ಧಾರವಾಡ: ಪಂಚ ಗ್ಯಾರಂಟಿ ಯೋಜನಾ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ

ಗ್ಯಾರಂಟಿ ಯೋಜನೆಗಳ ಮೂಲಕ ಜನರ ಹಣವನ್ನು ಜನರಿಗೇ ಹಿಂತಿರುಗಿಸಲಾಗುತ್ತಿದೆ

– ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್

ಧಾರವಾಡ, ಜ. 05: ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ಸುಮಾರು ₹60 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಐದು ವರ್ಷಗಳಲ್ಲಿ ಒಟ್ಟು ₹3 ಲಕ್ಷ ಕೋಟಿ ಹಣವನ್ನು ಜನರ ಕಲ್ಯಾಣಕ್ಕಾಗಿ ವ್ಯಯಿಸಲಾಗುತ್ತಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರು ಹೇಳಿದರು.

ಇಲ್ಲಿನ ಕೆ.ಸಿ.ಡಿ ಕಾಲೇಜು ಆವರಣದ ಶ್ರೀ ಅಣ್ಣಾಜಿರಾವ ಶಿರೂರ (ಸೃಜನಾ) ರಂಗಮಂದಿರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಮೂಲಕ ಜನರೇ ಪಾವತಿಸುವ ತೆರಿಗೆಯ ಹಣವನ್ನು ಜನರಿಗೇ ಹಿಂತಿರುಗಿಸುವ ಕೆಲಸ ನಡೆಯುತ್ತಿದೆ. ಮಹಿಳೆಯರ ಅವಿರತ ದುಡಿಮೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಗೃಹ ಲಕ್ಷ್ಮಿ ಯೋಜನೆ ಮೂಲಕ ನೇರವಾಗಿ ಹಣವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಉಳುವವನೇ ಭೂಮಿಯ ಒಡೆಯ ಯೋಜನೆ ಜಾರಿಗೆ ಬಂದಿದ್ದನ್ನು ನೆನಪಿಸಿದ ಸಚಿವರು, ಆಹಾರ ಭದ್ರತಾ ಕಾಯ್ದೆಯ ಮೂಲಕ ದೇಶದ ಸುಮಾರು 70 ಕೋಟಿ ಜನರಿಗೆ ಅನ್ನದ ಭದ್ರತೆ ಒದಗಿಸಲಾಗಿದೆ ಎಂದರು. ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ವಿವಿಧ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಡಿ ಇದುವರೆಗೆ 600 ಕೋಟಿ (ಟಿಕೆಟ್ ಲೆಕ್ಕದಲ್ಲಿ) ಗೂ ಹೆಚ್ಚು ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿ, ರಾಜ್ಯದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮಾರ್ಚ್ 8ರಂದು ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಮಹಿಳೆಯರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನೆನೆಯಬೇಕು ಎಂದು ಸಚಿವ ಲಾಡ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗ್ಯಾರಂಟಿ ಯೋಜನೆಗಳ ಲಾಭ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಕೆಲಸ ಮಾಡುತ್ತಿದೆ ಎಂದರು. ಧಾರವಾಡ ಜಿಲ್ಲೆಯಲ್ಲಿ ಶೇ. 98 ರಷ್ಟು ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲೇ ಧಾರವಾಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಇದುವರೆಗೆ ಸುಮಾರು ಒಂದು ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ನೇರ ಹಣ ಸಂದಾಯ ಮಾಡಲಾಗಿದೆ. ಶಕ್ತಿ ಯೋಜನೆಯಡಿ 638 ಕೋಟಿ (ಟಿಕೆಟ್ ಲೆಕ್ಕದಲ್ಲಿ) ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದು, ಈ ಯೋಜನೆಗೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗಳಿಂದ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳು ಲಭಿಸಿವೆ. ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮತ್ತು ಯುವ ನಿಧಿ ಯೋಜನೆಗಳು ಸಮರ್ಪಕವಾಗಿ ಜಾರಿಯಲ್ಲಿವೆ ಎಂದು ಅವರು ವಿವರಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಐದು ವರ್ಷಗಳ ಕಾಲ ನಿರಂತರವಾಗಿ ಜಾರಿಗೊಳಿಸಲಿದೆ ಎಂದರು. ಮಹಿಳೆಯರ ಅನುಭವಗಳು ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಧಾರವಾಡ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಕುರಿತು ಡಾ. ವಾಸು ಎಚ್. ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಸೈಯದ್ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ, ವಿಧಾನ ಪರಿಷತ್ ಸದಸ್ಯ ಎಫ್.ಹೆಚ್. ಜಕ್ಕಪ್ಪನವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಗ್ಯಾರಂಟಿ ಯೋಜನೆಗಳ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Author

  • ಶೀಲಾ ಭಟ್ ಅವರಿಗೆ ಪತ್ರಿಕೋದ್ಯಮದಲ್ಲಿ ೨೨ ವರ್ಷಗಳ ಅನುಭವವಿದೆ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕಿ, ವರದಿಗಾರ್ತಿ , ಕಾರ್ಯಕ್ರಮ ನಿರ್ದೇಶನ ಮತ್ತು ಕಾರ್ಯಕ್ರಮ ನಿರ್ವಹಣೆಯ ಕೆಲಸ ಮಾಡಿದ್ದಾರೆ. ಸಮಾಜ, ರಾಜಕೀಯ, ವೈದ್ಯಕೀಯ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಆಳವಾದ ಆಸಕ್ತಿ ಹೊಂದಿರುವ ಅವರು, ನಿರಂತರ ಕಲಿಕೆಯನ್ನು ಬದುಕಿನ ಭಾಗವಾಗಿ ನೋಡುತ್ತಾರೆ.

error: