ಬೆಂಗಳೂರು : ಮಾಜಿ ಶಾಸಕ ಉಡುಪಿಯ ರಘುಪತಿ ಭಟ್ ಅವರಿಗೆ ಬಿಜೆಪಿ ಪಕ್ಷ ಕೈಕೊಟ್ಟಿದೆ. ಇದರಿಂದ ಅವರು ದುಃಖ ತಪ್ತರಾಗಿದ್ದಾರೆ. ತಮ್ಮ ರಾಜಕೀಯ ಬದುಕು ಮುಗಿಯಿತೇನೋ ಎಂಬ ಚಿಂತೆ ಅವರನ್ನು ಕಾಡುತ್ತಿದೆ.
ಉಡುಪಿ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಿದ್ದ ಅವರಿಗೆ ಕಳೆದ ಬಾರಿ ಟಿಕೆಟ್ ತಪ್ಪಿಸಲಾಯಿತು. ಆಗ ವಿಧಾನ ಪರಿಷತ್ತಿಗೆ ಪದವೀಧರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತಂತೆ. ಈಗ ಅದೂ ಕೈ ತಪ್ಪಿದೆ. ಇದರಿಂದ ರಘುಪತಿ ಭಟ್ ಅವರು ವಿಚಲಿತರಾಗಿದ್ದಾರೆ. ಈ ಕುರಿತು ತಮ್ಮ ದುಃಖವನ್ನು ಅವರು ಹೊರ ಹಾಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ 40 ದಿನಗಳ ಕಾಲ ಶಿವಮೊಗ್ಗ ಕ್ಷೇತ್ರದಲ್ಲಿ ಕೆಲಸ ಮಾಡಿದ್ದನ್ನು ಅವರು ನೆನಪು ಮಾಡಿಕೊಂಡಿದ್ದಾರೆ.
ವಿಧಾನ ಪರಿಷತ್ ಟಿಕೆಟ್ ಸಿಗುತ್ತದೆ ಎಂದು ನಂಬಿ ಕೆಲಸ ಮಾಡಿದ್ದೇನೆ. ಪದವೀಧರರ ನೋಂದಣಿ ಮಾಡಿಸಿದ್ದೇನೆ. ಈಗ ಟಿಕೆಟ್ ನೀಡದಿರುವುದು ನನ್ನನ್ನು ವಿಚಲಿತನನ್ನಾಗಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಬೆಂಬಲಿಗರ ಜೊತೆ ಈ ಬಗ್ಗೆ ಚರ್ಚೆ ನಡೆಸುವುದಾಗಿಯೂ ಅವರು ಹೇಳಿದ್ದಾರೆ. ಚರ್ಚೆ ಮಾಡಿ ಏನು ಮಾಡುತ್ತಾರೆ ತಿಳಿಯದು. ಪಕ್ಷ ತೊರೆಯುತ್ತಾರೆಯೆ ಅಥವಾ ರಾಜಕೀಯ ನಿವೃತ್ತಿಯೆ ಗೊತ್ತಿಲ್ಲ.







