋಷ ಮೊದಲಾದ ತೊಂದರೆಗಳು ಉಂಟಾಗುತ್ತವೆ. ಸೂಕ್ತ ಸಮಯದಲ್ಲಿ ಒತ್ತಡಗಳನ್ನು ತಡೆಹಿಡಿಯದೆ ಆಗಿಂದಾಗೆ ಖಾಲಿ ಮಾಡುವುದು ಆರೋಗ್ಯಕ್ಕೆ ಉತ್ತಮ.
  • ಹಲ್ಲುಜ್ಜುವುದು – ಬೆಳಿಗ್ಗೆ, ರಾತ್ರಿ ಎರಡೂ ವೇಳೆ ಹಲ್ಲುಜ್ಜುವವರಿದ್ದಾರೆ. ಅದರಂತೆ ಎರಡು ಮೂರು ದಿನಗಳಿಗೊಮ್ಮೆ ಹಲ್ಲುಜ್ಜುವವರಿದ್ದಾರೆ. ಏನೇ ಆಗಲಿ ಪ್ರತಿ ದಿನ ಒಂದು ಬಾರಿಯಾದರೂ ಹಲ್ಲುಜ್ಜುವುದು ಆರೋಗ್ಯಕ್ಕೆ ಉತ್ತಮ. ಬಾಯಿಯ ಆರೋಗ್ಯ ದೇಹದೊಳಗೆ ಆಹಾರ ಕೊಂಡೊಯ್ಯುವ ಭಾಗಗಳ ಆರೋಗ್ಯಕ್ಕೂ ಅತ್ಯವಶ್ಯಕ. ಪ್ರತಿದಿನ ಬೆಳಿಗ್ಗೆ ಎದ್ದು ಒಂದು ದೊಡ್ಡ ಲೋಟ ತಣ್ಣೀರು ಕುಡಿಯಬೇಕು. ಬಾಯೊಳಗಿನ ಒಳ್ಳೆಯ ಬ್ಯಾಕ್ಟೀರಿಯಾ ಹೊಟ್ಟೆಗೆ ಹೋದ ನಂತರ ಸರಿಯಾಗಿ ಹಲ್ಲುಜ್ಜಬೇಕು.
  • ನಾಲಿಗೆ ತೊಳೆಯುವುದು – ನಾಲಿಗೆ ದೇಹದ ಆರೋಗ್ಯ ಸೂಚಕ. ಬಿಳಿ ಹಿಟ್ಟು ಹೊಯ್ದಂತೆ ಕಾಣುವ ನಾಲಗೆ, ದಪ್ಪವಾದ ನಾಲಗೆ ರುಚಿ ಕಳೆದುಕೊಳ್ಳುತ್ತದೆ. ಗಂಟಲಿನ ಸೋಂಕಿಗೆ ಆಹ್ವಾನ ಕೊಡುತ್ತದೆ. ಅಲರ್ಜಿ, ಕಫದ ಸೋಂಕಿಗೆ ಕಾರಣವಾಗುತ್ತದೆ. ಪ್ರತಿನಿತ್ಯ ಹಲ್ಲುಜ್ಜಿದ ಮೇಲೆ ನಾಲಗೆ ತೊಳೆದುಕೊಳ್ಳುವುದು ಅತ್ಯುತ್ತಮ. ಬಾಯಿ ವಾಸನೆ ಸಹ ಕಡಿಮೆಯಾಗಿ ವ್ಯಕ್ತಿಗೂ ಸುತ್ತಲಿನವರಿಗೂ ಆಹ್ಲಾದಕರ ಅನುಭವ ದೊರೆಯುತ್ತದೆ.
  • ಮುಖ ತೊಳೆಯುವುದು – ಹಲ್ಲುಜ್ಜಿ ನಾಲಿಗೆ ತೊಳೆದ ನಂತರ ಬಿಸಿನೀರಿನಿಂದ ಬಾಯಿ ಮುಕ್ಕಳಿಸಬೇಕು. ನಂತರ ಒಂದು ಚಮಚ ಎಳ್ಳೆಣ್ಣೆಯನ್ನು ಬಾಯಿಗೆ ಹಾಕಿ ಎರಡು ನಿಮಿಷ ಬಾಯಲ್ಲಿಟ್ಟುಕೊಂಡು ನಂತರ ಉಗಿಯಬೇಕು.  ಪ್ರತಿನಿತ್ಯ ಎರಡು ಬಾರಿ ತಣ್ಣೀರಿನಿಂದ ಮುಖ ತೊಳೆಯಬೇಕು. ಇದರಿಂದ ಮುಖದಲ್ಲಿನ ಗುಳ್ಳೆಗಳು ಕಡಿಮೆಯಾಗುತ್ತವೆ. ಚರ್ಮ ಮೃದುವಾಗುತ್ತದೆ.
  • ಕಣ್ಣುಗಳನ್ನು ತೊಳೆಯುವುದು – ಕಣ್ಣಿನ ಬುಡದಲ್ಲಿ ಕಟ್ಟಿರಬಹುದಾದ ಬಡ್ಡು, ಧೂಳು, ಹೊಗೆ ಆಗಿಂದಾಗ್ಗೆ ಸ್ವಚ್ಛವಾಗಬೇಕು. ನಿಯಮಿತವಾಗಿ ಕಣ್ಣುಗಳನ್ನು ತೊಳೆದುಕೊಳ್ಳುವುದರಿಂದ ಮಡ್ರಾಸ್ ಐನಂತಹ ಕಾಯಿಲೆಗಳಿಂದ ಹಿಡಿದು ಸೂಕ್ಷ್ಮ ಅಲರ್ಜಿಯವರೆಗೆ ತಡೆಗಟ್ಟಬಹುದು. ಕಣ್ಣುಗಳನ್ನು ಶುದ್ಧವಾದ ನೀರು, ಪನ್ನೀರು ಮತ್ತು ತ್ರಿಫಲಾ ಕಷಾಯಗಳಿಂದ ಸಹ ತೊಳೆದುಕೊಳ್ಳಬಹುದು.
  • ಅಭ್ಯಂಗ – ದೇಹದಲ್ಲಿ ವಾತ ಹೆಚ್ಚಾದರೆ ಉಳಿದೆರಡು ಪ್ರಕೃತಿಗಳಲ್ಲೂ ವ್ಯತ್ಯಾಸವಾಗುತ್ತದೆ. ದೇಹಕ್ಕೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚಬೇಕು. ದೇಹ ಎಣ್ಣೆಯನ್ನು ಹೀರಿದ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಬೇಕು. ದೇಹದಲ್ಲಿ ವಾತ ಪ್ರಕೃತಿ ಸಮತೋಲನದಲ್ಲಿದ್ದು ಮಂಡಿನೋವು, ಸೊಂಟನೋವುಗಳಂತವು ದೂರವಿರುತ್ತವೆ. ಕಫ, ಪಿತ್ತದಂತಹ ತೊಂದರೆಗಳೂ ಸಹ ಉಂಟಾಗುವುದಿಲ್ಲ. ಪ್ರತಿನಿತ್ಯ ಸಾಧ್ಯವಿಲ್ಲದಿದ್ದರೆ ವಾರದ ರಜೆಯ ದಿನವಾದರೂ ಅಭ್ಯಂಗ (ಎಣ್ಣೆ ಸ್ನಾನ) ಮಾಡುವುದು ಅತ್ಯುತ್ತಮ.
  • ವ್ಯಾಯಾಮ, ದೈಹಿಕ ಚಟುವಟಿಕೆ – ವಾರಕ್ಕೆ ಕನಿಷ್ಠ 78 ಗಂಟೆಗಳಾದರೂ ದೈಹಿಕ ಚಟುವಟಿಕೆ ಮಾಡಬೇಕು. ಪ್ರತಿನಿತ್ಯ 10 ಗಂಟೆಗಳ ದೈಹಿಕ ಚಟುವಟಿಕೆ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ. ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ ಜೀವನಶೈಲಿಯಾಗಿದೆ. ಮನೆಕೆಲಸ, ತೋಟ-ಕೈತೋಟದ ಕೆಲಸ, ವ್ಯಾಯಾಮ, ನಡಿಗೆ, ಆಟ ಇವೆಲ್ಲ ದೇಹ ಮತ್ತು ಮನಸ್ಸಿಗೆ ಜೀವನಪ್ರೀತಿಯನ್ನು ತುಂಬುತ್ತವೆ.
  • ಸ್ನಾನ – ಸ್ವಚ್ಛತೆಯ ಬಗ್ಗೆ ಎಷ್ಟೇ ಹೇಳಿದರೂ ಪ್ರತಿನಿತ್ಯ ಸ್ನಾನವೆಂದರೆ ಮೂಗು ಮುರಿಯುವವರು ಇದ್ದಾರೆ. ದಿನದಲ್ಲಿ ಯಾವಾಗ್ಯಾವಾಗಲೋ ಸ್ನಾನ ಮಾಡುತ್ತಾರೆ. ಬೆಳಿಗ್ಗೆ 9 ಗಂಟೆಯ ಒಳಗೆ ಸಂಜೆ 6 ಗಂಟೆಯ ನಂತರ ಸ್ನಾನ ಮಾಡಿದರೆ ದೇಹಕ್ಕೆ ಹಗುರತೆ ನೀಡುತ್ತದೆ. ದೇಹದ ಕಲ್ಮಷಗಳೆಲ್ಲ ಕಳೆದು ಕೆಲಸ ಮಾಡಲು ಉತ್ತೇಜನ ನೀಡುತ್ತದೆ. ರಾತ್ರಿಯಲ್ಲಿ ನಿದ್ದೆ ಚೆನ್ನಾಗಿ ಬರುತ್ತದೆ.
  • ದೇವತಾರ್ಚನೆ – ಭಗವಂತನ ಧ್ಯಾನ – ಪ್ರತಿನಿತ್ಯ ದೇಹ ಶುದ್ಧಿಯಾದ ನಂತರ ದೇವರು/ಪ್ರಕೃತಿಯ ಅಗಾಧತೆಯನ್ನು ನೆನೆದು ಅದಕ್ಕೊಂದು ಕೃತಜ್ಞತೆಯನ್ನು ಸಲ್ಲಿಸಬೇಕು. ಇದು ಅಂತರಂಗದಲ್ಲಿ ನಕಾರಾತ್ಮಕ ಭಾವನೆಗಳು ಬರದಂತೆ ತಡೆಯುತ್ತದೆ. ಮನೋದೈಹಿಕ ಕಾಯಿಲೆಗಳನ್ನು ದೂರವಿಡುತ್ತದೆ. ಮನಸ್ಸಿನಲ್ಲಿ ಪ್ರತಿಯೊಂದಕ್ಕೂ ಕೃತಜ್ಞತಾ ಭಾವನೆ ಮೂಡುವುದು, ಎಲ್ಲರೂ ನಮ್ಮವರೆಂದುಕೊಳ್ಳುವುದು ಇಂತಹ ಧ್ಯಾನ ಮತ್ತು ಪೂಜೆಯ ಭಾಗವಾಗಬೇಕು.
  • ಪೌಷ್ಟಿಕ ಆಹಾರ ಸೇವನೆ – ಪ್ರತಿನಿತ್ಯ ವ್ಯಕ್ತಿಯ ಜೀವನಶೈಲಿ , ಚಟುವಟಿಕೆಗೆ ತಕ್ಕಂತೆ ಪೌಷ್ಟಿಕ ಆಹಾರ ಸೇವಿಸುವುದು ಅತ್ಯವಶ್ಯಕ. ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎನ್ನುವದರ ಜೊತೆಗೆ ಎಷ್ಟು ಪೌಷ್ಟಿಕವಾಗಿರಬೇಕು ಎನ್ನುವುದು ಬಹಳ ಮುಖ್ಯ. ಅಪೌಷ್ಟಿಕತೆಯಿಂದಲೇ ಬಹುತೇಕ ಅನಾರೋಗ್ಯಗಳು ದೇಹದೊಳಗೆ ಲಗ್ಗೆಯಿಡುತ್ತವೆ. ಮೊದಲು ಹೇಳಿದ ಅಂಶಗಳನ್ನು ನಿಮಗೆ ಪಾಲಿಸಲು ಸಾಧ್ಯವಾಗುತ್ತಿಲ್ಲವೆಂದರೆ ನಿಮಗೆ ಅಪೌಷ್ಟಿಕತೆಯ ತೊಂದರೆ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ಆರೋಗ್ಯವಂತ ವ್ಯಕ್ತಿಯ ಬೆಳಗು ಉತ್ಸಾಹ, ಉಲ್ಲಾಸದಿಂದ ಕೂಡಿರುತ್ತದೆ. ಯಾವುದೇ ಸೋಮಾರಿತನ ಅವರನ್ನು ಕಾಡುವುದಿಲ್ಲ. ಆರೋಗ್ಯದ ಮೊದಲ ಘೋಷಣೆ “ಉತ್ತಮವಾಗಿದ್ದನ್ನು ಚೆನ್ನಾಗಿ ತಿನ್ನು ಮತ್ತು ಒಳ್ಳೆಯದನ್ನು ಯೋಚಿಸು”.
  • ಉದ್ಯೋಗ – ಹಣದ ಅವಶ್ಯಕತೆ ಇರಲಿ, ಇಲ್ಲದಿರಲಿ. ವ್ಯಕ್ತಿ ಹೆಣ್ಣಾಗಲಿ, ಗಂಡಾಗಲಿ ಕೆಲಸ ಮಾಡಬೇಕು. ಕೆಲಸ ವ್ಯಕ್ತಿಗೆ ಬದುಕಿರುವ ಭಾವನೆ ನೀಡುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಸಾಮಾಜಿಕ ಸಾಮರಸ್ಯಕ್ಕೆ ಕಾರಣವಾಗಿದೆ. ದಿನನಿತ್ಯ ತಪ್ಪದೆ ಹಣ ತರುವ/ತರದಿರುವ ಯಾವುದೇ ಉದ್ಯೋಗ ಆರೋಗ್ಯವಾಗಿರುವಲ್ಲಿ ಸಹಾಯಕಾರಿ.
  • ನಿದ್ರೆ – ಕೊನೆಯದಾಗಿ ನಿದ್ರೆ. ಈ ನಿದ್ರೆಯ ಮಹತ್ವ ಇತ್ತೀಚಿನ ದಿನಗಳಲ್ಲಿ ಯಾರಿಗೂ ಹೇಳಬೇಕಾದ ಅಗತ್ಯ ಇಲ್ಲ. ಪ್ರತಿಯೊಬ್ಬರೂ ದೈನಂದಿನ ಕೆಲಸದ ಒತ್ತಡದಿಂದ ಮೇಲೆ ಹೇಳಿದ ಅಂಶಗಳಲ್ಲಿ ಬಹುತೇಕವನ್ನು ಪಾಲಿಸುವುದಿಲ್ಲ. ರಾತ್ರಿ ಸೂಕ್ತ ನಿದ್ರೆ ಬರುವುದಿಲ್ಲ. ಇದರಿಂದಾಗಿ ರಸದೂತಗಳಲ್ಲಿ ಏರುಪೇರಾಗುತ್ತದೆ. ದೀರ್ಘಕಾಲಿಕ , ವಂಶಪಾರಂಪರಿಕ ಅನಾರೋಗ್ಯಗಳು ವಯಸ್ಸಾಗುವ ಮೊದಲೇ ಕಾಲಿಡುತ್ತವೆ. ಇದನ್ನು ತಪ್ಪಿಸಲು ಪ್ರತಿನಿತ್ಯ ಸರಿಯಾಗಿ ಒಂದೇ ಸಮಯಕ್ಕೆ ಹಾಸಿಗೆ ಮೇಲೆ ಮಲಗಿ, ಚೆನ್ನಾಗಿ ನಿದ್ರೆ ಮಾಡಬೇಕು.

ಈ ರೀತಿ ನೀವು ದಿನಚರಿ ಪಾಲಿಸಿದ್ದೇ ಆದಲ್ಲಿ ಯಾವ ಕಾಯಿಲೆಯೂ ನಿಮ್ಮ ಬಳಿ ಸುಳಿಯಲಾರದು. ಆರೋಗ್ಯವಂತ ಬದುಕು ಆರೋಗ್ಯವಂತ ದೇಹದ ಸಾಧನದಿಂದ ಮಾತ್ರ ಸಾಧ್ಯ. ಅಲ್ಲವೆ?

Author

Leave a Reply

Your email address will not be published. Required fields are marked *