ಧಾರವಾಡದಲ್ಲಿ ಮಳೆ ಕೊರತೆಯಿಂದ ಬೆಳೆ ಸಂಕಷ್ಟ: ರೈತರ ಸಮಸ್ಯೆ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದ ಸಚಿವ ಸಂತೋಷ ಲಾಡ್
ಧಾರವಾಡ, ಆಗಸ್ಟ್ 6: ಮಳೆ ಕೊರತೆಯಿಂದ ಧಾರವಾಡ ಜಿಲ್ಲೆಯ ವಿವಿಧ ಬೆಳೆಗಳು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ ಧಾರವಾಡ ತಾಲೂಕಿನ ಹಾರೋಬೆಳವಡಿ ಹಾಗೂ ನವಲಗುಂದ ತಾಲೂಕಿನ ಶಿರೂರ, ಶಿರಕೋಳ, ಮೊರಬ ಮತ್ತು ತಿರ್ಲಾಪುರ ಗ್ರಾಮಗಳ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಬೆಳೆಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.
2.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
ಈ ವರ್ಷ ಜಿಲ್ಲೆಯ ಸುಮಾರು 2.90 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿಯಲ್ಲಿ ಶೇ.96ರಷ್ಟು, ಅಂದರೆ 2.80 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಸುಮಾರು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಮತ್ತು ಉದ್ದು, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಜೊತೆಗೆ ಸೋಯಾಬೀನ್, ಹತ್ತಿ, ಕಡಲೆಕಾಯಿ, ಕಬ್ಬು ಹಾಗೂ ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿವೆ ಎಂದು ಸಚಿವರು ತಿಳಿಸಿದರು.
ಹೊರನೋಟಕ್ಕೆ ಹಸಿರು, ಆದರೆ ಬೆಳವಣಿಗೆ ಕುಂಠಿತ
ಹೊಲಗಳಲ್ಲಿ ಬೆಳೆ ಹಸಿರಾಗಿ ಕಾಣುತ್ತಿದ್ದರೂ ಅಗತ್ಯ ಸಮಯದಲ್ಲಿ ಮಳೆ ಸುರಿಯದ ಕಾರಣ ಬೆಳೆಗಳ ಬೆಳವಣಿಗೆ ಸಮರ್ಪಕವಾಗಿಲ್ಲ. ಕೆಲವು ಕಡೆ ಹೆಚ್ಚು ಮಳೆಯಾಗಿದ್ದರೂ ಅದು ಸರಿಯಾದ ಸಮಯದಲ್ಲಿ ಮತ್ತು ಸಮಾನವಾಗಿ ಸುರಿಯದ ಕಾರಣ ಬೆಳೆಗಳಿಗೆ ಪ್ರಯೋಜನವಾಗಿಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ರೈತರು, ರೈತ ಮುಖಂಡರು ಹಾಗೂ ಕೃಷಿ ತಜ್ಞರೊಂದಿಗೆ ಚರ್ಚಿಸಿ ಸಮಗ್ರ ವರದಿ ಸಿದ್ಧಪಡಿಸಲಾಗುತ್ತಿದೆ. ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳೆ ವಿಮೆ ಹಾಗೂ ಪರಿಹಾರಕ್ಕೆ ಸರ್ಕಾರದ ಭರವಸೆ
ರೈತರಿಗೆ ಬೆಳೆ ವಿಮೆ ಸೇರಿದಂತೆ ಸರ್ಕಾರ ಮತ್ತು ವಿಮಾ ಸಂಸ್ಥೆಗಳ ಮೂಲಕ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು. ರೈತ ಮುಖಂಡರು ಮತ್ತು ಜನಪ್ರತಿನಿಧಿಗಳ ಸಲಹೆಗಳನ್ನೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಬರ ಘೋಷಣೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ತಾಂತ್ರಿಕ ಮಾನದಂಡಗಳಿದ್ದು, ಅವುಗಳ ಪ್ರಕಾರವೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪ್ರಸ್ತುತ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೂ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
“ಹೆಸರು, ಹತ್ತಿ ಬೆಳೆ ಒಳಗೆ ಖಾಲಿ” – ಶಾಸಕ ಎನ್.ಎಚ್. ಕೋನರೆಡ್ಡಿ
ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಅಲ್ಪ ಪ್ರಮಾಣದ ಮಳೆಯಾಗಿರುವ ಕಾರಣ ಹೆಸರು ಹಾಗೂ ಹತ್ತಿ ಬೆಳೆಗಳು ಹೊರನೋಟಕ್ಕೆ ಹಸಿರಾಗಿ ಕಂಡರೂ ಒಳಗೆ ಬೆಳೆ ಇಲ್ಲದಂತಾಗಿದೆ ಎಂದು ಹೇಳಿದರು.
“ಹೆಸರು ಬೆಳೆ ಹೂ ಬಿಡದೆ ವಯಸ್ಸು ಮುಗಿಯುವ ಸ್ಥಿತಿಯಲ್ಲಿದೆ. ಹತ್ತಿ ಬೆಳೆಯಲ್ಲಿ ಸಾಮಾನ್ಯವಾಗಿ ಹೆಚ್ಚು ಕಾಯಿ ಬರಬೇಕಾದರೆ ಈಗ ಕೇವಲ 5ರಿಂದ 10 ಕಾಯಿಗಳು ಮಾತ್ರ ಬರುತ್ತಿವೆ. ಆದ್ದರಿಂದ ಪರಿಹಾರ ನೀಡುವಾಗ ಸರ್ಕಾರ ಮಾನದಂಡಗಳನ್ನು ಸ್ವಲ್ಪ ಸಡಿಲಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಂಕಿ-ಅಂಶಗಳನ್ನು ಪರಿಗಣಿಸಬೇಕು” ಎಂದು ಅವರು ಮನವಿ ಮಾಡಿದರು.
ಬೆಳೆ ವಿಮೆ ಸಮಸ್ಯೆಗೂ ಪರಿಹಾರಕ್ಕೆ ಪ್ರಯತ್ನ
ಕಳೆದ ಎರಡು ವರ್ಷಗಳಿಂದ ರೈತರಿಗೆ ಬೆಳೆ ವಿಮೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆತಂಕ ವ್ಯಕ್ತವಾಗಿದೆ. ಖಾಸಗಿ ವಿಮಾ ಕಂಪನಿಗಳಿಗಿಂತ ರೈತರಿಗೆ ಹೆಚ್ಚಿನ ಪ್ರಯೋಜನವಾಗುವ ರೀತಿಯಲ್ಲಿ ವ್ಯವಸ್ಥೆ ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಕೋನರೆಡ್ಡಿ ಹೇಳಿದರು.
ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ದೊರಕಿಸಲು ವಿಶೇಷ ಪ್ರಯತ್ನ ಮುಂದುವರಿಸಲಾಗುವುದು ಎಂದರು.
ಬೆಳೆ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ನವಲಗುಂದ ತಹಶೀಲ್ದಾರ್ ಸುಧೀರ ಸಾಹುಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.
ಕುಂದಗೋಳ ಕ್ಷೇತ್ರದಲ್ಲೂ ಬೆಳೆ ಹಾನಿ ಪರಿಶೀಲನೆ
ಧಾರವಾಡ ಜಿಲ್ಲೆಯ ನವಲಗುಂದ ಭಾಗದ ಪರಿಶೀಲನೆಯ ಬಳಿಕ ಸಚಿವ ಸಂತೋಷ ಲಾಡ್ ಅವರು ಕುಂದಗೋಳ ವಿಧಾನಸಭಾ ಕ್ಷೇತ್ರದ ಶಿರಗುಪ್ಪಿ, ಯರಗುಪ್ಪಿ, ಮುಲ್ಲೊಳ್ಳಿ ಹಾಗೂ ಯೆರಿನಾರಾಯಣಪುರ ಗ್ರಾಮಗಳ ರೈತರ ಹೊಲಗಳಿಗೂ ಭೇಟಿ ನೀಡಿ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.
ಈ ಪ್ರದೇಶಗಳಲ್ಲಿ ರೈತರು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರೂ, ಮಳೆ ಕೊರತೆಯಿಂದ ಬೆಳೆಗಳು ಸಮರ್ಪಕವಾಗಿ ಬೆಳೆಯದೆ ಮುದುಡಲಾರಂಭಿಸಿವೆ. ಪರಿಣಾಮ ರೈತರಿಗೆ ಭಾರೀ ಆರ್ಥಿಕ ನಷ್ಟವಾಗುವ ಆತಂಕ ಎದುರಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಕುಂದಗೋಳ ಕ್ಷೇತ್ರದಲ್ಲಿ ಉಂಟಾಗಿರುವ ಅನಾವೃಷ್ಟಿ ಮತ್ತು ಬೆಳೆ ಹಾನಿಯ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಅದರ ಆಧಾರದ ಮೇಲೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.
ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






