ಪ್ರಕಾಶರಾಜ್, ಕಮಲ್ ಹಾಸನ್ ಗೆ ಶೇ.1ರಷ್ಟು ಜನರೂ ಬೆಂಬಲಿಸಲ್ಲ: ಪ್ರಹ್ಲಾದ ಜೋಶಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಚಿತ್ರ ನಟ ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಮಾಡಿರುವ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ

ಹುಬ್ಬಳ್ಳಿ: ಚಿತ್ರ ನಟರಾದ ಪ್ರಕಾಶ ರಾಜ್ ಮತ್ತು ಕಮಲ್ ಹಾಸನ್ ಅವರನ್ನು ಶೇ.1 ರಷ್ಟು ಜನರೂ ಬೆಂಬಲಿಸುವುದಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು , ಈ ಇಬ್ಬರೂ ನಟರು ನೀಡಿರುವ ಹೇಳಿಕೆಗಳಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲವೆಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯೊಂದೇ 400 ಸ್ಥಾನಗಳನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂದಿರುವ ಪ್ರಕಾಶ ರಾಜ್ ಹೇಳಿಕೆಗೆ, ಪ್ರಕಾಶ ರಾಜ್ ಒಬ್ಬ ಅಹಂಕಾರದ ಸ್ವಭಾವ ಉಳ್ಳ ವ್ಯಕ್ತಿ ಎಂದು ಟೀಕಿಸಿದರು.

ಬಿಜೆಪಿ ಇಂದು 18 ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿದೆ. ಆದರೆ, ಪ್ರಕಾಶ ರಾಜ್ ಮತ್ತು ಕಮಲ್ ಹಾಸನ್ ಅವರಿಗೆ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಿಲ್ಲ ಸಚಿವ ಜೋಶಿ ತಿರುಗೇಟು ನೀಡಿದರು.

ಪ್ರಕಾಶ್ ಒಬ್ಬ ಅತೃಪ್ತ ಜೀವಿ. ರಾಜಕಾರಣದಲ್ಲಿ ಅವರ ಸ್ಥಾನಮಾನ ಏನು? ಎಂದು ಜೋಶಿ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಚಿತ್ರ ನಟ ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಮಾಡಿರುವ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದೂ ಹೇಳಿದರು.

ಇನ್ನೊಂದೆಡೆ, ತಮಿಳುನಾಡಿನ ಜನತೆ ಬಿಜೆಪಿಯನ್ನು ತಿರಸ್ಕರಿಸುವಂತೆ ನಟ ಕಮಲ್ ಹಾಸನ್ ಕರೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿ,’ಅವರು ಮಾಡುವ ಆರೋಪಗಳಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ ಎಂದರು.

Author

error: